Advertisement

ರಾಜ್ಯದಲ್ಲಿರುವ ಕಾಡಾನೆಗಳ ಸಂಖ್ಯೆ 6,049

09:04 AM May 22, 2019 | sudhir |

ಸುಬ್ರಹ್ಮಣ್ಯ: ಕರ್ನಾಟಕ ಈಗ ದೇಶದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಆನೆಗಣತಿಯನ್ನು ಅರಣ್ಯ ಇಲಾಖೆ ನೇತೃತ್ವದಲ್ಲಿ 2017ರ ಮೇಯಲ್ಲಿ ಏಕಕಾಲದಲ್ಲಿ ನಡೆಸಿದ್ದು, ಈ ವೇಳೆ ರಾಜ್ಯದಲ್ಲಿ 6,049 ಆನೆಗಳಿರುವುದು ಕಂಡುಬಂದಿದ್ದು, ಇದು ದೇಶದಲ್ಲಿ ಅತೀ ಹೆಚ್ಚು.

Advertisement

2017ರ ಮೇ ತಿಂಗಳಲ್ಲಿ ನಡೆದ ಆನೆ ಗಣತಿ ಪ್ರಕಾರ ರಾಜ್ಯದ ಕಾಡುಗಳಲ್ಲಿ 6,049 ಆನೆಗಳಿದ್ದರೆ ಎರಡನೇ ಸ್ಥಾನದಲ್ಲಿ 5,719 ಆನೆಗಳಿರುವ ಅಸ್ಸಾಂ ಇದೆ. 3ನೇ ಸ್ಥಾನದಲ್ಲಿ 3,054 ಆನೆಗಳನ್ನು ಹೊಂದಿರುವ ನೆರೆಯ ಕೇರಳವಿದೆ.

ದೇಶದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಇರುವ ಆನೆಗಳ ಸಂಖ್ಯೆ ಎಷ್ಟು ಎಂಬುದನ್ನು ತಿಳಿಯಲು ಪ್ರತೀ ಮೂರು ಅಥವಾ ನಾಲ್ಕು ವರ್ಷಗಳಿಗೊಮ್ಮೆ ಗಣತಿ ನಡೆಯುವುದು ವಾಡಿಕೆ. 2017ರಲ್ಲಿ ನಡೆದ ಗಣತಿಯಲ್ಲಿ ರಾಜ್ಯದಲ್ಲಿ ಹಿಂದಿನ ಗಣತಿಯಲ್ಲಿ ಕಂಡುಬಂದದ್ದಕ್ಕಿಂತ ತುಸು ಇಳಿಕೆಯಾಗಿರುವುದು ತಿಳಿದು ಬಂದಿದೆ.

ಪ್ರತಿ ವರ್ಷ ಮಾನವ ಮತ್ತು ಆನೆ ಸಂಘರ್ಷದಿಂದ ಸುಮಾರು 100 ಆನೆಗಳು ಮತ್ತು 500ಕ್ಕೂ ಅಧಿಕ ಮಂದಿಯ ಜೀವ ಹಾನಿಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಆನೆ-ಮನುಷ್ಯನ ಸಂಘರ್ಷಕ್ಕೆ ಕಾರಣ, ಪರಿಹಾರ ಕಂಡು ಹಿಡಿಯುವ ಕಾಳಜಿಯೂ ಗಣತಿಯ ಹಿಂದೆ ಇದೆ. ರಾಜ್ಯದ ಕಾಡುಗಳಲ್ಲಿ 2007ರ ಗಣತಿ ಪ್ರಕಾರ 4,035 ಮತ್ತು 2010ರಲ್ಲಿ 5,780 ಆನೆಗಳಿದ್ದವು. 2012ರ ವೇಳೆಗೆ ಅದು 6,072ಕ್ಕೆ ತಲುಪಿತ್ತು. 2017ರ ವೇಳೆ 6,049ಕ್ಕೆ ಇಳಿದಿತ್ತು.

ಆನೆ ಗಣತಿ ಹೇಗೆ?
ದೇಶದ ಜನರ ಗಣತಿಯನ್ನು ಸುಲಭವಾಗಿ ಮಾಡಬಹುದು. ಆದರೆ ಆನೆಗಳ ಗಣತಿ ಹೇಗೆ ಎನ್ನುವ ಕುತೂಹಲ ಸಹಜ. ಯಾಕೆಂದರೆ ದಟ್ಟ ಕಾಡುಗಳಲ್ಲಿ ಆನೆಗಳನ್ನು ಎಣಿಸುವುದು ಕಷ್ಟಕರ. ಗಣತಿಯ ಆರಂಭಿಸುವ ಮೊದಲು ತರಬೇತಿ ನೀಡಲಾಗುತ್ತದೆ. ಗಣತಿಯಲ್ಲಿ ಮೂರು ವಿಧಾನಗಳನ್ನು ಅನುಸರಿಸಲಾಗುತ್ತಿದೆ.

Advertisement

ಆನೆಯ ಲದ್ದಿಯ ಮಾದರಿ ಸಂಗ್ರಹ ಮತ್ತು ನೇರವಾಗಿ ಎಣಿಕೆ ಮಾಡ ಲಾಗುತ್ತದೆ. ಅರಣ್ಯ ಪ್ರದೇಶ ಮತ್ತು ವಿಭಾಗೀಯ ಮಟ್ಟದಲ್ಲಿ ಮೂರು ಅಥವಾ ನಾಲ್ಕು ಮಂದಿ ಗಣತಿದಾರರು ನಿಗದಿತ ಬ್ಲಾಕ್‌ನಲ್ಲಿ ಸುತ್ತಾಡುವಂತೆ ಮಾಡಿ ನೇರವಾಗಿ ಕಾಣುವ ಸಂಖ್ಯೆಯನ್ನು ದಾಖಲಿಸುವುದು ಮತ್ತು ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ಎಣಿಸಿ ದಾಖಲು ಮಾಡಿಕೊಳ್ಳಲಾಗುತ್ತದೆ.

ಸೀಳು ದಾರಿಯಲ್ಲಿ ಲದ್ದಿಗಳ ಎಣಿಕೆ ಮಾಡಲಾ ಗುತ್ತದೆ. ಲದ್ದಿ ಸಾಂದ್ರತೆ, ದೈನಂದಿನ ಮಲ ವಿಸರ್ಜನೆ ಪ್ರಮಾಣ, ಮಲ ಕೊಳೆಯುವ ಪ್ರಮಾಣಗಳಿಂದ ಆನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ.

ಪ್ರತಿ ವಿಭಾಗದಲ್ಲೂ ನೀರಿರುವ ಗುಂಡಿ, ಹಳ್ಳಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಲ್ಲಿಗೆ ಭೇಟಿ ನೀಡುವ ಆನೆಗಳ ಸಂಖ್ಯೆ ಅವುಗಳ ಲಿಂಗವನ್ನು ನಮೂದಿಸಿ ಎಣಿಕೆಯಲ್ಲಿ ಸೇರಿಸಿಕೊಳ್ಳಲಾಗುತ್ತದೆ.

ಪ್ರತಿ ಬಾರಿ ದಕ್ಷಿಣ ಭಾರತದಲ್ಲಿ ನಡೆಯುವ ಆನೆ ಗಣತಿಯ ನೇತೃತ್ವವನ್ನು ಕರ್ನಾಟಕದ ಅರಣ್ಯ ಇಲಾಖೆಯೇ ವಹಿಸಿಕೊಳ್ಳುತ್ತದೆ. ಈ ಸಂಬಂಧ ಕೇಂದ್ರ
ಸರಕಾರ ಸೂಕ್ತ ನಿರ್ದೇಶನಗಳನ್ನು ನೀಡುತ್ತದೆ.

ರಾಜ್ಯದ ಎಲ್ಲೆಲ್ಲಿ ಗಣತಿ?
ಬಂಡಿಪುರ, ನಾಗರಹೊಳೆ, ಭದ್ರಾ, ಬನ್ನೇರುಘಟ್ಟ, ಬಿಆರ್‌ಟಿ, ಕೊಳ್ಳೇಗಾಲ ಮಡಿಕೇರಿ, ಹಾಸನ, ದಾಂಡೇಲಿ, ಬೆಂಗಳೂರು ಗ್ರಾಮಾಂತರ ಚಿಕ್ಕಮಗಳೂರು ಮೊದಲಾದ ಕಡೆಗಳಲ್ಲಿ ಆನೆ ಗಣತಿ ನಡೆಯುತ್ತದೆ.

ಮೇಲಿಂದ ಮೇಲೆ ಬೀಳುವ ಕಾಳಿYಚ್ಚು ಮತ್ತು ಮಾನವನ ಹಸ್ತಕ್ಷೇಪದಿಂದ ಅರಣ್ಯದೊಳಗೆ ಆನೆಗಳು ಸ್ವತ್ಛಂದವಾಗಿ ಇರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಂದು ಕಡೆ ನೆಲೆ ನಿಲ್ಲದೆ ಆನೆಗಳು ಸುತ್ತಾಡುತ್ತಿರುತ್ತವೆ. ಅವುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.
-ಭುವನೇಶ್‌ ಕೈಕಂಬ, ವನ್ಯಜೀವಿ ಸಂರಕ್ಷಕ

ಕಾಡಾನೆಗಳು ಹಿಂಡು ಹಿಂಡಾಗಿರುತ್ತವೆ. ಸಲಗವೊಂದು ದಿನಕ್ಕೆ ಸಾವಿರ ಕಿ.ಮೀ.ನಷ್ಟು ದೂರದ ತನಕವೂ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅವುಗಳು ಹೆಚ್ಚಾಗಿ ಸಂಚಾರದಲ್ಲೇ ಇರುವುದರಿಂದ ಅವುಗಳ ಪ್ರಮಾಣವನ್ನು ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟ. ಈ ಹಿಂದಿನ ಗಣತಿ ಪ್ರಕಾರ ರಾಜ್ಯದಲ್ಲಿ ಅತೀ ಹೆಚ್ಚು ಆನೆಗಳಿವೆ.
– ಡಾ| ಕರಿಕ್ಕಲನ್‌ ಪಿ., ಉಪರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next