ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡಿರುವ ಟೆಂಡರ್ ಶ್ಯೂರ್ ಕಾಮಗಾರಿಯಿಂದಾಗಿ ಒಳಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಪರಿಣಾಮ, ಸುತ್ತಮುತ್ತಲಿನ ಭಾಗಗಳಲ್ಲಿ ದುರ್ವಾಸನೆ ಹರಡಿ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಕಳೆದ 15 ದಿನಗಳಿಂದ ಒಳಚರಂಡಿ ನೀರು ಮುಖ್ಯರಸ್ತೆ ಹಾಗೂ ಮನೆಗಳ ಮುಂದೆ ಹರಿಯುತ್ತಿದ್ದು, ಬಡಾವಣೆಗಳಲ್ಲಿ ಹರಡಿರುವ ದುರ್ವಾಸನೆ ಜನರ ನಿದ್ದೆಗೆಡಿಸಿದೆ.
ಜಲಮಂಡಳಿಯ ಒಳಚರಂಡಿ ನೀರಿನ ಪೈಪ್‌ಗ್ಳು ಒಡೆದ ಪರಿಣಾಮ ಶಾಂತಲಾ ಸಿಲ್ಕ್ ಹೌಸ್ ಸೇರಿದಂತೆ ಹಲವೆಡೆಗಳಲ್ಲಿ ಒಳಚರಂಡಿ ನೀರು ಹೊರಬರುತ್ತಿದೆ. ಇದರಿಂದಾಗಿ ಬಡಾವಣೆಗಳು ದುರ್ವಾಸನೆಯಿಂದ ಕೂಡಿವೆ. ಸ್ವತಃ ಶಾಸಕ ದಿನೇಶ್ ಗುಂಡೂರಾವ್ ಅವರು ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಸಮಸ್ಯೆ ಪರಿಹರಿ ಸುವಂತೆ ಸೂಚಿಸಿ 10 ದಿನಗಳು ಕಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ನಿವಾಸಿಗಳ ಆರೋಪ.
ಮಳೆಯಿಂದ ಸಮಸ್ಯೆ ದುಪ್ಪಟ್ಟು: ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಳಚರಂಡಿ ನೀರು ಹರಿವು ಹೆಚ್ಚಾಗಿದ್ದು, ಕಾಟನ್‌ಪೇಟೆ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ದುರ್ವಾಸನೆ ಹರಡಿ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿದೆ. ಶಾಂತಲಾ ಸಿಲ್ಕ್ಹೌಸ್ ಜಂಕ್ಷನ್ ಬಳಿಯಿರುವ ಮ್ಯಾನ್‌ಹೋಲ್ನಿಂದ ಭಾರಿ ಪ್ರಮಾಣದಲ್ಲಿ ಕೊಳಚೆ ನೀರು ಹೊರಬರುತ್ತಿದ್ದು, ಜನರು ರಸ್ತೆಯಲ್ಲಿ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ನಗರದ ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತಲಿನ ಭಾಗಗಳ ರಸ್ತೆಗಳನ್ನು ಹೈಟೆಕ್‌ಗೊಳಿಸಲು ಪಾಲಿಕೆ ಯೋಜನೆ ರೂಪಿಸಿದ್ದು, ಹಲವು ರಸ್ತೆಗಳನ್ನು ಟೆಂಡರ್‌ಶ್ಯೂರ್ ಮಾದರಿ ನಿರ್ಮಿಸ ಲುವ ಕಾರ್ಯಕ್ಕೆ ಚಾಲನೆ ನೀಡಿದೆ. ಆದರೆ, ಕಾಮಗಾರಿ ವೇಳೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಪಾಲಿಕೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.
Related Articles
Advertisement
ಸಾಂಕ್ರಾಮಿಕ ರೋಗ ಹರಿಡುವ ಭೀತಿ: ಕಳೆದ 15 ದಿನಗಳಿಂದ ಮನೆಗಳ ಮುಂದೆ ಕೊಳಚೆ ನೀರು ಹರಿಯುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪರಿಣಾಮ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದ್ದು, ಸಮಸ್ಯೆ ಪರಿಹರಿಸುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದಾಗಿ ಮನೆಯಿಂದ ಹೊರಗೆ ಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ನಿವಾಸಿ ರಾಜೇಶ್ ಆರೋಪಿಸಿದರು.
ಗಲ್ಲಿ ರಸ್ತೆಗಳು ಜಾಮ್ ಜಾಮ್: ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಬಡಾವಣೆಗಳ ಜನರು ಗಲ್ಲಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಪರಿಣಾಮ ಗಲ್ಲಿ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದಾಗಿ ಜನರು ಬಡಾವಣೆಗಳಲ್ಲಿ ನಡೆದು ಹೋಗಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಹಿವಾಟು ಬಹುತೇಕ ಸ್ಥಗಿತ
ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಹತ್ತಾರು ವಸತಿ ಗೃಹ, ಕಾಗದ ಮುದ್ರಣ ಸೇರಿದಂತೆ ಹಲವಾರು ಉದ್ದಿಮೆಗಳಿದ್ದು, ಟೆಂಡರ್ ಶ್ಯೂರ್ ಕಾಮಗಾರಿ ಆರಂಭವಾದಾಗಿ ನಿಂದಲೂ ವಹಿವಾಟು ಬಹುತೇಕ ಸ್ಥಗಿತಗೊಂಡಂತಾಗಿದೆ. ರಸ್ತೆಯನ್ನು ಎಲ್ಲ ಕಡೆಗಳಲ್ಲಿ ಅಗೆದಿರುವುದು ಹಾಗೂ ಒಳಚರಂಡಿ ನೀರಿನ ಸಮಸ್ಯೆಯಿಂದಾಗಿ ಗ್ರಾಹಕರು ಈ ಕಡೆ ಮುಖ ಮಾಡುತ್ತಿಲ್ಲ. ಇದರಿಂದಾಗಿ ಮೂರು ತಿಂಗಳಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಕಾಗದ ಮುದ್ರಣ ಉದ್ದಿಮೆದಾರ ದಿಲೀಪ್ ಬೇಸರ ವ್ಯಕ್ತಪಡಿಸಿದರು.
ಆರು ತಿಂಗಳು ಕಾಟ ತಪ್ಪಿದ್ದಲ್ಲ
ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಟೆಂಡರ್‌ಶ್ಯೂರ್ ಕಾಮಗಾರಿ ಪೂರ್ಣಗೊಳಿಸಲು ಪಾಲಿಕೆಯಿಂದ ಗುತ್ತಿಗೆದಾರರಿಗೆ ಎಂಟು ತಿಂಗಳು ಗಡುವು ನೀಡಲಾಗಿದೆ. ಆದರೆ, ಕಾಮಗಾರಿ ಆರಂಭವಾಗಿ ಈಗಾಗಲೇ 4 ತಿಂಗಳು ಕಳೆದರೂ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಇನ್ನೂ ಆರು ತಿಂಗಳ ಕಾಲ ಜನರು ತೊಂದರೆ ಅನುಭವಿಸುವುದು ಅನಿವಾರ್ಯ ಎನ್ನುವಂತಾಗಿದೆ.