“ಅದು ಚಂದ್ರ, ಇಲ್ಲಾ ಅದು ಸೂರ್ಯ’- ಕುಡುಕರಿಬ್ಬರು ಬೀದಿದೀಪ ನೋಡಿ ಹೀಗೆ ಚರ್ಚೆ ಮಾಡುತ್ತಿರುತ್ತಾರೆ. ದಾರಿಹೋಕನನ್ನು ಹಿಡಿದು, “ಇದು ಚಂದ್ರನಾ, ಸೂರ್ಯನಾ’ ಎಂದು ಕೇಳುತ್ತಾರೆ. ಆತ “ನನಗೆ ಗೊತ್ತಿಲ್ಲ ಸ್ವಾಮಿ, ನಾನು ಈ ಊರಿಗೆ ಹೊಸಬ’ ಎನ್ನುತ್ತಾನೆ! ಅದೆಷ್ಟೋ ವರ್ಷಗಳಿಂದ ಈ ತರಹದ ಕಾಮಿಡಿಗಳನ್ನು ನೋಡಿಕೊಂಡು ಬಂದಿರುವ ಕನ್ನಡ ಪ್ರೇಕ್ಷಕನಿಗೆ ಮತ್ತೇ ಅಂತಹುದೇ ಅಂಶಗಳೊಂದಿಗೆ ಕಾಮಿಡಿ ಮಾಡಲು ಹೊರಟರೆ ಅದು “ಜಂತರ್ ಮಂತರ್’ ಆಗುತ್ತದೆ.
“ಜಂತರ್ ಮಂತರ್’ ಸಿನಿಮಾದಲ್ಲಿ ಏನಿದೆ ಎಂದರೆ ಕಾಮಿಡಿ ಇದೆ, ಆದರೆ ನಗುವ ದೊಡ್ಡ ಮನಸ್ಸನ್ನು ಪ್ರೇಕ್ಷಕ ಮಾಡಬೇಕಷ್ಟೇ. “ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿ ಜನಪ್ರಿಯರಾದವರೆಲ್ಲ ಸೇರಿಕೊಂಡು ಮಾಡಿರುವ ಸಿನಿಮಾ “ಜಂತರ್ ಮಂತರ್’. ಕಿರುತೆರೆಯಲ್ಲಿ ಅವರ ಪ್ರತಿಭೆ, ಟೈಮಿಂಗ್ ನೋಡಿದವರು, ಹಿರಿತೆರೆಯಲ್ಲೂ ಒಳ್ಳೆಯ ಸಿನಿಮಾ ಮಾಡಬಹುದು,
ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಬಹುದೆಂದುಕೊಂಡಿದ್ದ ನಿರೀಕ್ಷೆಯನ್ನು ಈ ಬಾರಿ ಕಾಮಿಡಿ ಕಿಲಾಡಿಗಳು ಹುಸಿಮಾಡಿದ್ದಾರೆ. ಹೊಸ ಪ್ರಯತ್ನ ಮಾಡದೇ, ವಿಭಿನ್ನವಾಗಿ ಯೋಚಿಸದೇ, ತಮ್ಮ ಕಿರಿತೆರೆಯ ಜನಪ್ರಿಯತೆಯನ್ನೇ ಬಳಸಿ, ಮತ್ತದೇ ಸರಕಿನೊಂದಿಗೆ ಬರುವ ಮೂಲಕ “ಜಂತರ್ ಮಂತರ್’ ಒಂದು ಹತ್ತರಲ್ಲಿ ಹನ್ನೊಂದು ಸಿನಿಮಾದ ಪಟ್ಟಿಗೆ ಸೇರಿದೆ. ಮುಖ್ಯವಾಗಿ ಕಿರುತೆರೆಯ ಕಾಮಿಡಿ ಶೋಗಳಿಗೂ, ಸಿನಿಮಾದಲ್ಲಿ ಮಾಡುವ ಕಾಮಿಡಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ.
ಅದನ್ನು ಅರ್ಥಮಾಡಿಕೊಳ್ಳುವಲ್ಲಿ “ಜಂತರ್ ಮಂತರ್’ ತಂಡ ಎಡವಿದೆ. ಅದರ ಪರಿಣಾಮವಾಗಿ ಅದೇ ಹಾವ-ಭಾವ, ಅದೇ ಹಳೆಯ ಕಾಮಿಡಿ ಟ್ರ್ಯಾಕ್‌ಗಳು ಮರುಕಳಿಸಿವೆ ಮತ್ತು ನಿಮ್ಮ ತಾಳ್ಮೆ ಪರೀಕ್ಷೆ ಮಾಡುತ್ತವೆ ಕೂಡಾ. ಗೆಳೆಯನೊಬ್ಬ ಪ್ರೀತಿಸಿದ ಹುಡುಗಿಯನ್ನು ಆಕೆಯ ಮನೆಯಿಂದ ಕಿಡ್ನಾಪ್ ಮಾಡಿಕೊಂಡು ಬರಬೇಕೆಂಬ ಪ್ಲಾನ್‌ನೊಂದಿಗೆ ಮೂವರು ಒಟ್ಟಾಗುವ ಮೂಲಕ ಕಥೆ ತೆರೆದುಕೊಳ್ಳುತ್ತದೆ.
ಕಥೆ ತೆರೆದುಕೊಳ್ಳುವುದಷ್ಟೇ ಹೊರತು ಮುಂದಕ್ಕೆ ಹೋಗುವುದಿಲ್ಲ. ಹುಡುಗಿಯ ಬದಲು ಆಕೆಯ ಅಜ್ಜಿಯನ್ನು ಕರೆದುಕೊಂಡು ಬರುವ ಹುಡುಗರು ಮುಂದೆ ಅನುಭವಿಸುವ ಫಜೀತಿ ಹಾಗೂ ಆ ಅಜ್ಜಿಯ ಸೆಂಟಿಮೆಂಟ್ ಸ್ಟೋರಿ ಮೂಲಕ ಇಡೀ ಸಿನಿಮಾ ಸಾಗುತ್ತದೆ. ಹಾಗೆ ನೋಡಿದರೆ ಕಥೆಯ ಒಂದೆಳೆ ಚೆನ್ನಾಗಿದೆ. ಆದರೆ, ಅದನ್ನು ಸಮರ್ಪಕವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ.
ಕಾಮಿಡಿ ಎಂದರೆ ಅತಿಯಾದ ಮಾತು, ಒಂದಷ್ಟು ಡಬಲ್ ಮೀನಿಂಗ್ ಡೈಲಾಗ್ ಎಂದು ಭಾವಿಸಿದ್ದೇ ಇಲ್ಲಿ ಮೈನಸ್. ಚಿತ್ರದಲ್ಲಿ ಏನಿದೆ ಎಂದರೆ ಅತಿಯಾದ ಮಾತಿದೆ ಮತ್ತು ಅದು ಪ್ರೇಕ್ಷಕನಿಗೆ ರುಚಿಸದ್ದು ಎಂಬುದು ಗಮನಾರ್ಹ ಅಂಶ. ಎಲ್ಲೋ ಸಂತೆಯಲ್ಲಿ ನಿಂತಂತೆ ಭಾಸವಾಗುಷ್ಟರ ಮಟ್ಟಿಗೆ ಮೂರು ಪ್ರಮುಖ ಪಾತ್ರಗಳು ಮಾತನಾಡುತ್ತವೆ. “ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಕಾಣಿಸಿಕೊಂಡ ಬಹುತೇಕ ಕಲಾವಿದರೆಲ್ಲರೂ ಇಲ್ಲಿ ನಟಿಸಿದ್ದಾರೆ.
ಕೆಲವು ಪಾತ್ರಗಳು ಬೇಕಿತ್ತೋ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ನಿರ್ದೇಶಕ ಗೋವಿಂದೇಗೌಡ ಅವರು ತಂಡದ ಸದಸ್ಯರಿಗೆ ಬೇಸರವಾಗಬಾರದೆಂಬ ಕಾರಣಕ್ಕೆ ಎಲ್ಲರಿಗೂ ಪಾತ್ರ ನೀಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಿತೇಶ್, ಶಿವರಾಜ್, ನಯನಾ, ಗೋವಿಂದೇ ಗೌಡ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಸಿನಿಮಾ ನಡುವೆ “ಕಾಮಿಡಿ ಕಿಲಾಡಿಗಳು’ ಬಂದು ಹೋಗುತ್ತಾರೆ. ಚಿತ್ರದಲ್ಲಿ ಶೋಭರಾಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರ: ಜಂತರ್ ಮಂತರ್
ನಿರ್ಮಾಣ: ಶಿವ ಸುಂದರ್-ನಾಗರಾಜ್
ನಿರ್ದೇಶನ: ಗೋವಿಂದೇಗೌಡ
ತಾರಾಗಣ: ಹಿತೇಶ್, ನಯನಾ, ಶಿವರಾಜ್, ದಿವ್ಯಶ್ರೀ, ಶೋಭರಾಜ್ ಮುಂತಾದವರು
* ರವಿಪ್ರಕಾಶ್ ರೈ