Advertisement

ಉದ್ಯೋಗ ವಿನಿಮಯ ಕೇಂದ್ರಕ್ಕೆ ಬರುವವರ ಸಂಖ್ಯೆ ಕುಸಿತ !

11:49 AM Jul 25, 2019 | sudhir |

ಉಡುಪಿ: ಜಿಲ್ಲೆಯ ನಿರುದ್ಯೋಗಿಗಳ ಪಾಲಿಗೆ ಮರಳುಗಾಡಿನ ‘ಓಯಸಿಸ್‌’ ನಂತಿದ್ದ ಉದ್ಯೋಗ ವಿನಿಮಯ ಕೇಂದ್ರಕ್ಕೆ ನೌಕರಿಯ ಕನಸು ಹೊತ್ತು ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹಾಗಂತ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿಲ್ಲ. ಪ್ರತಿವರ್ಷ ಉದ್ಯೋಗ ನಿಮಿತ್ತ ಸಾವಿರಾರು ಯುವಜನತೆ ಬೇರೆಕಡೆ ವಲಸೆ ಹೋಗುತ್ತಿದ್ದಾರೆ.

Advertisement

15 ವರ್ಷಗಳ ಹಿಂದೆ ಸರಕಾರದ ಗ್ರೂಪ್‌ ಡಿ’ ನೌಕರಿ, ಆರೋಗ್ಯ ಇಲಾಖೆ, ಕೆಎಸ್‌ ಆರ್‌ಟಿಸಿಯ ಕೆಳ ಹಂತದ ಸಿಬಂದಿಯನ್ನು ಉದ್ಯೋಗ ವಿನಿಮಯ ಕೇಂದ್ರದ ಮೂಲಕವೇ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಆಗ ದಿನಕ್ಕೆ 500ಕ್ಕೂ ಹೆಚ್ಚು ಜನ ಬಂದು ನೌಕರಿಗಾಗಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದರು. ಆಗ ಜನರನ್ನು ನಿಯಂತ್ರಿಸುವುದೇ ಕಷ್ಟವಾಗುತ್ತಿತ್ತು. ಕಾಲ ಕ್ರಮೇಣ ಆಯಾ ಇಲಾಖೆಯೇ ನೇಮಕಾತಿ ಜವಾಬ್ದಾರಿ ವಹಿಸಿ ಕೊಂಡಿದ್ದರಿಂದ ಕೇಂದ್ರದ ಬಳಿ ಇರುವ ಉದ್ಯೋಗಾ ವಕಾಶಗಳು ಕಡಿಮೆಯಾಗಿದೆ.

ಇಂದು ಸರಕಾರಿ ಹಾಗೂ ಬ್ಯಾಂಕ್‌ ಉದ್ಯೋಗಗಳಿಗೆ ಯುವಜನರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕಾಗಿದೆ. ಇದೀಗ ಸರಕಾರಿ ಉದ್ಯೋಗ ಸಿಗದೆ ಇರುವುದರಿಂದ ಹಾಗೂ ಹೆಚ್ಚುತ್ತಿರುವ ಖಾಸಗಿ ವಿನಿಮಯ ಕೇಂದ್ರದಿಂದ ಉದ್ಯೋಗ ಕೇಂದ್ರಕ್ಕೆ ಅರ್ಜಿ ಹಾಕುವವರ ಸಂಖ್ಯೆ ತೀವ್ರವಾಗಿ ಕ್ಷೀಣಿಸುತ್ತಿದೆ.

ನೋಂದಾವಣೆ ಕುಸಿತ

ಒಂದು ಕಾಲದಲ್ಲಿ ವರ್ಷಕ್ಕೆ 10,000 ರಿಂದ 20,000 ಜನರು ನೋಂದಾಯಿಸಿಕೊಳ್ಳುವ ಕೇಂದ್ರದಲ್ಲಿ ಈಗ ಕೇವಲ 5,414 ಮಂದಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿಕೊಂಡಿದ್ದಾರೆ. ತಿಂಗಳಿಗೆ ಸರಾಸರಿ 80 ಜನರು ಕೇಂದ್ರದಲ್ಲಿ ನೋಂದಾಯಿಸಿ ಕೊಳ್ಳುತ್ತಿದ್ದಾರೆ.

Advertisement

ಸೇಲ್ಸ್ ಮ್ಯಾನ್‌ಳಿಗೆ ಹೆಚ್ಚಿನ ಬೇಡಿಕೆ

ಕೇಂದ್ರದಲ್ಲಿ ನೊಂದಾಯಿಸಿಕೊಂಡವರಲ್ಲಿ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಬಹು ಬೇಗನೆ ನೌಕರಿ ಸಿಗುತ್ತಿದೆ. ಸೇಲ್ಸ್ ಮ್ಯಾನ್‌ ಹುದ್ದೆಗೆ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಬೇಡಿಕೆಯಿದೆ. ಪಿಯುಸಿ ಮುಗಿಸಿದ ಯುವಕರನ್ನು ಸಹ ಹಲವು ಕಂಪೆನಿಗಳು ನೇಮಿಸಿಕೊಳ್ಳುತ್ತಿವೆ. ಊರಿನಲ್ಲಿಯೇ 10ರಿಂದ 14 ಸಾವಿರದ ವರೆಗೆ ಮಾಸಿಕ ವೇತನ ನೀಡುತ್ತಾರೆ ಎಂದು ಉದ್ಯೋಗ ವಿನಿಮಯ ಕೇಂದ್ರದ ಟ್ರೈನರ್‌ ಜಗನ್‌ ಹೇಳುತ್ತಾರೆ.

ಪ್ರತಿಯೊಬ್ಬರು ಕಾರ್ಡ್‌ ಮಾಡಿಸಿಕೊಳ್ಳಿ

ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಿ ಸರಕಾರಿ ಉದ್ಯೋಗ (ಪಿಡಿಒ) ಬಯಸುವವರು ಉದ್ಯೋಗ ವಿನಿಮಯ ಕೇಂದ್ರದ ಕಾರ್ಡ್‌ ಹೊಂದಿರುವುದು ಕಡ್ಡಾಯವಾಗಿದೆ.

ಹಣದ ಬೇಡಿಕೆಯಿಲ್ಲ

ಸರಕಾರಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಯಾವುದೇ ಶುಲ್ಕವನ್ನು ತೆರಬೇಕಾಗಿಲ್ಲ. ಮೂರು ವರ್ಷಕ್ಕೊಮ್ಮೆ ನವೀಕರಣ ಮಾಡಿದರೆ ಸಾಕು. ಆದರೆ ಖಾಸಗಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಪ್ರತಿಯೊಂದಕ್ಕೂ ಶುಲ್ಕ ಪಾವತಿಸಬೇಕು. ಇನ್ನೂ ಕೆಲಸ ಸಿಕ್ಕಿದ ಬಳಿಕ ಮೊದಲ ಸಂಬಳದಲ್ಲಿ ಶೇ. 30ರಷ್ಟು ಹಣ ನೀಡಬೇಕು.

1959ರ ಕಾಯ್ಡೆ ಅನ್ವಯ ಜಿಲ್ಲೆಯ ಖಾಸಗಿ ಸಂಸ್ಥೆಗಳು ಪ್ರತಿ 3 ತಿಂಗಳಿಗೊಮ್ಮೆ ಉದ್ಯೋಗಾವಕಾಶ ಕಲ್ಪಿಸದ ಹಾಗೂ ಖಾಲಿಯಿರುವ ಹುದ್ದೆಗಳ ಕುರಿತು ಮಾಹಿತಿ ನೀಡುತ್ತದೆ. ಅಂತಯೇ ಖಾಲಿ ಹುದ್ದೆಗಳಿಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಿಕೊಂಡ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕಳುಹಿಸಲಾಗುತ್ತದೆ.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next