ಬೆಂಗಳೂರು: ಸರ ಕಳವು ಮಾಡಿ ತಲೆಮರೆಸಿಕೊಂಡಿದ್ದ ಕಳ್ಳನನ್ನು ಜಯನಗರ ಪೊಲೀಸರು 26 ವರ್ಷ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗುಲಾಬ್ ಖಾನ್ ಅಲಿಯಾಸ್ ಗುಲ್ಲು (51) ಬಂಧಿತ.
ಈತ ತನ್ನ 22ನೇ ವಯಸ್ಸಿನಲ್ಲಿ ಜಯನಗರದ 5ನೇ ಬ್ಲಾಕ್‌ನಲ್ಲಿ 1998ರ ಜ.20ರಂದು ವಸಂತ ಎಂಬ ಮಹಿಳೆಯ 24 ಗ್ರಾಂ ತೂಕದ ಚಿನ್ನದ ಸರ ಕಸಿದು ಆಟೋದಲ್ಲಿ ಪರಿಯಾಗಿದ್ದ. ಈ ಸಂಬಂಧ ವಸಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿತ್ತು.
ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿ, ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಹಳೇ ಪ್ರಕರಣಗಳ ವಿಲೇವಾರಿಗೆ ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದರು. ಜತೆಗೆ ಕೋರ್ಟ್ ಕೂಡ ಆರೋಪಿ ವಿರುದ್ಧ ಬಂಧನ ರಹಿತ ವಾರೆಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದರು.
ನಗರಸಭೆಯಲ್ಲಿ ಸ್ವಚ್ಛತೆ ಕೆಲಸ: ಈ ಮಧ್ಯೆ ಬಾತ್ಮೀದಾರರು, ಈ ಹಿಂದೆ ಆತ ವಾಸವಾಗಿದ್ದ ಮನೆ ಬಳಿ ವಿಚಾರಣೆ ನಡೆಸಿದಾಗ ಆರೋಪಿ ರಾಮನಗರದ ಕನಕಪುರ ತಾಲೂಕಿನಲ್ಲಿ ವಾಸವಾಗಿರುವುದು ಗೊತ್ತಾಗಿತ್ತು. ಬಳಿಕ ತಿಂಗಳ ಕಾಲ ಶೋಧಿಸಿದಾಗ ಆತನ ಮನೆ ವಿಳಾಸ ಪಡೆದು ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಸರ ಕಳವು ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಭಯಗೊಂಡು ಬೆಂಗಳೂರು ಬಿಟ್ಟು ಬಂದಿದ್ದೆ. ಇಲ್ಲಿನ ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡಿಕೊಂಡು, ಬಿಡುವಿದ್ದಾಗ ವೆಲ್ಡಿಂಗ್ ಶಾಪ್‌ನಲ್ಲೂ ಕೆಲಸ ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದಾನೆ. ತನ್ನ ಕೃತ್ಯವನ್ನು ಕುಟುಂಬ ಸದಸ್ಯರು ಹಾಗೂ ಬೇರೆ ಯಾರೊಂದಿಗೆ ಆತ ಹೇಳಿಕೊಂಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.