ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿನ ಬೆಸ್ಕಾಂ ಕಚೇರಿಯಲ್ಲಿ ಪ್ರತಿ ತಿಂಗಳು ನಡೆಯುವ ಸಾರ್ವಜನಿಕರ ಕುಂದು ಕೊರತೆ ಸಭೆಯ ಬಗ್ಗೆ ಸಾರ್ವಜನಿಕರಿಗೆ ಪ್ರಚಾರವಿಲ್ಲದಂತಾಗಿದ್ದು, ಅಧಿಕಾರಿಗಳ ಇಚ್ಛೆಯಂತೆ ಸಭೆ ನಡೆಯುತ್ತಿದೆ. ಸರ್ಕಾರದ ಮಾರ್ಗಸೂಚನೆಯಂತೆ ಸಭೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೈತರು ಹಾಗೂ ಸಾರ್ವಜನಿಕರು ತಮ್ಮಲ್ಲಿನ ವಿದ್ಯುತ್ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿ ಗಳ ಮುಂದೆ ವ್ಯಕ್ತಪಡಿಸಿ ತಮ್ಮ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಲು ಸರ್ಕಾರ ಬೆಸ್ಕಾಂ ಕಚೇರಿಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಸಾರ್ವಜನಿಕರ ಕುಂದು ಕೊರತೆ ಹಾಗೂ ಸಲಹಾ ಸಮಿತಿ ಸಭೆ ನಡೆಸುತ್ತಿದೆ.
ಇದನ್ನೂ ಓದಿ:- ಬಂಟ್ವಾಳ: 12 ಪ್ರಕರಣ ಭೇದಿಸಿದ ಪೊಲೀಸರು; ವಾರಸುದಾರರಿಗೆ ಹಸ್ತಾಂತರ
ಆದರೆ, ಅಧಿಕಾರಿಗಳು ಇಂತಹ ಉತ್ತಮವಾದ ಸಭೆಯನ್ನು ಸಾರ್ವಜನಿಕರ ಹಾಗೂ ರೈತರ ಗಮನಕ್ಕೆ ತರುವಲ್ಲಿ ವಿಫಲವಾಗಿದ್ದು, ಬೆಸ್ಕಾಂ ಇಲಾಖೆ ಯೋಜನೆಯು ಅಧಿಕಾರಿಗಳ ಉದಾಸೀನದಿಂದ ಸಫಲವಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ಲಕ್ಷಾಂತರ ರೂ. ನಷ್ಟ: ತಾಲೂಕಿನಲ್ಲಿ ವಿದ್ಯುತ್ ಇಲಾಖೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿದ್ದು, ಸಾರ್ವಜನಿಕರು ಅಧಿಕಾರಿಗಳ ಬಳಿ ಸಮಸ್ಯೆಗಳನ್ನು ವ್ಯಕ್ತಪಡಿಸುವುದೇ ಕಷ್ಟವಾಗುತ್ತಿದೆ. ಪಟ್ಟಣದಲ್ಲಿ ಕಳೆದ 15 ದಿನಗಳ ಹಿಂದೆ ಇಲಾಖೆಯ ಪರಿವರ್ತಕಗಳಲ್ಲಿ ದೋಷ ಉಂಟಾಗಿ ಬನಶಂಕರಿ ಬಡಾವಣೆ ಹಾಗೂ ಮಹಾಲಕ್ಷ್ಮೀ ಬಡಾವಣೆಯ ಕೆಲ ಮನೆಗಳಲ್ಲಿ ಟೀವಿ , ರೆಫ್ರಿಜರೇಟರ್, ಮಿಕ್ಸಿ ಸೇರಿದಂತೆ ವಿದ್ಯುತ್ ಯಂತ್ರೋಪಕರಣಗಳು ಸುಟ್ಟು ಹೋಗಿವೆ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಇಲಾಖೆಯ ಅಧಿಕಾರಿಗಳು ಪರಿವರ್ತಕಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ನ್ಯೂಟ್ರಲ್ ವಿಫಲವಾಗಿ ಈ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
“ಬೆಸ್ಕಾಂ ಕಚೇರಿಯಲ್ಲಿ ನಡೆಯುವ ಕುಂದು – ಕೊರತೆ ಸಭೆ ನನಗೆ ಇದುವರೆಗೂ ತಿಳಿದಿಲ್ಲ. ಯಾವ ಪತ್ರಿಕೆ ಯಲ್ಲೂ ಓದಿಲ್ಲ. ಇಂತಹ ಉಪಯುಕ್ತ ಸಭೆ ಜನರಿಗೆ ತಿಳಿಯಬೇಕು. ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳಿಗೆ ತಿಳಿಸಲು ಅನುಕೂಲವಾಗುತ್ತದೆ
.” – ಮೋಹನ್,ಚಿಕ್ಕನಾಯಕನಹಳ್ಳಿ ನಿವಾಸಿ
ಸಾರ್ವಜನಿಕರ ಸಮಸ್ಯೆ ಆಲಿಸಿ ಸಭೆಯ ಬಗ್ಗೆ ಮಾಹಿತಿ ಸಿಕ್ಕಿದ್ದರೆ ಇವುಗಳ ಬಗ್ಗೆ ಕುಂದು-ಕೊರತೆಯ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರಬಹುದಾಗುತ್ತು. ಬೆಸ್ಕಾಂ ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಸಾರ್ವಜನಿಕರ ಕುಂದು-ಕೊರತೆ ಸಭೆಯನ್ನು ಪ್ರಚಾರ ಮಾಡುವ ಮೂಲಕ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ, ಬಗೆಹರಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.