ವಿಟ್ಲ : ಬೀಳುವ ಹಂತದಲ್ಲಿದ್ದ ಒಂಟಿ ವೃದ್ಧೆಯೊಬ್ಬರ ಮನೆಯನ್ನು ಸ್ಥಳೀಯ ಸಾಮಾಜಿಕ ಸಂಘಟನೆ ಮಾಣಿ ಶಾರದಾ ಯುವ ವೇದಿಕೆಯ ಕಾರ್ಯಕರ್ತರು ದುರಸ್ತಿ ಮಾಡಿ ಮಾದರಿಯಾಗಿದ್ದಾರೆ.
ಮಾಣಿ ಗ್ರಾಮದ ವಿಟuಲಕೋಡಿಯಲ್ಲಿ ವಿಧವೆ ಗಿರಿಜಾ ಅವರು ಕಳೆದ ಹಲವಾರು ವರ್ಷಗಳಿಂದ ಹಂಚಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಇಬ್ಬರು ಪುತ್ರಿಯರನ್ನು ವಿವಾಹ ಮಾಡಿ ಕೊಡಲಾಗಿದೆ.
ಇಬ್ಬರು ಪುತ್ರರ ಪೈಕಿ ಒಬ್ಬ ಪುತ್ರ ಮೃತಪಟ್ಟಿದ್ದು, ಮತ್ತೂಬ್ಬ ನಾಪತ್ತೆ ಯಾಗಿದ್ದಾರೆ. ಪರಿಣಾಮವಾಗಿ ಗಿರಿಜಾ ಅವರು ಒಂಟಿಯಾಗಿ ಜೀವನ ಸಾಗಿ ಸುತ್ತಿದ್ದಾರೆ. ಮೊಮ್ಮಗಳು ಕೂಡ ಜತೆಯಲ್ಲಿದ್ದಾರೆ.
ಇವರು ವಾಸ ಮಾಡುವ ಹಂಚಿನ ಮನೆ ದುರಸ್ತಿ ಕಾಣದೇ ಹಲವು ವರ್ಷಗಳಾಗಿದ್ದು, ಹಂಚುಗಳು ಗಾಳಿಗೆ ಹಾರಿ ಹೋಗಿವೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಪಕ್ಕಾಸು ಶಿಥಿಲಗೊಂಡಿದೆ. ಈ ಬಾರಿಯ ಮಳೆಗೆ ಮನೆ ಸಂಪೂರ್ಣವಾಗಿ ನೆಲಕಚ್ಚುವ ಭೀತಿಯಲ್ಲಿತ್ತು. ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸುವುದಕ್ಕೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಯಿತು.
ಈ ಎಲ್ಲ ಸಮಸ್ಯೆಗಳನ್ನು ಮನಗಂಡ ಮಾಣಿಯ ಶಾರದಾ ಯುವ ವೇದಿಕೆಯ ಕಾರ್ಯಕರ್ತರು ಅವರ ಮನೆ ದುರಸ್ತಿ ಮಾಡಲು ನಿರ್ಧರಿಸಿದ್ದಾರೆ.ತಾವೇ ಹಣ ಕೂಡಿಸಿ, ಮನೆಯ ಮಹಡಿಯ ಪಕ್ಕಾಸು, ಹಂಚುಗಳನ್ನು ದುರಸ್ತಿಗೊಳಿಸಿದ್ದಾರೆ. ಮಾಣಿಯ ಶಾರದಾ ಯುವ ವೇದಿಕೆಯ ಕಾರ್ಯಕರ್ತರ ಈ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.