ದೇವದುರ್ಗ: ಒಂದೆಡೆ ಉಪನ್ಯಾಸಕರ ಕೊರತೆ ಮತ್ತೂಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ಮಧ್ಯೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶ ಕುಸಿತದಿಂದ ಪಟ್ಟಣದ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜು ತನ್ನ ಅಸ್ತಿತ್ವ ಕಳೆದುಕೊಳ್ಳುವತ್ತ ಸಾಗಿದೆ.
ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು 1973ರಲ್ಲಿ ಆರಂಭವಾಗಿದ್ದು ಆಗ ಕಲಾ ವಿಭಾಗ ಮಾತ್ರ ಇತ್ತು. 1993ರಲ್ಲಿ ವಿಜ್ಞಾನ ವಿಭಾಗ ಮತ್ತು 2007ರಲ್ಲಿ ವಾಣಿಜ್ಯ ವಿಭಾಗ ಆರಂಭವಾಗಿದೆ. ಈಗ ಸದ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದೇ ಅಪರೂಪವಾಗಿದೆ. ಅದೂ ಪ್ರಸಕ್ತ ವರ್ಷ ಕಲಾ ವಿಭಾಗಕ್ಕೆ 22 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿಜ್ಞಾನ, ವಾಣಿಜ್ಯ ವಿಭಾಗಕ್ಕೆ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಕೇವಲ ಕಲಾ ವಿಭಾಗಕ್ಕೆ ಮಾತ್ರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಅದು ಎರಡಂಕಿ ಕೂಡ ದಾಟದಿರುವುದು ವಿಪರ್ಯಾಸವಾಗಿದೆ.
ಉಪನ್ಯಾಸಕರ ಹುದ್ದೆ ಖಾಲಿ: ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಪ್ರಾಚಾರ್ಯ ಸೇರಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೌತಶಾಸ್ತ್ರ, ಗಣಿತ ಶಾಸ್ತ್ರ, ಜೀವಶಾಸ್ತ್ರ, ವಾಣಿಜ್ಯ ಸೇರಿ 8 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಕನ್ನಡ, ಸಮಾಜಶಾಸ್ತ್ರ ಉಪನ್ಯಾಸಕರಿದ್ದು, ಸಮಾಜ ಶಾಸ್ತ್ರ ಉಪನ್ಯಾಸಕರೇ ಪ್ರಭಾರಿ ಪ್ರಚಾರ್ಯರಾಗಿದ್ದಾರೆ. ಎಸ್‌ಡಿಎ, ಪರಿಚಾರಕ ಹುದ್ದೆಗಳು ಖಾಲಿ ಇವೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯದ್ದರಿಂದ ಉಪನ್ಯಾಸಕಿ ಸುಮಲತಾ ಟಿ.ಎ. ಮೈಸೂರು ಜಿಲ್ಲೆಯ ಸರ್ಕಾರಿ ಪ.ಪೂ. ಕಾಲೇಜಿಗೆ ಎರವಲು ಸೇವೆ ಮೇಲೆ ಹೋಗಿದ್ದಾರೆ. ಇನ್ನು ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪರಿಕರಗಳು ಕೋಣೆಯಲ್ಲಿ ನಿರುಪಯುಕ್ತವಾಗಿವೆ.
ವಿಜ್ಞಾನ-ವಾಣಿಜ್ಯ ವಿಭಾಗಕ್ಕೆ ವಿದ್ಯಾರ್ಥಿಗಳೇ ಇಲ್ಲ: ಇನ್ನು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಹಿನ್ನೆಲೆಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮುಂದಾಗುತ್ತಿಲ್ಲ. ಹೀಗಾಗಿ ಕಲಾ ವಿಭಾಗ ಮಾತ್ರ ನಡೆಸಲಾಗುತ್ತಿದೆ.
ಜಾಗೃತಿ ಕೊರತೆ: ಕಾಲೇಜಿನಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತವಾಗುತ್ತಿದ್ದರೂ ಕಾಲೇಜಿನ ಆಡಳಿತ ಮಂಡಳಿ ಜಾಗೃತಿ ಮೂಡಿಸಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವಲ್ಲಿ ವಿಫಲವಾಗಿದೆ. ಇದೇ ರೀತಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತ ಸಾಗಿದಲ್ಲಿ ಮುಂದೊಂದು ದಿನ ಕಾಲೇಜನ್ನು ಮುಚ್ಚಿದರೂ ಅಚ್ಚರಿಪಡಬೇಕಿಲ್ಲ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕೂಡ ಕ್ರಮ ವಹಿಸುತ್ತಿಲ್ಲ.
ಸೌಲಭ್ಯ ಕೊರತೆ: ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಹಳೆ ಕೋಣೆಗಳು ಶಿಥಿಲಗೊಂಡಿವೆ. ಹೊಸದಾಗಿ ಕಟ್ಟಡ ಮತ್ತು ಶೌಚಾಲಯ ನಿರ್ಮಿಸಿದ್ದು, ಇನ್ನೂ ಕಟ್ಟಡವನ್ನು ಉದ್ಘಾಟಿಸಿ ಕಾಲೇಜಿಗೆ ಹಸ್ತಾಂತರಿಸಿಲ್ಲ. ಕೂಡಲೇ ಕ್ಷೇತ್ರದ ಶಾಸಕರು, ಅಧಿಕಾರಿಗಳು ಕಾಲೇಜಿನಲ್ಲಿ ಅಗತ್ಯ ಉಪನ್ಯಾಸಕರ ನೇಮಕದ ಜೊತೆಗೆ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಿಸಲು ಕ್ರಮ ವಹಿಸಬೇಕೆಂದು ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ ಆಗ್ರಹಿಸಿದ್ದಾರೆ.
•ನಾಗರಾಜ ತೇಲ್ಕರ್