ಹೊಸದಿಲ್ಲಿ: ಮಾರ್ಚ್ 12ರಿಂದ ಆಸ್ಟ್ರೇಲಿಯ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ವನಿತಾ ತಂಡವನ್ನು ಪ್ರಕಟಿಸಲಾಗಿದೆ.
ಐಸಿಸಿ ವನಿತಾ ಚಾಂಪಿಯನ್‌ಶಿಪ್ (2017-2020)ನ ಅಂಗವಾಗಿ ಈ ಸರಣಿ ವಡೋದರದಲ್ಲಿ ನಡೆಯಲಿದೆ. ಅಖೀಲ ಭಾರತ ವನಿತಾ ಆಯ್ಕೆ ಸಮಿತಿ ಮಂಗಳವಾರ ತಂಡವನ್ನು ಪ್ರಕಟಿಸಿದೆ. ಮಿಥಾಲಿ ರಾಜ್ ಮತ್ತೂಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಉಪನಾಯಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಗಾಯದ ಸಮಸ್ಯೆ ಯಿಂದಾಗಿ ಖ್ಯಾತ ವೇಗಿ ಜೂಲನ್ ಗೋಸ್ವಾಮಿ ತಂಡಕ್ಕೆ ಆಯ್ಕೆಯಾಗಿಲ್ಲ. ವನಿತಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಿತ್ತ ಹೆಗ್ಗಳಿಕೆಗೆ ಗೋಸ್ವಾಮಿ ಪಾತ್ರರಾಗಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಭಾರತೀಯ ವನಿತಾ ತಂಡ ಉತ್ತಮ ಪ್ರದರ್ಶನ ನೀಡು ತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರದೇ ನೆಲದಲ್ಲಿ ಏಕದಿನ ಮತ್ತು ಟ್ವೆಂಟಿ20 ಸರಣಿ ಗೆದ್ದ ಸಾಧನೆಯನ್ನು ಭಾರತೀಯ ತಂಡ ಮಾಡಿದೆ.
ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತೀಯ ತಂಡ 2-1 ಅಂತರದಿಂದ ಸರಣಿ ಜಯಿಸಿತ್ತು. ಆಬಳಿಕ ಹರ್ಮನ್‌ಪ್ರೀತ್ ಕೌರ್ ಟ್ವೆಂಟಿ20 ಸರಣಿಯ ಟ್ರೋಫಿ ಗೆಲ್ಲಲು ಯಶಸ್ವಿಯಾಗಿದ್ದರು. ಈ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಎರಡು ಮಾದರಿಯ ಕ್ರಿಕೆಟ್ ಕೂಟದಲ್ಲಿ ಪ್ರಶಸ್ತಿ ಗೆದ್ದ ಮೊದಲ ತಂಡವೆಂಬ ಹಿರಿಮೆಗೆ ಭಾರತ ಪಾತ್ರವಾಯಿತು.
ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ತಂಡದ ಪ್ರದರ್ಶನವನ್ನು ಗಮನಿಸಿದಾಗ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ಆಟಗಾರರು ಅಪರೂಪಕ್ಕೊಮ್ಮೆ ಉತ್ತಮ ನಿರ್ವಹಣೆ ನೀಡಿದ್ದಾರೆಂದು ಹೇಳಿದರೆ ತಪ್ಪಾಗುತ್ತದೆ. ಯಾಕೆಂದರೆ ವಿಶ್ವಕಪ್ ಮುಗಿದು 7 ತಿಂಗಳ ಬಳಿಕ ನಡೆದ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಭಾರತೀಯರು ಶ್ರೇಷ್ಠ ಪ್ರದರ್ಶನ ನೀಡಿದ್ದರು. ಟ್ವೆಂಟಿ20 ಸರಣಿ ಗೆದ್ದಿರುವುದು ಸಕಾರಾತ್ಮಕ ಅಂಶವಾಗಿದೆ. ಯಾಕೆಂದರೆ ಈ ಮಾದರಿಯ ಕ್ರಿಕಿಟ್‌ನಲ್ಲಿ ಭಾರತೀಯ ವನಿತೆಯರು ಈ ಹಿಂದೆ ಪರಿಣಾಮಕಾರಿಯಾಗಿ ನಿರ್ವಹಣೆ ನೀಡಿರಲಿಲ್ಲ.
ವನಿತಾ ತಂಡ
ಮಿಥಾಲಿ ರಾಜ್, ಹರ್ಮನ್‌ಪ್ರೀತ್ ಕೌರ್, ಸ್ಮತಿ ಮಂಧನಾ, ಪೂನಂ ರಾವುತ್, ಜೆಮಿಮಾ ರೋಡ್ರಿಗಸ್, ವೇದಾ ಕೃಷ್ಣಮೂರ್ತಿ, ಮೊನಾ ಮೆಶ್ರಾಮ್, ಸುಷ್ಮಾ ವರ್ಮ, ಏಕ್ತಾ ಬಿಸ್ತ್, ಪೂನಂ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಶಿಖಾ
ಪಾಂಡೆ, ಸುಕನ್ಯಾ ಪರಿದಾ, ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮ.