ಉಡುಪಿ: ಸಂಕುಚಿತ ಭಾವನೆಬಿಟ್ಟು ಸಮಾನತೆ, ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ದೇಶದಲ್ಲಿ ಏಕತೆ ಮೂಡಲು ಸಾಧ್ಯ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದರು.
ಜಿಲ್ಲಾ ಸಹಬಾಳ್ವೆ ಸಂಸ್ಥೆಯ ವತಿಯಿಂದ ನಡೆಯಲಿರುವ ಸರ್ವ ಜನೋತ್ಸವ ಸಮ್ಮೇಳನದ ಕಚೇರಿಯನ್ನು ಬುಧವಾರ ಸಿತಾರಾ ಕಾಂಪ್ಲೆಕ್ಸ್ ಉದ್ಘಾಟಿಸಿದರು.
ಸರ್ವ ಧರ್ಮದ ಸಂಕೇತವಾಗಿ ಜಿಲ್ಲೆ ಗುರುತಿಸಿಕೊಂಡಿದೆ. ಯಾವುದೇ ಒಂದು ಪ್ರದೇಶ ಅಭಿವೃದ್ಧಿಯಾಗಬೇಕಾದರೆ ಸಹಬಾಳ್ವೆಯಿಂದ ಮಾತ್ರ ಸಾಧ್ಯ. ಜಾತ್ಯತೀತರೆಲ್ಲ ಒಂದಾಗಿ ಮಾ. 17ರಂದು ನಗರದಲ್ಲಿ ಸರ್ವ ಜನೋತ್ಸವ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದರು.
ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿದರು. ಜಿಲ್ಲಾ ಸಹಬಾಳ್ವೆ ಸಂಘಟನೆ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿ ಮಾ. 17ರಂದು ಉಡುಪಿ ರೋಯಲ್ ಗಾರ್ಡನ್‌ನಲ್ಲಿ ಸರ್ವಜನೋತ್ಸವ ಸಮ್ಮೇಳನ ಏರ್ಪಡಿಸಲಾಗಿದೆ. ಸಚಿವ ಡಿ.ಕೆ. ಶಿವಕುಮಾರ್, ಜೆಡಿಎಸ್‌ನ ವೈ.ಎಸ್.ವಿ. ದತ್ತ, ವಿಚಾರವಾದಿ ದಿನೇಶ್ ಅಮೀನ್ ಮಟ್ಟು ಭಾಗವಹಿಸಲಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ವಿ. ಯೋಗೀಶ್ ಶೆಟ್ಟಿ, ಚಿಂತಕ ಜಿ.ರಾಜಶೇಖರ್ ಮಾತನಾಡಿದರು. ಫಾ| ವಿಲಿಯಂ ಮಾರ್ಟಿಸ್, ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಯದರ್ಶಿ ಮಹಮ್ಮದ್ ಮೌಲಾ, ಬಡಗಬೆಟ್ಟು ಕ್ರೆ.ಕೋ.ಆ. ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಯಕರ್ ಶೆಟ್ಟಿ ಇಂದ್ರಾಳಿ, ಕರವೇ ಜಿಲ್ಲಾಧ್ಯಕ್ಷ ಅನ್ಸರ್ ಅಹಮ್ಮದ್, ಮುಖಂಡರಾದ ಜಿ.ಎ. ಬಾವ, ರೋಶನಿ, ಗಣೇಶ್ ನೆರ್ಗಿ, ಭಾಸ್ಕರ್ ರಾವ್ ಕಿದಿಯೂರು, ಯತೀಶ್ ಉಪಸ್ಥಿತರಿದ್ದರು. ಕಾಂಗ್ರೆಸ್ ನಾಯಕಿ ವೆರೋನಿಕಾ ಕರ್ನೇಲಿಯೋ ವಂದಿಸಿದರು.