Advertisement

ಜನಸಂಖ್ಯೆಗಿಂತ ವೇಗವಾಗಿ ಏರುತ್ತಿದೆ ವಾಹನ ಸಂಖ್ಯೆ

12:25 PM Feb 04, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆ ಒಂದು ಕೋಟಿ. ಆದರೆ, ಇಲ್ಲಿನ ವಾಹನಗಳ ಸಂಖ್ಯೆ 67 ಲಕ್ಷ ! ಹೌದು, ನಗರದ ಜನಸಂಖ್ಯೆಗೆ ಪೈಪೋಟಿ ಎಂಬಂತೆ ವಾಹನಗಳ ಸಂಖ್ಯೆಯೂ ಏರುತ್ತಿದ್ದು, ಜನಸಂಖ್ಯೆಗೆ ಹೋಲಿಸಿದರೆ ಮೂವರಿಗೆ ಎರಡು ವಾಹನ ಇದ್ದಂತಾಗಿದೆ. 

Advertisement

ಕಳೆದ ಆರು ವರ್ಷದಲ್ಲಿ 32 ಲಕ್ಷವಿದ್ದ ವಾಹನಗಳ ಸಂಖ್ಯೆ ದುಪ್ಪಟ್ಟು ಆಗಿದ್ದು, ದಿನನತ್ಯ 1600 ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿವೆ. ಇದು ಹೀಗೇ ಮುಂದುವರಿದರೆ ಜನಸಂಖ್ಯೆಯ ಪ್ರಮಾಣಕ್ಕೆ ಸಮಾನವಾಗಿ ವಾಹನಗಳ ಸಂಖ್ಯೆಯೂ ತಲುಪ ಸಾಧ್ಯತೆಗಳಿವೆ.  ಸಂಚಾರ ದಟ್ಟಣೆ ಹಾಗೂ ವಾಯುಮಾಲಿನ್ಯದ ವಿಚಾರದಲ್ಲಿ ಇದು ಆತಂಕಕಾರಿ ಸಂಗತಿಯೂ ಹೌದು.

ಇದೇ ರೀತಿ ಮುಂದುವರಿದರೆ  ವಾಹನಗಳ ದಟ್ಟಣೆಯಲ್ಲಿ ದೇಶದಲ್ಲಿ ಮೊದಲ ಸ್ಥಾನ ಪಡೆದಿರುವ ದೆಹಲಿಯನ್ನು ಬೆಂಗಳೂರು ಹಿಂದಿಕ್ಕುವ ಕಾಲ ದೂರವಿಲ್ಲ. 2015ರ ಡಿಸೆಂಬರ್‌ ಅಂತ್ಯಕ್ಕೆ ಬಸ್‌, ಲಾರಿ, ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿದ್ದ ಒಟ್ಟು ವಾಹನಗಳ ಸಂಖ್ಯೆ 59,49,816.  ಅದರೆ, 2016ರ ಡಿಸೆಂಬರ್‌ ಅಂತ್ಯಕ್ಕೆ ನೋಂದಣಿಯಾಗಿರುವ ಒಟ್ಟು ವಾಹನಗಳ ಸಂಖ್ಯೆ 67 ಲಕ್ಷವನ್ನು ಮೀರಿದೆ. 

ಜನಸಂಖ್ಯೆಗಿಂತ ವೇಗ: ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಕೇವಲ 12 ತಿಂಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಹೊಸ ವಾಹನಗಳು ನಗರದ ವಾಹನ ದಟ್ಟನೆಗೆ ಸೇರ್ಪಡೆಯಾಗಿವೆ. ಅ ಮೂಲಕ, ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಹೆಚ್ಚಳದ ಸರಾಸರಿ ಪ್ರಮಾಣ ಶೇ.10ರಷ್ಟು ಆಗಿದೆ. ಗಮನಾರ್ಹವೆಂದರೆ, ಒಂದು ಕೋಟಿ ಗಡಿ ದಾಟಿರುವ ಬೆಂಗಳೂರು ನಗರದ ಜನಸಂಖ್ಯೆ ಹೆಚ್ಚಳದ ಪ್ರಮಾಣ ಶೇ.6.2ರಷ್ಟು. ಅಂದರೆ, ಬೆಂಗಳೂರಿನಲ್ಲಿ ಜನಸಂಖ್ಯೆಗಿಂತಲೂ ವೇಗವಾಗಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿವೆ.

ಇನ್ನು ಅತಿಹೆಚ್ಚು ಅಂದರೆ, 88 ಲಕ್ಷದಷ್ಟು ವಾಹನಗಳಿರುವ ದೆಹಲಿಯಲ್ಲೂ ವಾಹನಗಳ ಹೆಚ್ಚಳದ ಸರಾಸರಿ ಪ್ರಮಾಣ ಈಗ ಶೇ.6ಕ್ಕೆ ಇಳಿದಿದೆ.  
ಮಹಾನಗರ ಬೆಂಗಳೂರಿನಲ್ಲಿ 2009-10ರ ಅವಧಿಯಲ್ಲಿ ಒಟ್ಟು ನೋಂದಣಿಯಾಗಿದ್ದ ವಾಹನ ಸಂಖ್ಯೆ 35 ಲಕ್ಷದಷ್ಟು ಇತ್ತು. ಈ ಅವಧಿಯಲ್ಲಿ ಬೆಂಗಳೂರು ನಗರದಲ್ಲೆಡೆ, ಬಿಎಂಟಿಸಿ ಬಸ್‌ಗಳ ಓಡಾಟ ಜಾಸ್ತಿಯಾಗುವ ಮೂಲಕ ಸಾರ್ವಜನಿಕ ಸಾರಿಗೆ ಸೇವೆಯೂ ಉತ್ತಮವಾಗಿತ್ತು. ಇನ್ನು 2011ರಲ್ಲಿ ಮೊದಲ ಬಾರಿಗೆ ಮೆಟ್ರೊ ರೈಲು ಸಂಚಾರ ಪ್ರಾರಂಭವಾಗಿತ್ತು.

Advertisement

ನಗರದಲ್ಲಿ ಈಗ ಸಾರ್ವಜನಿಕರ ಸಂಚಾರಕ್ಕೆ ಒಟ್ಟು 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್‌ಗಳು ದಿನನಿತ್ಯ ಓಡಾಡುತ್ತಿವೆ. ಇನ್ನೊಂದೆಡೆ, ಬೆಂಗಳೂರಿನಲ್ಲಿ ಮೆಟ್ರೊ ರೈಲು ಸಂಪರ್ಕ ಸೇವೆಯೂ ವಿಸ್ತರಣೆಯಾಗುತ್ತಿವೆ. ಈ ರೀತಿ, ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಗಮನಾರ್ಹ ಪ್ರಗತಿಯಾಗುತ್ತಿದ್ದರೂ, ಬೆಂಗಳೂರು ನಗರದಲ್ಲಿ ರಸ್ತೆಗಿಳಿಯುತ್ತಿರುವ ಹೊಸ ವಾಹನಗಳ ಸಂಖ್ಯೆ ಇಳಿಮುಖವಾಗಿಲ್ಲ ಎಂಬುದು ಆತಂಕದ ವಿಚಾರ. 

ಬೆಂಗಳೂರಿನ ವಾಹನಗಳ ವಿವರ
* 45,93,558 ದ್ವಿಚಕ್ರ ವಾಹನಗಳು
* 12,81,525 ಕಾರುಗಳು
* 42,456 ಬಸ್‌ಗಳು
* 1,29,310 ಟ್ಯಾಕ್ಸಿ, ಕ್ಯಾಬ್‌
* 6700000 ಒಟ್ಟು ವಾಹನಗಳ ಸಂಖ್ಯೆ
* ರಾಜ್ಯದಲ್ಲಿ ಒಟ್ಟು 1,73,12,771 ವಾಹನಗಳು

* ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next