Advertisement

ಈ ವರ್ಷ ಜ್ವರಕ್ಕೆ ಚಿಕಿತ್ಸೆ ಪಡೆದವರ ಸಂಖ್ಯೆ ಕಡಿಮೆ: ಡಿಸಿ

09:55 PM Aug 02, 2019 | Sriram |

ಕಾಸರಗೋಡು: ಜಿಲ್ಲೆಯಲ್ಲಿ ಜ್ವರದಿಂದ ಚಿಕಿತ್ಸೆ ಪಡೆದವರು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ಪಿ. ದಿನೇಶ್‌ ಕುಮಾರ್‌ ತಿಳಿಸಿದರು.

Advertisement

2019ರ ಜನವರಿಯಿಂದ ಜುಲೈ 31 ವರೆಗೆ 95,123 ಮಂದಿ ಜ್ವರ ತಗಲಿದ ಪರಿಣಾಮ ಚಿಕಿತ್ಸೆ ಪಡೆದಿದ್ದಾರೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 1,02,654 ಮಂದಿ ಜ್ವರದಿಂದ ಬಳಲಿ ಚಿಕಿತ್ಸೆ ಪಡೆದಿದ್ದರು ಎಂದವರು ಹೇಳಿದರು. ಈ ವರ್ಷ 473 ಮಂದಿ ಡೆಂಗ್ಯೂ ಜ್ವರ ಬಾಧಿತರು ಎಂದು ಶಂಕಿಸಲಾಗಿದ್ದು, ಇವರಲ್ಲಿ 137 ಮಂದಿಗೆ ಡೆಂಗೆ ತಗುಲಿರುವುದು ಖಚಿತವಾಗಿತ್ತು. ಡೆಂಗ್ಯೂ ಜ್ವರದಿಂದ ಈ ಬಾರಿ ಯಾರೂ ಮೃತಪಟ್ಟಿರುವುದು ವರದಿಯಾಗಿಲ್ಲ. 2018ನೇ ಇಸವಿಗೆ ಹೋಲಿಸಿದರೆ ಡೆಂಗ್ಯೂ ಜ್ವರ ತಗಲಿರುವುದು ಮತ್ತು ಅದರಿಂದ ಮೃತ‌ಪಟ್ಟಿರುವ ಪ್ರಕರಣಗಳು ಕುಂಠಿತವಾಗಿವೆ ಎಂದು ಹೇಳಬಹುದು ಎಂದವರು ತಿಳಿಸಿದರು.

2018ರಲ್ಲಿ ಡೆಂಗ್ಯೂ ಜ್ವರ ತಗಲಿರುವ ಸಂಶಯದಲ್ಲಿ 3,115 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದ್ದು, 569 ಮಂದಿಗೆ ರೋಗ ತಗುಲಿರುವುದು ಖಚಿತವಾಗಿತ್ತು. 4 ಮಂದಿ ಮೃತಪಟ್ಟಿದ್ದರು. ಮೃತರಲ್ಲಿ ಮೂವರಿಗೆ ಈ ರೋಗ ತಗುಲಿರುವುದು ಖಚಿತವಾಗಿತ್ತು ಎಂದವರು ಹೇಳಿದರು.

ಮಲೇರಿಯಾ ರೋಗಬಾಧೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ. ಈ ವರೆಗೆ 33 ಮಂದಿಯಲ್ಲಿ ಈ ರೋಗ ಲಕ್ಷಣ ಕಂಡುಬಂದಿದೆ. ಕಳೆದ ವರ್ಷ 91 ಮಂದಿಗೆ ಈ ರೋಗ ತಗಲಿರುವುದು ಖಚಿತವಾಗಿತ್ತು. ಜಿಲ್ಲೆಯಲ್ಲಿ ಈ ವರ್ಷ 21,663 ಮಂದಿ ಜಲೋದರ ರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 20,236 ಮಂದಿ ಈ ರೋಗಕ್ಕೆ ಚಿಕಿತ್ಸೆ ಪಡೆದಿದ್ದರು.

ಹೆಪಟೈಟಸ್‌ ರೋಗ ಈ ವರ್ಷ ಹೆಚ್ಚಳಗೊಂಡಿರುವುದು ಪತ್ತೆಯಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಕಳಕಳಿ ವ್ಯಕ್ತಪಡಿಸಿದರು. 2018ರಲ್ಲಿ ಈ ಅವ ಧಿಯಲ್ಲಿ 71 ಮಂದಿಯಲ್ಲಿ ಈ ರೋಗ ಲಕ್ಷಣಗಳು ಕಂಡುಬಂದಿದ್ದುವು. ಆದರೆ ಈ ವರ್ಷ ಇದೇ ಅವ ಧಿಯಲ್ಲಿ 173 ಮಂದಿಯಲ್ಲಿ ಸಂಶಯವಿದ್ದು, 21 ಮಂದಿಯಲ್ಲಿ ಈ ರೋಗ ಖಚಿತವಾಗಿದೆ.
2018ರಲ್ಲಿ 4 ಮಂದಿಗೆ ಎಚ್‌1ಎನ್‌1 ರೋಗ ತಗಲಿರುವ ಸಂದೇಹಗಳಿದ್ದವು. ಈ ವರ್ಷ 34 ಮಂದಿಗೆ ಈ ರೋಗವಿರುವ ಸಂದೇಹಗಳಿವೆ. ಇವರಲ್ಲಿ 22 ಮಂದಿಯ ರೋಗ ಖಚಿತವಾಗಿದೆ ಎಂದವರು ನುಡಿದರು.

Advertisement

ಜಿಲ್ಲೆಯ ಪುತ್ತಿಗೆ ಗ್ರಾ.ಪಂ.ನಲ್ಲಿ ಸಹೋದರರಿಬ್ಬರು ಜ್ವರದಿಂದ ಮೃತಪಟ್ಟ ಪ್ರಕರಣದಲ್ಲಿ ಬ್ಯಾಕ್ಟೀರಿಯಾದಿಂದ ತಗಲುವ ಮೀಲಿಯಾಯ್‌ ಡಾಸಿಸ್ಟ್‌ ಎಂಬ ಕಾಯಿಲೆ ಇವರ ಮರಣಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ ಎಂದು ಡಿ.ಎಂ.ಒ. ತಿಳಿಸಿದರು. ಜಿಲ್ಲೆಯಲ್ಲಿ ಎಚ್‌1ಎನ್‌1 ಹೆಚ್ಚಳಗೊಂಡಿರುವ ವರದಿಗಳಿದ್ದರೂ, ಸಾರ್ವಜನಿಕರು ಭೀತರಾಗಬೇಕಿಲ್ಲ.

ಅಗತ್ಯದ ಮುಂಜಾಗರೂಕ ಕ್ರಮಗಳನ್ನು ಈಗಾಗಲೇ ಆರೋಗ್ಯ ಇಲಾಖೆ ಕೈಗೊಂಡಿದೆ ಮತ್ತು ಈ ರೋಗದ ಪ್ರತಿರೋಧಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳೂ ಸಿದ್ಧವಾಗಿವೆ ಎಂದವರು ಹೇಳಿದರು. ಲಕ್ಷಣಗಳನ್ನು ಗುರುತಿಸಿ ಸಾಂಕ್ರಾ ಮಿಕ ರೋಗಗಳ ಪ್ರತಿರೋಧ ನಡೆಸಲು ಸಾಧ್ಯ.

ಹಳದಿ ಜ್ವರ: ಹಳದಿ ರೋಗವು ದೇಹದ ಪ್ರಧಾನ ಅಂಗವಾಗಿರುವ ಕರುಳನ್ನು ಬಾ ಧಿಸುವ ರೋಗವಾಗಿದೆ. ಚಿಕಿತ್ಸೆ ಮತ್ತು ಶುಶ್ರೂಷೆ ಈ ಕಾಯಿಲೆಗೆ ಅಗತ್ಯ. ಜ್ವರ, ಹಸಿವಿಲ್ಲದಿರುವುದು, ವಾಂತಿ-ಬೇಧಿ, ಪ್ರಬಲ ಕ್ಷೀಣ, ಅಜೀರ್ಣ, ಕಣ್ಣು-ಉಗುರುಗಳು ಹಳದಿ ಬಣ್ಣ ಹೊಂದಿರುವುದು ಈ ರೋಗದ ಪ್ರಧಾನ ಲಕ್ಷಣಗಳಾಗಿವೆ. ರೋಗಿ ಬಳಸಿದ ಆಹಾರ, ಬಟ್ಟೆ, ಕುಡಿಯುವ ನೀರು ಇತ್ಯಾದಿಗಳಿಂದ ರೋಗ ಹರಡುತ್ತದೆ.

ಕುದಿಸಿ ತಣಿಸಿದ ನೀರನ್ನು ಮಾತ್ರ ಬಳಸಬೇಕು, ತಣಿದ ಆಹಾರ ಸೇವಿಸಕೂಡದು, ಹಾದಿ ಬದಿಯಿಂದ ಖರೀದಿಸಿದ ಪಾನೀಯ ಸೇವಿಸಕೂಡದು, ಅಣುಮುಕ್ತ ನೀರನ್ನು ಖಚಿತಪಡಿಸಿಕೊಂಡು ಖರೀದಿಸಬೇಕು, ಜಲಾಶಯಗಳು ಮಲಿನಗೊಳ್ಳದಂತೆ ನೋಡಿಕೊಳ್ಳಬೇಕು, ಬಾವಿ ನೀರನ್ನು ಕ್ಲೋರಿನೆಟ್‌ ಆಗಿಸಬೇಕು, ಶೌಚಾಲಯಗಳಲ್ಲಿ ಮಾತ್ರ ಮಲ, ಮೂತ್ರ ವಿಸರ್ಜನೆ ನಡೆಸಬೇಕು, ವಿಸರ್ಜನೆಯ ನಂತರ ಕೈಕಾಲು ಶುಚಿಯಾಗಿ ತೊಳೆಯಬೇಕು.

ಮಲೇರಿಯ: ಅನೋಫಿಲಿಸ್‌ ವಿಭಾಗಕ್ಕೆ ಸೇರಿದ ಹೆಣ್ಣು ಸೊಳ್ಳೆಗಳೂ ಮಲೇರಿಯಾ ರೋಗ ಹರಡುತ್ತವೆ. ಪ್ರಬಲ ಚಳಿ ಜ್ವರ ಈ ರೋಗದ ಪ್ರಧಾನ ಲಕ್ಷಣವಾಗಿದೆ. ಸೊಳ್ಳೆ ಕಡಿತದಿಂದ ಒಬ್ಬರಿಂದ ಮತ್ತೂಬ್ಬರಿಗೆ ಕಾಯಿಲೆ ಹರಡುತ್ತದೆ. ಮಲಗುವ ವೇಳೆ ಸೊಳ್ಳೆ ಬಲೆ ಬಳಸಬೇಕು, ಡ್ರೈಡೇ ಆಚರಿಸಬೇಕು, ಸೊಳ್ಳೆ ಮೊಟ್ಟೆಯಿರಿಸುವ, ಸಂಖ್ಯೆ ವೃದ್ಧಿಯಾಗುವ ಸಾಧ್ಯತೆ ಇಲ್ಲದಂತೆ ನೋಡಿಕೊಳ್ಳಬೇಕು. ಬಾವಿ ಸಹಿತ ಜಲಾಶಯಗಳಲ್ಲಿ ಗಪ್ಪಿ ಮೀನು ಸಾಕಬೇಕು. ಮಳೆಗಾಲದಲ್ಲಿ ಇತರ ರಾಜ್ಯಗಳಿಗೆ ಪ್ರಯಾಣವನ್ನು ತಾತ್ಕಾಲಿಕವಾಗಿ ಕೈಬಿಡಬೇಕು. ಜ್ವರ ತಗುಲಿದರೆ ಕಡ್ಡಾಯವಾಗಿ ರಕ್ತ ಪರೀಕ್ಷೆ ನಡೆಸಬೇಕು. ಬೇರೆ ರಾಜ್ಯಗಳಿಂದ ಆಗಮಿಸಿದ ಕಾರ್ಮಿಕರು ಈ ಹಿಂದೆ ಮಲೇರಿಯದಿಂದ ಬಳಲಿದ್ದರೆ, ಮತ್ತೆ ರಕ್ತ ಪರೀಕ್ಷೆ ನಡೆಸಬೇಕು.

ಎಚ್‌1-ಎನ್‌1: ವೈರಸ್‌ ಮೂಲಕ ಗಾಳಿಯಲ್ಲಿ ಹರಡುವ ಕಾಯಿಲೆಯಿದು. ಜ್ವರ, ಕೆಮ್ಮು, ಗಂಟಲು ನೋವು, ಶೀತ, ದೇಹದಲ್ಲಿ ನೋವು ಇತ್ಯಾದಿಗಳು ಪ್ರಧಾನ ಲಕ್ಷಣಗಳಾಗಿವೆ. ಸೀನುವ ವೇಳೆ, ಕೆಮ್ಮುವ ವೇಳೆ ಕರವಸ್ತಬಳಸಿಕೊಳ್ಳಬೇಕು. ಕುದಿಸಿ ತಣಿಸಿದ ನೀರನ್ನೇ ಸೇವಿಸಬೇಕು. ಆಹಾರ ಸೇವನೆಯ ಮೊದಲು, ನಂತರ, ಶೌಚದನಂತರ ಕೈಕಾಲುಗಳನ್ನು ಸಾಬೂನು ಬಳಸಿ ಚೆನ್ನಾಗಿ ತೊಳೆಯಬೇಕು. ಆಹಾರದ ಪಾತ್ರೆಯನ್ನು ಮುಚ್ಚಿರಿಸಬೇಕು.

ಇಲಿ ಜ್ವರ ಖಚಿತ
ಈ ವರ್ಷ ಇಲಿಜ್ವರ ತಗಲಿರುವ ಸಂಶಯದಲ್ಲಿ ಜಿಲ್ಲೆಯಲ್ಲಿ 12 ಮಂದಿಯನ್ನು ತಪಾಸಣೆ ಗೊಳಪಡಿ ಸಲಾಗಿದ್ದು, 7 ಮಂದಿಗೆ ಕಾಯಿಲೆ ಖಚಿತವಾಗಿದೆ. ಇಲಿಜ್ವರದಿಂದ ಈ ವರ್ಷ ಯಾರೂ ಮೃತಪಟ್ಟಿರುವುದು ವರದಿಯಾಗಿಲ್ಲ. 2018ರಲ್ಲಿ 16 ಮಂದಿಯನ್ನು ಈ ರೋಗ ತಗುಲಿರುವ ಸಂಶಯದಲ್ಲಿ ತಪಾಸಣೆಗೊಳಪಡಿಸಲಾಗಿದ್ದು, 3 ಮಂದಿಗೆ ಖಚಿತವಾಗಿತ್ತು. ಖಚಿತಗೊಂಡವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next