Advertisement

ಕಲುಷಿತ ನೀರು ಸೇವನೆ: ಅಸ್ವಸ್ಥರ ಸಂಖ್ಯೆ 97ಕ್ಕೆ ಏರಿಕೆ

11:17 PM Aug 02, 2023 | Team Udayavani |

ಚಿತ್ರದುರ್ಗ: ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡವರ ಸಂಖ್ಯೆ 97ಕ್ಕೆ ಏರಿಕೆಯಾಗಿದ್ದು, ಏಳು ಜನ ಗುಣಮುಖರಾಗಿದ್ದಾರೆ. ಈ ಮಧ್ಯೆ ದಾವಣಗೆರೆ ಎಸ್ಸೆಸ್‌ ಆಸ್ಪತ್ರೆಯಲ್ಲಿ ಬುಧವಾರ ವಡ್ಡರ ಸಿದ್ದವ್ವನಹಳ್ಳಿ ಮೂಲದ ಯುವಕ ಪ್ರವೀಣ್‌ (25) ಮೃತಪಟ್ಟಿದ್ದು, ಕಲುಷಿತ ನೀರು ಕುಡಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

Advertisement

ಮೃತ ಪ್ರವೀಣ್‌ ರವಿವಾರ ಕವಾಡಿಗರ ಹಟ್ಟಿಯಲ್ಲಿರುವ ಬಂಧುಗಳ ಮನೆಗೆ ಬಂದು ಹೋಗಿದ್ದ ಎನ್ನಲಾಗುತ್ತಿದೆ. ಈ ಕುರಿತು ಜಿಲ್ಲಾ ಧಿಕಾರಿ ದಿವ್ಯಪ್ರಭು ಪ್ರತಿಕ್ರಿಯಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಅನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಪ್ರಕರಣಕ್ಕೆ ಸಂಬಂ ಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರಗಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದ್ದು, ಮೂರು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಕಾಲಮಿತಿ ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಒಟ್ಟು 60 ಜನ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 18 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಸೇವಿಸಿ ಮೃತಪಟ್ಟ ಪ್ರಕರಣ ಕುರಿತು ತನಿಖೆ ಆರಂಭವಾಗಿದೆ. ಗ್ರಾಮಸ್ಥರು ನೀರಗಂಟಿ ಕುರಿತು ಅನುಮಾನ ವ್ಯಕ್ತಪಡಿಸಿದ್ದು, ಅವರನ್ನು ಕರೆದು ವಿಚಾರಣೆ ನಡೆಸಿದ್ದೇವೆ. ಎಫ್‌ಎಸ್‌ಎಲ್‌ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ಕೆ.ಪರಶುರಾಮ್‌ ಮಾಹಿತಿ ನೀಡಿದ್ದಾರೆ.

ಪರಿಹಾರಕ್ಕೆ ಪಟ್ಟು-ಡಿಸಿ ಮನವೊಲಿಕೆ
ಕಲುಷಿತ ನೀರು ಸೇವನೆಯಿಂದ ಮಂಗಳವಾರ ಮೃತಪಟ್ಟಿದ್ದ ಮಂಜುಳಾ ಮೃತದೇಹವನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆ ಮಾಡದೆ ಮನೆ ಮುಂದೆ ಇಟ್ಟುಕೊಂಡು ಪರಿಹಾರಕ್ಕೆ ಪಟ್ಟು ಹಿಡಿದಿದ್ದರು. ಮಧ್ಯಾಹ್ನ ಮೃತ ಮಂಜುಳಾ ಮನೆ ಬಳಿ ಆಗಮಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಎಸ್‌ಪಿ ಕೆ. ಪರಶುರಾಮ್‌ ಮೃತರ ಸಂಬಂಧಿಕರ ಜತೆ ಮಾತುಕತೆ ನಡೆಸಿ ಮನವೊಲಿಸಿದರು.

Advertisement

ಈಗಾಗಲೇ ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಮರಣೋತ್ತರ ವರದಿ ಹಾಗೂ ನೀರಿನ ಎಫ್‌ಎಸ್‌ಎಲ್‌ ವರದಿ ಬಂದ ಅನಂತರ ಜಿಲ್ಲಾಡಳಿತ ಮುಂದಿನ ಕ್ರಮ ತೆಗೆದುಕೊಂಡು ಪರಿಹಾರ ನೀಡಲಿದೆ ಎಂದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ಹಾಗೂ ಕುಟುಂಬದವರು ಬಳಿಕ ಮಂಜುಳಾ ಅಂತ್ಯಕ್ರಿಯೆ ನೆರವೇರಿಸಿದರು. ಇತ್ತ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ರಘು ಮೃತದೇಹವನ್ನು ಬುಧವಾರ ಗ್ರಾಮಕ್ಕೆ ತಂದಿದ್ದು, ಅವರ ಅಂತ್ಯಕ್ರಿಯೆಯನ್ನೂ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next