ಮಧುಗಿರಿ: ಸರ್ಕಾರಿ ನೌಕರರಿಗೆ ವೃದ್ಧಾಪ್ಯದಲ್ಲಿ ಆಸರೆಯಾಗಲು ಹಳೇ ಪಿಂಚಣಿ ಯೋಜನೆ ಮರು ಜಾರಿ ಆಗಲೇಬೇಕೆಂದು ನಿಶ್ಚಿತ ಪಿಂಚಣಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ, ಸರ್ಕಾರ ಅಧೀನ ಕಾರ್ಯದರ್ಶಿ ಶಾಂತರಾಮ್ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿಯ ಮುಂಭಾಗ ಸಭೆ ಸೇರಿದ್ದ ಸರ್ಕಾರಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ 2.80 ಲಕ್ಷ ಉದ್ಯೋಗ ಖಾಲಿ ಇದ್ದು, ಇರುವ ನೌಕರರ ಮೇಲೆ ಅತೀವ ಒತ್ತಡ ಬಿದ್ದಿದೆ ಎಂದು ಹೇಳಿದರು. ಕೇವಲ 5 ವರ್ಷ ಅಧಿಕಾರದಲ್ಲಿರುವ ಶಾಸಕರು, ಸಚಿವರಿಗೇಕೆ ಪಿಂಚಣಿ ಎಂದು ನಾವು ಕೇಳಲ್ಲ. ಒಂದೇ ಕೆಲಸ ಎಂದು ಆದೇಶ ನೀಡುವ ಸರ್ಕಾರ, ಹತ್ತಾರು ಜವಾಬ್ದಾರಿ ನೀಡುತ್ತದೆ. ಹೀಗಿದ್ದರೂ 35 ವರ್ಷ ಸರ್ಕಾರದ ಮಕ್ಕಳಂತೆ ಜನರ ಕೆಲಸ ಮಾಡುತ್ತೇವೆ. ನಮಗೆ ಮುಪ್ಪಿನ ಕಾಲದಲ್ಲಿ, ಇಂದಿನ ಬೆಲೆ ಏರಿಕೆ ಸ್ಥಿತಿಯಲ್ಲಿ ಪಿಂಚಣಿ ಇಲ್ಲವಾದ್ರೆ ಬದುಕು ಬೀದಿಗೆ ಬೀಳುತ್ತದೆ ಎಂದು ಹೇಳಿದರು.
ಹೋರಾಟದಲ್ಲಿ ಭಾಗಿಯಾಗಿ: ಹೀಗಾಗಿ 6 ವರ್ಷದಿಂದ ಹಳೆಯ ಪಿಂಚಣಿ ಯೋಜನೆ ಜಾರಿಗೆ ಹೋರಾಟ ಮಾಡುತ್ತಿದ್ದು, 17 ಜಿಲ್ಲೆಗಳನ್ನು ಸುತ್ತಿ ಪ್ರವಾಸ ಮಾಡಿ, ಜಾಗೃತಿ ಮೂಡಿಸುತ್ತಿದ್ದೇವೆ. ಇದೇ ನ.13ರಂದು ದಾವಣಗೆರೆಯಲ್ಲಿ ಸಭೆ ಸೇರಿ ಹೋರಾಟಕ್ಕೆ ಅಂತಿಮ ಸ್ಪರ್ಶ ನೀಡುತ್ತೇವೆ. ಕೊನೆ ಯದಾಗಿ ಡಿ.19 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿಯ ಹೋರಾಟ ಮಾಡಲು ನಿಶ್ಚಯಿಸಿಕೊಂಡಿದ್ದು, ಮಾಡು ಇಲ್ಲವೇ ಮಡಿ ಎಂಬ ಘೋಷ ವಾಕ್ಯದೊಂದಿಗೆ ರಾಜಸ್ಥಾನ, ಜಾರ್ಖಾಂಡ್ ರಾಜ್ಯದ ಮಾದರಿಯಲ್ಲಿ ಪಿಂಚಣಿ ಗಾಗಿ ಪ್ರತಿಭಟನೆ ಮಾಡುತ್ತೇವೆ. ಅಂದು ಎಲ್ಲರೂ ಹೋರಾಟ ದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ನಿಶ್ಚಿತ ಪಿಂಚಣಿ ಅನುಕೂಲ ಅಲ್ಲ: ತಾಲೂಕು ಅಧ್ಯಕ್ಷ ರಂಗ ನಾಥ್ ಮಾತನಾಡಿ, 2006 ರಿಂದ ಆಯ್ಕೆಯಾದ ಯಾರಿಗೂ ಹಳೆಯ ಪಿಂಚಣಿ ಯೋಜನೆಯ ಲಾಭವಿಲ್ಲ. ಇಂದು ನೌಕರರ ರಕ್ಷಣೆಗೆ ನಿಶ್ಚಿತ ಪಿಂಚಣಿ ಯೋಜನೆ ಅನುಕೂಲಕರವಲ್ಲ. ಇದಕ್ಕಾಗಿ ಹಲವು ಬಾರಿ ಹೋರಾಟ ಮಾಡಿದ್ದು ಫಲ ನೀಡಿಲ್ಲ. ಆದರೆ, ಈ ಬಾರಿಯ ಹೋರಾಟ ಅಂತಿಮ ಘಟ್ಟಕ್ಕೆ ಬರುವವರೆಗೂ ವಿಶ್ರಮಿಸಬಾರದು ಎಂದರು.
ಹೋರಾಟಕ್ಕೆ ಜಯವಾಗಲಿ: ಕವಿಪ್ರನಿನಿ ಸಂಸ್ಥೆಯ ವಿಭಾಗದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ನಿಮ್ಮ ಹೋರಾಟಕ್ಕೆ ಜಯವಾಗಲಿ. ಆದರೆ, ಯಾರೂ ಸಂಘಟನೆಯಲ್ಲಿ ಒಡಕು ಮೂಡಿಸಲು ಪ್ರಯತ್ನಿಸಬಾರದು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶಯ್ಯ ಮಾತನಾಡಿದರು. ಕಾರ್ಯದರ್ಶಿ ನಟರಾಜ್, ಖಜಾಂಚಿ ಚಿಕ್ಕರಂಗಯ್ಯ, ಮುಖಂಡರಾದ ನಾಗೇಶಯ್ಯ, ಶಶಿಕುಮಾರ್, ಕೆಂಪಯ್ಯ, ಶ್ರೀಧರ್, ಟಿ.ಡಿ.ನರಸಿಂಹಮೂರ್ತಿ, ಶ್ರೀನಿವಾಸ್, ಚಂದ್ರಶೇಖರ್‌ರೆಡ್ಡಿ, ಅರುಣ್, ನವೀನ್, ಧನಂಜಯ್, ರಂಗಪ್ಪ, ಸಂಜಯ್, ನಿಶ್ಚಿತ ಪಿಂಚಣಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.