Advertisement
ವೃದ್ಧೆ ಗಿರಿಜಕ್ಕ ಅವರಿಗೆ ಮಗನಂತೆ ನೋಡಿಕೊಂಡಿದ್ದ ವ್ಯಕ್ತಿ ರಾಮ ಪೂಜಾರಿ ಎಂಬಾತ ಮೋಸ ಮಾಡಿದ್ದು, 2 ಲಕ್ಷ ರೂ. ಪಡೆದು ಮೋಸ ಮಾಡಿದ್ದ. ಪ್ರಕರಣದಲ್ಲಿ ಮಂಗಳೂರಿನ ಜೆ.ಎಂ.ಎಫ್.ಸಿ ನ್ಯಾಯಲಯ ಆರೋಪಿ ರಾಮ ಪೂಜಾರಿಯ ಚರ ಸೊತ್ತು ವಶ ಸಹಿತ ಬಂಧಿಸುವಂತೆ ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದೆ. ವಶಕ್ಕೆ ಪಡೆವ ಸೊತ್ತನ್ನು ಮಾರಿ ಸಂತ್ರಸ್ತೆಗೆ 2,25,000 ರೂ. ಹಣವನ್ನು ಪಾವತಿಸಲು ಆದೇಶದಲ್ಲಿ ಸೂಚಿಸಲಾಗಿತ್ತು.
ಗಿರಿಜಕ್ಕ ಬಳೆಗಾರ ಜನಾಂಗದವರು. ಅವರಿಗೆ ಮಕ್ಕಳಿಲ್ಲ. ಬೀದಿ ಸುತ್ತಿ, ಸಂತೆ-ಜಾತ್ರೆಗಳಿಗೆ ಹೋಗಿ ಬಳೆ ಮಾರಿ ಗಳಿಸಿದ 2 ಲ.ರೂ. ಹಣವನ್ನು ಮಂಗಳೂರಿನ ಕದ್ರಿ ಸಹಕಾರಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇರಿಸಿದ್ದರು. ಎಲ್ಲಿಂದಲೋ ಬಂದ ರಾಮ ಪೂಜಾರಿಯು ವೃದ್ಧೆಯನ್ನು ನಂಬಿಸಿ ನೀವು ನನ್ನ ತಾಯಿ ಇದ್ದಂತೆ. ಕೊನೆಗಾಲದಲ್ಲಿ ನಾನೇ ನೋಡಿಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದ್ದು, ಆಕೆಯ ಆಜೀವ ಉಳಿತಾಯವನ್ನೆಲ್ಲ ಲಪಟಾಯಿಸಿದ್ದ. ಬಡ್ಡಿ ನೀಡುತ್ತೇನೆ, ನಿಮಗೆ ಬೇಕಾದಾಗ ಅಸಲನ್ನೂ ನೀಡುತ್ತೇನೆ ಎಂದು ಮಾತು ನೀಡಿ ಕೊನೆಗೆ ಹಣ ವಾಪಸು ಮಾಡಿರಲಿಲ್ಲ. ನ್ಯಾಯಕ್ಕೆ ಮೊರೆ
2014ರಲ್ಲಿ ಮಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಗಿರಿಜಕ್ಕ ದಾವೆ ಹೂಡಿದ್ದು, 2016ರಲ್ಲಿ ಇತ್ಯರ್ಥವಾಯಿತು. ಬಡ್ಡಿ ಸಹಿತ 2,20,000 ರೂ. ಹಣ ಪಾವತಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದರು. ಹಣ ಪಡೆಯಲು ಸುಮಾರು 10 ತಿಂಗಳ ಕಾಲ ಪರದಾಡಿದ ಗಿರಿಜಕ್ಕನಿಗೆ ಅನಾರೋಗ್ಯ ವಿಪರೀತವಾಗಿ ಕಾಡತೊಡಗಿತ್ತು. ಕೊನೆಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋದರು. ಪ್ರತಿಷ್ಠಾನವು ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿತ್ತು. ಮಂಗಳೂರಿನ ಉಪ ವಿಭಾಗಾಧಿಕಾರಿಯವರು ವೃದ್ಧೆಯ ಹಣ ತೆಗೆಸಿಕೊಡುವಂತೆ ಕೊಣಾಜೆ ಪೊಲೀಸ್ ಠಾಣೆಗೆ ಆದೇಶಿಸಿದ್ದರು. ಆನಂತರವೂ 6 ತಿಂಗಳು ಅವರಿಗೆ ನ್ಯಾಯ ಸಿಕ್ಕಿರಲಿಲ್ಲ.
Related Articles
ಗಿರಿಜಕ್ಕನ ಪ್ರಕರಣದಲ್ಲಿ ವಕೀಲ ಪ್ರಸಾದ ಭಂಡಾರಿ ಅವರು ಕಳೆದ ವಾರ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಿದ್ದು, ಆರೋಪಿ ರಾಮ ಪೂಜಾರಿಯ ಚರ ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಗಿರಿಜಮ್ಮನ ಹಣ ಕೊಡಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು ನೀಡಿದ ಆದೇಶದನ್ವಯ ಕೊಣಾಜೆ ಪೊಲೀಸರು ರಾಮ ಪೂಜಾರಿಯನ್ನು ಬಂಧಿಸಿದ್ದಾರೆ. ಹಾಗೂ ಆತನ ಹೆಸರಿನಲ್ಲಿರುವ ಮಾಕ್ಸಿಕ್ಯಾಬ್ ಅನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನ ಚರ ಸೊತ್ತನ್ನು ಮಾರಿ ಗಿರಿಜಕ್ಕನ ಹಣ ಪಾವತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಡಾ| ರವೀಂದ್ರ ನಾಥ ಶಾನುಭಾಗ್ ಅವರು ತಿಳಿಸಿದ್ದಾರೆ.
Advertisement