ಬೆಂಗಳೂರು: ಕೆಂಗೇರಿಯ ಮನೆಯೊಂದರ ಕಪಾಟಿನಲ್ಲಿ ವೃದ್ಧೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವೃದ್ಧೆಯನ್ನು ಹತ್ಯೆಗೈದು, ದೇಹವನ್ನು ಚೀಲದಲ್ಲಿ ಹಾಕಿ ಕಪಾಟಿನಲ್ಲಿ ಗುಂಡಿ ತೆಗೆದು ಅವಿಸಿಡಲಾಗಿದೆ. ಮೃತ ದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಪತ್ತೆಯಾಗುತ್ತಿಲ್ಲ. ಮನೆಯಲ್ಲಿ ಬಾಡಿಗೆಗಿದ್ದ ಶಿವಮೊಗ್ಗ ಮೂಲದ ವ್ಯಕ್ತಿಗಳು ಕೂಡ ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೀನ್ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ಕೃತ್ಯ ನಡೆದಿದ್ದು, ಕಟ್ಟಡದ ಕೆಳ ಮಹಡಿಯಲ್ಲಿ ಶಿವಮೊಗ್ಗ ಮೂಲದ ಸಂಜಯ್, ಈತನ ತಾಯಿ ಶಶಿಕಲಾ ಹಾಗೂ ಅಜ್ಜಿ ವಾಸಿಸುತ್ತಿದ್ದರು. ಸಂಜಯ್ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ. ಜತೆಗೆ ಇಂದಿರಾನಗರದ ಕಂಪನಿಯೊಂದರಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದ. ತಾಯಿ ಶಶಿಕಲಾ ಮನೆಯಲ್ಲೇ ಇರುತ್ತಿದ್ದರು.
ಈ ನಡುವೆ ಫೆ.2ರಂದು ಯಾರಿಗೂ ಹೇಳದೆ ತಾಯಿ, ಮಗ ನಾಪತ್ತೆಯಾಗಿದ್ದಾರೆ. ಸಂಜಯ್ ಮೊಬೈಲ್‌ಗೆ ಕಟ್ಟಡದ ಮಾಲೀಕರ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಪಾಟಿನಲ್ಲಿ ದೊರೆತಿರುವ ಮೃತದೇಹ ಸಂಜಯ್ ಅವರ ಅಜ್ಜಿಯದೇ ಇರಬಹುದು ಎಂದು ಶಂಕಿಸಲಾಗಿದೆ.
ಡ್ರಮ್‌ಗಳಲ್ಲಿತ್ತು ಕೆವ್ಣುಣ್ಣು: ಮನೆ ಬಾಡಿಗೆ ಕರಾರು ಪತ್ರ ಸಂಜಯ್ ಮನೆಯಲ್ಲೇ ಇತ್ತು. ಹಾಗಾಗಿ ಭಾನುವಾರ ಸಂಜೆ ನವೀನ್ ತಮ್ಮ ಬಳಿಯಿದ್ದ ಮತ್ತೂಂದು ಕೀ ಬಳಸಿ ಮನೆಯೊಳಗೆ ಹೋಗಿದ್ದಾರೆ. ಬೆಡ್‌ರೂಮ್ ಕಡೆ ಹೋದಾಗ ಕಪಾಟಿನ ಬಾಗಿಲು ಮುಚ್ಚಿ ಸಿಮೆಂಟ್‌ನಲ್ಲಿ ಗೋಡೆ ನಿರ್ಮಿಸಿರುವುದ ಕಂಡ ನವೀನ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ, ಸಿಮೆಂಟ್‌ನಲ್ಲಿ ನಿರ್ಮಿಸಿದ ಗೋಡೆಗೆ ಕೆಂಪು ಬಣ್ಣ ಬಳಿಯಲಾಗಿತ್ತು.
ಅದರ ಮುಂಭಾಗದಲ್ಲಿದ್ದ ಎರಡು ಡ್ರಮ್‌ಗಳಿಗೆ ಇನ್ಸ್‌ಲೇಷನ್ ಟೇಪ್‌ನಿಂದ ಸುತ್ತಲಾಗಿದ್ದು, ದುರ್ವಾಸನೆ ಬರುತ್ತಿತ್ತು. ಡ್ರಮ್‌ಗಳಿಗೆ ಸುತ್ತಿದ್ದ ಟೇಪ್ ತೆಗೆದಾಗ ಒಂದರಲ್ಲಿ ಬಟ್ಟೆ, ಮತ್ತೂಂದರಲ್ಲಿ ಕೆಮ್ಮಣ್ಣು ಉಂಡೆಗಳು, ಕೆಮಿಕಲ್ ಮಿಶ್ರಿತ ವಸ್ತುಗಳು ಪತ್ತೆಯಾಗಿವೆ. ಡ್ರಮ್‌ಗಳನ್ನು ಪಕ್ಕಕ್ಕೆ ಸರಿಸಿದಾಗ ಕಪಾಟು ಸಂಪೂರ್ಣವಾಗಿ ಸಿಮೆಂಟ್‌ನಿಂದ ಮುಚ್ಚಿರುವುದು ತಿಳಿದಿದೆ.
ಕಪಾಟಿನಲ್ಲಿ ದೇಹ: ಕಪಾಟಿನಲ್ಲೇ 3-4 ಅಡಿಗಳಷ್ಟು ಗುಂಡಿ ತೆಗೆದು ಅದರೊಳಗೆ ಮೃತ ದೇಹ ಇಟ್ಟು, ಬಳಿಕ ವಾಸನೆ ಬಾರದಂತೆ ಕಪಾಟಿಗೆ ಸಿಮೆಂಟ್‌ನಿಂದ ಪ್ಲಾಸ್ಟಿಂಗ್ ಮಾಡಿ, ರಕ್ತದ ಕಲೆ ಕಾಣದಂತೆ ಕೆಂಪು ಬಣ್ಣ ಮಾಡಿದ್ದಾರೆ. ಸ್ವಲ್ಪವೂ ಗಾಳಿ ಹೋಗದಂತೆ ಗೋಡೆ ನಿರ್ಮಿಸಿದ್ದಾರೆ. ಹೀಗಾಗಿ, ಮತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
50 ಸಾವಿರ ಪಡೆದಿದ್ದ ಸಂಜಯ್
ಕಳೆದ ಸೆಪ್ಟಂಬರ್‌ನಿಂದ ಬಾಡಿಗೆ ನೀಡದ ಸಂಜಯ್, ಫೆ.1ರಂದು ಶಿವಮೊಗ್ಗದಲ್ಲಿರುವ ತಾತನಿಗೆ ಪೆಟ್ಟಾಗಿದ್ದು, ಚಿಕಿತ್ಸೆಗೆ 50 ಸಾವಿರ ಹಣ ಬೇಕಿದೆ ಎಂದು ಮನೆ ಮಾಲೀಕ ನವೀನ್ ಅವರಿಂದ ತನ್ನ ಖಾತೆಗೆ 50 ಸಾವಿರ ರೂ. ಜಮೆ ಮಾಡಿಸಿಕೊಂಡಿದ್ದ. ನಂತರ ಫೆ.2ರಂದು ನಸುಕಿನಲ್ಲಿ ಮನೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.