Advertisement

ಪಾಲಿಕೆಯಲ್ಲಿ ಒಕ್ಕೊರಲಿನ ಸ್ವಚ್ಛತಾ ಮಂತ್ರ

02:43 PM May 16, 2017 | Team Udayavani |

ಹುಬ್ಬಳ್ಳಿ: ವಾರ್ಷಿಕ ಸುಮಾರು 36ಕೋಟಿ ರೂ. ವೆಚ್ಚ ಮಾಡಿದರೂ ಅವಳಿನಗರದಲ್ಲಿ ಸಮರ್ಪಕ ಸ್ವಚ್ಛತೆಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಒಕ್ಕೊರಲಿನಿಂದ ಒತ್ತಾಯಿಸಿದರು.

Advertisement

ಇದೇ ಸ್ಥಿತಿ ಮುಂದುವರಿದರೆ ಹೋರಾಟಕ್ಕಿಳಿಯಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಸದಸ್ಯ ವೀರಣ್ಣ ಸವಡಿ ಸ್ವಚ್ಛತೆ ಕೊರತೆ ಕುರಿತು ಗಮನ ಸೆಳೆಯುವ ಗೊತ್ತುವಳಿ ಮಂಡಿಸಿ ಮಾತನಾಡಿ, ಕೋಟ್ಯಂತರ ರೂ. ವೆಚ್ಚವಾದರೂ ಸ್ವಚ್ಛತೆ ಯಾಕಾಗುತ್ತಿಲ್ಲ. ಜನರಲ್ಲಿ ಜಾಗೃತಿ ತಂದು ಪಾಲಿಕೆ ಸದಸ್ಯರು-ಅಧಿಕಾರಿಗಳು ಜವಾಬ್ದಾರಿ ತೋರಬೇಕಾಗಿದೆ ಎಂದರು.

ವಿಪಕ್ಷ ನಾಯಕ ಸುಭಾಸ ಶಿಂಧೆ, ಕಾಂಗ್ರೆಸ್‌ನ ಗಣೇಶ ಟಗರಗುಂಟಿ, ಪ್ರಕಾಶ ಕ್ಯಾರಕಟ್ಟಿ, ದಶರಥ ವಾಲಿ, ಯಾಸಿನ್‌ ಹಾವೇರಿ ಪೇಟೆ, ಸಭಾನಾಯಕ ರಾಮಣ್ಣ ಬಡಿಗೇರ, ಬಿಜೆಪಿಯ ಸುಧೀರ ಸರಾಫ್, ಸಂಜಯ ಕಪಟಕರ್‌, ನಿರ್ಮಲಾ ಜವಳಿ, ಲಕ್ಷ್ಮಣ ಗಂಡಗಾಳೇಕರ, ಸತೀಶ ಹಾನಗಲ್ಲ, ಶಿವಾನಂದ ಮುತ್ತಣ್ಣವರ,

ಶಿವು ಮೆಣಸಿನಕಾಯಿ, ಜೆಡಿಎಸ್‌ ಸದಸ್ಯರಾದ ರಾಜಣ್ಣಾ ಕೊರವಿ, ಅಲ್ತಾಫ್ ಕಿತ್ತೂರು ಮಾತನಾಡಿ, ಪರಿಸರ ವಿಭಾಗ ಎಂಜನೀಯರ್‌ ಗಳು, ಆರೋಗ್ಯ ನಿರೀಕ್ಷಕರು ವಾರ್ಡ್‌ ಭೇಟಿ ಮಾಡುತ್ತಿಲ್ಲ. ಆಯುಕ್ತರು ಸಹ ಇತ್ತೀಚೆಗೆ ವಾರ್ಡ್‌ ವೀಕ್ಷಣೆ ಬಿಟ್ಟಿದ್ದು ತ್ಯಾಜ್ಯ ಸಾಗಣೆ ಸಮರ್ಪಕವಾಗಿ ಆಗುತ್ತಿಲ್ಲ. ಗುತ್ತಿಗೆ ಪೌರಕಾರ್ಮಿಕರ ಹಾಜರಾತಿ ಸಮರ್ಪಕವಾಗಿಲ್ಲ ಎಂದು ಆರೋಪಿಸಿದರು. 

100ರೊಳಗಿನ ಗುರಿ: ಪಾಲಿಕೆ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಸ್ವಚ್ಛತಾ ರ್‍ಯಾಂಕಿಂಗ್‌ನಲ್ಲಿ ಅವಳಿನಗರ 199ನೇ ಸ್ಥಾನ ಪಡೆದಿದ್ದು ಸಮಾಧಾನ ತಂದಿಲ್ಲ. ಮಹಾನಗರದಲ್ಲಿ ಪ್ರತಿ ದಿನ ಸುಮಾರು 350ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಬೇರೆ ನಗರಗಳಿಗೆ ಹೋಲಿಸಿದರೆ ನಮ್ಮದು ಪರವಾಗಿಲ್ಲ.

Advertisement

ಆದರೂ ಮುಂದಿನ ಬಾರಿ 100ನೇ ರ್‍ಯಾಂಕ್‌ ಒಳಗೆ ಬರಲು ಯತ್ನಿಸುವುದಾಗಿ ಹೇಳಿದರು. ತ್ಯಾಜ್ಯ ಸಂಗ್ರಹ, ಸಾಗಣೆಗೆ ಸುಮಾರು 45 ಗುತ್ತಿಗೆದಾರರಿದ್ದಾರೆ. ಅತ್ಯಾಧುನಿಕ ರೀತಿಯ ಘನತ್ಯಾಜ್ಯ ಸಂಗ್ರಹ, ಸಾಗಣೆ, ವಿಲೇವಾರಿ ಟೆಂಡರ್‌ ಕರೆಯಲು ಹಳೇ ಗುತ್ತಿಗೆದಾರರು ಒಪ್ಪದೆ ಕಾನೂನು ತರಕಾರು ತೆಗೆದಿದ್ದರೂ, ಅದನ್ನು ಪರಿಹರಿಸಲಾಗಿದೆ.

ಆರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗುತ್ತಿದ್ದು, ಒಂದು ತಿಂಗಳಲ್ಲಿ ಕೆಲಸದ  ಕಾರ್ಯಾದೇಶ ನೀಡಲಾಗುವುದು. ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಗ್ರಹ, ಸಾಗಣೆಗೆ ಅಗತ್ಯ ಆಧುನಿಕ ಸಲಕರಣೆ, ಎರಡು ಕಾಂಪೆಕ್ಟರ್‌ ವಾಹನ ಖರೀದಿಸಲಾಗುತ್ತಿದೆ. ತ್ಯಾಜ್ಯ ವಿಂಗಡಣೆಗೆ ಹಾಗೂ ಮನೆ ಮನೆ ಸಂಗ್ರಹಕ್ಕೆ 19 ಟಿಪ್ಪರ್‌ ಖರೀದಿಸಲಾಗಿದ್ದು, ಇನ್ನು 130 ಟಿಪ್ಪರ್‌ಗಳನ್ನು ಖರೀದಿಸಲಾಗುತ್ತಿದೆ ಎಂದರು. 

ಅವಳಿನಗರಕ್ಕೆ 54 ಆರೋಗ್ಯ ನಿರೀಕ್ಷಕರು ಬೇಕು. ಕೇವಲ 10 ಜನ ಮಾತ್ರ ಇದ್ದಾರೆ. ಆರೋಗ್ಯ ನಿರೀಕ್ಷಕರ ನೇಮಕದ ಪಟ್ಟಿ ಸಿದ್ಧಗೊಂಡಿದ್ದು, ಎರಡು ವಾರ್ಡ್‌ಗೆ ಒಬ್ಬ ನಿರೀಕ್ಷಕರನ್ನು ನಿಯೋಜಿಸಲಾಗುವುದು. ಸ್ವಚ್ಛತೆ ಹಾಗೂ ಮಳೆಗಾಲದ ತುರ್ತು ಕಾರ್ಯಕ್ಕೆ ವಲಯ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟು ಪಾಲನೆ ಆಗದ ಹೊರತು ಸ್ವಚ್ಛತೆ ಸಾಧ್ಯವಿಲ್ಲ.

ಪ್ಲಾಸ್ಟಿಕ್‌ ಮಾರಾಟ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ ಎಂದರು. ಅವಳಿನಗರವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸುವ ನಿಟ್ಟಿನಲ್ಲಿ 16,229ಶೌಚಾಲಯ ನಿರ್ಮಾಣ ಗುರಿಯಲ್ಲಿ 7,700 ಪೂರ್ಣಗೊಂಡಿದ್ದು, 6600 ಪ್ರಗತಿಯಲ್ಲಿವೆ. ಇನ್ನು 1800 ಆಗಬೇಕಾಗಿದೆ. ವಾರಕ್ಕೊಮ್ಮೆ ಮಹಾಪೌರರೊಂದಿಗೆ ತಾವು ವಾರ್ಡ್‌ ಭೇಟಿ ಮಾಡಿ ಪರಿಶೀಲಿಸುವುದಾಗಿ ಹೇಳಿದರು. ಮಹಾಪೌರ ಡಿ.ಕೆ. ಚವ್ಹಾಣ ಅವರು ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next