Advertisement

ಪಿಎಸ್ಸೈ ಪ್ರಕರಣದಲ್ಲಿ ಅಧಿಕಾರಿಗಳು ಮಂತ್ರಿಗಳು ಕಿಂಗ್ ಪಿನ್ ಗಳು: ಪ್ರಿಯಾಂಕ್ ಖರ್ಗೆ ಆರೋಪ

02:31 PM May 14, 2022 | Team Udayavani |

ಕಲಬುರಗಿ: ಪಿಎಸ್ಐ ಪರೀಕ್ಷಾ ಅಕ್ರಮ ಹಗರಣದಲ್ಲಿ ಈಗಾಗಲೇ ಬಂಧಿತರಾಗಿರುವ ಕಲ್ಬುರ್ಗಿಯ ರುದ್ರಗೌಡ, ದಿವ್ಯಾ ಹಾಗರಗಿ ಹಾಗೂ ಇತರರು ಕಿಂಗ್ ಪಿನ್ ಗಳಲ್ಲ. ಕಿಂಗ್ ಪಿನ್ ಗಳು ಸರಕಾರದ ಉನ್ನತ ಅಧಿಕಾರಿಗಳು ಮತ್ತು ಮಂತ್ರಿಗಳಾಗಿದ್ದಾರೆ. ಇದನ್ನು ಕೂಡಲೇ ಸರ್ಕಾರ ತನಿಖೆಯ ಮುಖಾಂತರ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಡೀ ಪ್ರಕರಣದ ವಾಸ್ತವ ತನಿಖೆ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈಗ ಬಂಧಿತರ ಮನೆಗಳನ್ನು ಮಹಜರು ಮಾಡುವುದು, ಶಾಲೆಗಳನ್ನು ಮಹಜರ್ ಮಾಡುವ ಮುಖಾಂತರ ಸರಕಾರ ಜನತೆಗೆ ಏನನ್ನು ಹೇಳಲು ಹೊರಟಿದೆ ಎಂದು ಪ್ರಶ್ನಿಸಿದರು.

ಕಿಂಗ್ ಪಿನ್ ಗಳು ಸರಕಾರದಲ್ಲಿದ್ದಾರೆ. ಅವರನ್ನು ಬಚಾವ್ ಮಾಡುವ ನಿಟ್ಟಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಯಾರನ್ನೋ ಬಚಾವು ಮಾಡಲು ಅವರು ತಮ್ಮನ್ನು ತಾವು ಬಲಿಕೊಟ್ಟು ಕೊಳ್ಳುತ್ತಿದ್ದಾರೆ ಎಂದು ಸಹಾನುಭೂತಿ ವ್ಯಕ್ತಪಡಿಸಿದರು.

ಪಿಎಸ್ಸೈ ಪರೀಕ್ಷೆ ಬರೆದಿರುವ 545 ಅಭ್ಯರ್ಥಿಗಳಲ್ಲಿ ಎಷ್ಟು ಜನರನ್ನು ಕರೆದು ಒಎಂಆರ್ ಶೀಟ್ ಗಳನ್ನು ಪರೀಕ್ಷೆ ಮಾಡಿದ್ದೀರಿ? ಎಷ್ಟು ಜನ ಹಾಜರಾಗಿದ್ದಾರೆ? ಎಷ್ಟು ಜನ ಹಾಜರಾಗಿಲ್ಲ ಎನ್ನುವುದನ್ನು ಸರ್ಕಾರ ಜನತೆಗೆ ತಿಳಿಸಬೇಕು. ವಿಧಾನಸಭೆಯಲ್ಲಿ ಪಿಎಸ್ಐ ಅಕ್ರಮ ತನಿಖೆಯ ಮಧ್ಯಂತರ ವರದಿ ಸಲ್ಲಿಸುವ ಬಗ್ಗೆ ಮಾತನಾಡುವ ಗೃಹ ಮಂತ್ರಿಗಳು, ಎಷ್ಟು ಜನರನ್ನು ವಿಚಾರಣೆ ಮಾಡಲಾಗಿದೆ? ವಿಚಾರಣೆಯಲ್ಲಿ ಹೊರಬಿದ್ದ ಅಂಶಗಳೇನು ಎನ್ನುವುದನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಅದನ್ನು ಹೊರತುಪಡಿಸಿ ಜೈಲಿನಲ್ಲಿ ಊಟ ಸರಿಯಾಗಿಲ್ಲ, ಮದ್ಯ ಕೇಳುತ್ತಿದ್ದಾರೆ, ಫ್ಯಾನ್ ಕೇಳುತ್ತಿದ್ದಾರೆ, ಕೈದಿಗಳು ಅಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವ ಸಣ್ಣ ಪುಟ್ಟ ಮಾಹಿತಿಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡುವುದು ಸರ್ಕಾರದ ಕೆಲಸವಲ್ಲ ಎಂದು ಛೇಡಿಸಿದರು.

Advertisement

ಮೊದಲು ಬೆಂಗಳೂರಿನಲ್ಲಿ ಜಟ್ಕಾ ಕಟ್ ಮಾಡಿ ಅಧಿಕಾರಿಗಳು ಮತ್ತು ಮಂತ್ರಿಗಳ ಪಾತ್ರ ಬಹಿರಂಗ ಪಡಿಸಿ ಅದನ್ನು ಬಿಟ್ಟು ಬರೀ ಹಲಾಲ್ ಮಾಡಿ ಸಂತೋಷ ಪಡುವ ಸಣ್ಣತನಕ್ಕೆ ಇಳಿಯಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್ ಸಿ ಅಲ್ಲಂಪ್ರಭು ಪಾಟೀಲ್ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next