ಚಿತ್ರದುರ್ಗ: ನಗರದ ಕ್ರೀಡಾ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಆರ್.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಆರ್.ವಿ. ವೆಂಕಟೇಶ್, ಕಾರ್ಯದರ್ಶಿ ಯೋಗೇಶ್ವರಿ ವಿಜಯ್, ದಿವ್ಯಾ ಗೌಡ, ಗೋವಿಂದಸ್ವಾಮಿ ಎದುರೇ ಕಾಂಗ್ರೆಸ್‌ನ ಕೆಲವು ಮುಖಂಡರು ಮಾತಿನ ಚಕಮಕಿ ನಡೆಸಿದರು. ಆಹ್ವಾನಿತರಲ್ಲದಿದ್ದರೂ ವೇದಿಕೆ ಮೇಲೆ ಕುಳಿತುಕೊಂಡಿದ್ದ ಕೆಪಿಸಿಸಿ ಸದಸ್ಯ ಡಾ| ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ ಮತ್ತು ಮಾಜಿ ಶಾಸಕ ಎ.ವಿ. ಉಮಾಪತಿ ಅವರನ್ನು ವೇದಿಕೆಯಿಂದ ಕೆಳಗಿಳಿಸಲು ಹರಸಾಹಸಪಡುವಂತಾಯಿತು. ಆಹ್ವಾನಿತರು ಮಾತ್ರ ವೇದಿಕೆಯಲ್ಲಿ ಕುಳಿತುಕೊಂಡು ಉಳಿದವರು ವೇದಿಕೆಯಿಂದ ನಿರ್ಗಮಿಸಬೇಕೆಂದು ಸಚಿವ ಎಚ್. ಆಂಜನೇಯ ಖಡಕ್ ಸೂಚನೆ ನೀಡಿದರು. ಜಿಲ್ಲಾಧ್ಯಕ್ಷ ಫಾತ್ಯರಾಜನ್ ಕೂಡ ಇಬ್ಬರು ಮುಖಂಡರನ್ನು ವೇದಿಕೆಯಿಂದ ಕೆಳಗಿಳಿಸಲು ಪ್ರಯತ್ನ ಮಾಡಿದರು. ತಿಪ್ಪೇಸ್ವಾಮಿ ಮತ್ತು ಉಮಾಪತಿ ಇದಕ್ಕೆ ಸೊಪ್ಪು ಹಾಕದಿದ್ದಾಗ ವೇದಿಕೆ ಬಿಟ್ಟು ಕೆಳಗಿಳಿಯುವಂತೆ ಜಿಲ್ಲಾಧ್ಯಕ್ಷರು ತಾಕೀತು ಮಾಡಿದರು. ಅವರ ಮಾತಿನಿಂದ ಆಕ್ರೋಶಗೊಂಡ ಉಮಾಪತಿ, ನಮ್ಮನ್ನು ವೇದಿಕೆಯಿಂದ ಇಳಿಯುವಂತೆ ಸೂಚನೆ ನೀಡಲು ನೀನು ಯಾರು ಎಂದು ಏಕವಚನದಲ್ಲಿ ಕೂಗಾಡತೊಡಗಿದರು. 30 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ. ನಿನ್ನಿಂದ ನಾನು ಪಾಠ ಹೇಳಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು. ಅಲ್ಲದೆ ವೀಕ್ಷಕರಾದ ಆರ್. ಕೃಷ್ಣಪ್ಪ ಹಾಗೂ ಆರ್.ವಿ. ವೆಂಕಟೇಶ್ ಅವರಲ್ಲಿ ಅಳಲು ತೋಡಿಕೊಂಡರು. ಆಗ ಕೃಷ್ಣಪ್ಪ ಮತ್ತು ವೆಂಕಟೇಶ್ ಆಹ್ವಾನಿತರಿಗೆ ಮಾತ್ರ ವೇದಿಕೆ ವ್ಯವಸ್ಥೆ ಮಾಡಲಾಗಿದೆ. ಇದು ಕಾರ್ಯಕಾರಣಿಯಾಗಿದ್ದು, ನೀವು ವೇದಿಕೆಯಿಂದ ನಿರ್ಗಮಿಸಬೇಕೆಂದು ಸೂಚನೆ ನೀಡಿದರು. ಇದರಿಂದ ಸಿಡಿಮಿಡಿಗೊಂಡ ಉಮಾಪತಿ, ವೀಕ್ಷಕರೊಂದಿಗೂ ವಾಗ್ವಾದ ನಡೆಸಿದರು. ವೀಕ್ಷಕ ಆರ್.ವಿ. ವೆಂಕಟೇಶ್ ಮಾತನಾಡಿ,
ಆಹ್ವಾನಿತರು ಮಾತ್ರ ವೇದಿಕೆಯಲ್ಲಿ ಕುಳಿತುಕೊಳ್ಳಬೇಕು. ಆಹ್ವಾನಿತರಲ್ಲದವರು ವೇದಿಕೆಯಿಂದ ಕೆಳಗಿಳಿಯಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. ಇದರಿಂದ ಆಕ್ರೋಶಗೊಂಡ ಇಬ್ಬರು ಮುಖಂಡರು ವೇದಿಕೆ ಮತ್ತು ಸಭಾಂಗಣದಿಂದಲೇ ನಿರ್ಗಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರೇ ಇದಕ್ಕೆ ಕಾರಣ ಎಂದು ಆರೋಪಿಸಿ ಸಚಿವರು ಮತ್ತು ಜಿಲ್ಲಾಧ್ಯಕ್ಷ ಫಾತ್ಯರಾಜನ್ ವಿರುದ್ಧಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ನಂತರ ಮಾತನಾಡಿದ ಸಚಿವ ಎಚ್.ಆಂಜನೇಯ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಗದ್ದಲ, ಗೊಂದಲಗಳಿಗೆ ಅವಕಾಶವಿಲ್ಲ. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿದ್ದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು.
ಉದ್ದೇಶಪೂರ್ವಕವಾಗಿ ಗೊಂದಲ ನಿರ್ಮಿಸಿದರೆ ಪಕ್ಷ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ನಾನು ಹಲವಾರು ಬಾರಿ ಸೋತು ಗೆದ್ದಿದ್ದೇನೆ. ಎಂದೋ ಸಚಿವನಾಗಬೇಕಿತ್ತು. ಈಗ ಆಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಜಾತಿ, ಧರ್ಮ ಬೇಧ ಬಿಟ್ಟು ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿದೆ. ಅಧಿಕಾರ ಮತ್ತು ವೇದಿಕೆ ಸಿಗುವ ತನಕ ಕಾಯಬೇಕು ಎಂದರು. ಕಾರ್ಯಕರ್ತರಾಗಿ ಮೊದಲು ಕೆಲಸ
ಮಾಡಲಿ, ಆದರೆ ವೇದಿಕೆ ಯಾಕೆ ಎಂದು ಪ್ರಶ್ನಿಸಿದ ಸಚಿವರು, ನಮಗೆ ಯಾರ ಮೇಲೂ ದ್ವೇಷ, ಅಸೂಯೆ ಇಲ್ಲ. ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಎಂದು ಹೇಳುತ್ತಾ ನೇರವಾಗಿ ವೇದಿಕೆಗೆ ಬಂದರೆ ಹೇಗೆ, ನಿಕಟಪೂರ್ವ ಅಭ್ಯರ್ಥಿಗಳಾಗಿದ್ದರೆ ಪಕ್ಷ ಸೂಕ್ತ ವೇದಿಕೆ ನೀಡುತ್ತದೆ. ಪಕ್ಷ ತೀರ್ಮಾನವನ್ನು ಗೌರವಿಸಬೇಕು. ಒಂದು ವೇಳೆ ನಾನು ಸೋತಿದ್ದರೆ ನಾನು ಕೂಡ ವೇದಿಕೆ ಬಿಟ್ಟೇ ಕೂರಬೇಕಿತ್ತು ಎಂದು ಹೇಳಿದರು. ಪಕ್ಷ ಯಾವುದೇ ರೀತಿಯ ಅಶಿಸ್ತು ಸಹಿಸುವುದಿಲ್ಲ. ಕೆಲವರು ಪಕ್ಷವನ್ನೇ ಸೇರಿಲ್ಲ, ಆದರೂ ವೇದಿಕೆ ಕೇಳುತ್ತಿದ್ದಾರೆ ಎಂದು ಟೀಕಿಸಿದರು.