Advertisement

ರಾಜ್ಯದಲ್ಲಿ ನವೋದ್ಯಮಿಗಳ ಸಂಖ್ಯೆ 20 ಸಾವಿರಕ್ಕೆ ಏರಿಕೆ: ಡಿಸಿಎಂ ಅಶ್ವತ್ಥನಾರಾಯಣ

09:52 AM Feb 12, 2020 | sudhir |

ಬೆಂಗಳೂರು: ರಾಜ್ಯದಲ್ಲಿ ಸದ್ಯ ನವೋದ್ಯಮಿಗಳ ಸಂಖ್ಯೆ 9 ಸಾವಿರದಷ್ಟಿದ್ದು ಮುಂದಿನ ಎರಡು-ಮೂರು ವರ್ಷಗಳಲ್ಲಿ ಈ ಸಂಖ್ಯೆ ಸುಮಾರು 20 ಸಾವಿರಕ್ಕೆ ಏರಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎಸ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ “ಉದ್ಯೋಗದಾತರ ಅಗತ್ಯಕ್ಕೆ ಅನುಗುಣವಾಗಿ ಕೌಶಲ ತರಬೇತಿ’ ಕುರಿತ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿವೆ. ಹಲವೆಡೆಗಳಲ್ಲಿ ಉದ್ಯೋಗವಕಾಶಗಳು ಇವೆ. ಆದರೆ ಅವುಗಳ ಬಗ್ಗೆ ಯುವ ಸಮೂಹಕ್ಕೆ ಸರಿಯಾದ ಮಾಹಿತಿಯಿಲ್ಲ ಎಂದು ತಿಳಿಸಿದರು.

ಉದ್ಯೋಗ ಮತ್ತು ಭವಿಷತ್ತಿನ ಕೋರ್ಸ್‌ಗಳ ಬಗ್ಗೆ ಪ್ರೌಢಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಉದ್ಯೋಗದ ಮತ್ತು ಭವಿಷ್ಯತ್ತಿನ ಕೋರ್ಸ್‌ಗಳ ಬಗ್ಗೆ ವಿದೇಶಗಳಲ್ಲಿ ಮಕ್ಕಳಿಗೆ ಪ್ರಾಥಮಿಕ ಶಾಲಾ ಮಟ್ಟದಲ್ಲೆ ಮಾಹಿತಿ ನೀಡಲಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ಆ ಪ್ರವೃತ್ತಿಯಿಲ್ಲ. ಉದ್ಯೋಗದ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ ಎಂದರು.

ಪ್ರತಿಯೊಂದು ಶಾಲೆಯಲ್ಲಿ ಯುವ ಸಬಲೀಕರಣ ಕೇಂದ್ರ ತೆರೆಯುವ ಆಲೋಚನೆ ಸರ್ಕಾರದ ಮುಂದಿದೆ. ಯುವ ಸಬಲೀಕರಣ ಕೇಂದ್ರದ ಮೂಲಕ ಪ್ರತಿ ಪ್ರೌಢ ಶಾಲೆಯಲ್ಲಿ ಒಬ್ಬ ಸಮಾಲೋಚಕರನ್ನು ನಿಗದಿಪಡಿಸಿ, ಪ್ರೌಢಶಾಲೆ ಮಟ್ಟದಲ್ಲೇ ವಿದ್ಯಾರ್ಥಿಗಳಿಗೆ ಮುಂದಿನ ಓದು, ಕೌಶಲ ತರಬೇತಿ, ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

Advertisement

ಪಠ್ಯಗಳ ಪರಿಷ್ಕೃತವಾಗಬೇಕಾಗಿದೆ
ನಮ್ಮಲ್ಲಿರುವ ಪಠ್ಯ ವ್ಯವಸ್ಥೆ ಕೂಡ ಹಳೆ ಸಂಸ್ಕೃತಿಯಲ್ಲಿಯೇ ಇದೆ. ಇದಕ್ಕೆ ಎಂಜಿನಿಯರಿಂಗ್‌, ವಿಜ್ಞಾನ -ತಂತ್ರಜ್ಞಾನ ಪದವಿಗಳು ಕೂಡ ಹೊರತಲ್ಲ. ಆ ಹಿನ್ನೆಲೆಯಲ್ಲಿಯೇ ಎಂಜಿನಿಯರಿಂಗ್‌, ಡಿಪ್ಲೋಮಾ ಸೇರಿದಂತೆ ಹಲವು ಶೈಕ್ಷಣಿಕ ಪಠ್ಯ ಕ್ರಮಗಳನ್ನು ಪರಿಷ್ಕರಿಸಿ, ಮತ್ತಷ್ಟು ಸರಳಗೊಳಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ರತ್ನಪ್ರಭಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ 5 ಟ್ರಿಲಿಯನ್‌ ಆರ್ಥಿಕ ಪ್ರಗತಿ ಸಾಧಿಸಲು ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳ ಬರಬೇಕಾಗಿದೆ ಎಂದು ಹೇಳಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯ ಕೈಗಾರಿಕಾ ಕ್ಷೇತ್ರ ದೇಶದ ಆರ್ಥಿಕ ಬೆಳವಣಿಗೆಗೆ ಬೆನ್ನೆಲುಬಾಗಿದೆ. ಈ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳಾ ಉದ್ಯಮಿಗಳಿದ್ದು ಆ ಹಿನ್ನೆಲೆಯಲ್ಲಿ ದೊಡ್ಡ ಉದ್ಯಮಕ್ಕೆ ನೀಡುವ ಪ್ರೋತ್ಸಾಹವನ್ನು ಸರ್ಕಾರ ಸೂಕ್ಷ್ಮ, ಸಣ್ಣ ಮತ್ತು ಮಧ್ಯ ಕೈಗಾರಿಕಾ ಕ್ಷೇತ್ರಕ್ಕೂ ನೀಡಬೇಕು ಎಂದು ಮನವಿ ಮಾಡಿದರು . ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭಾರತೀಯರು ಎಂಬುದನ್ನು ಮರೆಯುವಂತಿಲ್ಲ
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳು ಫೆ.13ರಂದು ಕರೆ ನೀಡಿರುವ ಬಂದ್‌ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯ ಮಂತ್ರಿ ಅಶ್ವತ್ಥನಾರಾಯಣ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕನ್ನಡಿಗರ ಪರ ಕೆಲಸ ಮಾಡುತ್ತಿದೆ. ಎಲ್ಲದಕ್ಕಿಂತ ಮಿಗಿಲಾಗಿ ನಾವು ಭಾರತೀಯರು ಎಂಬುವುದನ್ನು ಮರೆಯಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next