ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ 19 ಅಟ್ಟಹಾಸ ಮುಂದುವರಿದಿದ್ದು, 11 ಇದ್ದ ಸೋಂಕಿತರ ಸಂಖ್ಯೆ ಗುರುವಾರ 12ಕ್ಕೆ ಏರಿಕೆಯಾಗಿದ್ದು, ಜಿಲ್ಲೆಯ ಗೌರಿಬಿದನೂರು ಪಟ್ಟಣದ 48 ವರ್ಷದ ಮಹಿಳೆಯೊಬ್ಬರಿಗೆ ಸೋಂಕಿತರ ಸಂಪರ್ಕದಿಂದ ಕೋವಿಡ್ 19 ಹರಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.
ಹೆಚ್ಚಾಗುವ ಭೀತಿ: ಕಳೆದ ಬುಧವಾರವಷ್ಟೇ ದೆಹಲಿಯ ತಬ್ಲೀಘಿ ಜಮಾತೆಗೆ ತೆರಳಿ ವಾಪಸ್ಸು ಆಗಿದ್ದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡು ತೀವ್ರ ಆತಂಕ ಮೂಡಿರುವ ಬೆನ್ನಲ್ಲೇ ಜಿಲ್ಲೆಯ ಗೌರಿಬಿದನೂರು ಪಟ್ಟಣ ದಲ್ಲಿ ಕೋವಿಡ್ 19 ಸೋಂಕು ಮಹಿಳೆಯೊಬ್ಬರಲ್ಲಿ ಕಾಣಿಸಿ ಕೊಂಡಿದ್ದು ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಮೂಡಿಸಿದೆ.
ಆತಂಕಕ್ಕೆ ಕಾರಣ: ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ಆರಂಭದಲ್ಲಿಯೇ ಕೊರೊನಾ ಸೋಂಕಿತರ ಸಂಪರ್ಕ ದಲ್ಲಿದ್ದವರನ್ನು ಹೋಮ್ ಕ್ವಾರಂಟೈನ್ ಮಾಡದ ಕಾರಣ ಇದೀಗ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದ್ದು, ಅದರಲ್ಲೂ ಜಮಾತೆಗೆ ಹೋಗಿ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಟ್ಟು 12 ಕೋವಿಡ್ 19 ಸೋಂಕಿತರ ಪೈಕಿ ಒಬ್ಬ ಮಹಿಳೆ ಮೃತಪಟ್ಟಿದ್ದು, 11 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ ಮೂವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
11 ಜನರ ವರದಿ ಬಾಕಿ: ಜಿಲ್ಲೆಯಿಂದ ದೆಹಲಿಯ ತಬ್ಲೀಘಿ ಜಮಾತ್‌ಗೆ 61 ಜನರು ಪ್ರಯಾಣ ಬೆಳೆಸಿದ್ದು, ಇವರೆಲ್ಲರನ್ನು ಪರೀಕ್ಷೆಗೆ ಒಳಪಡಿಸಿದಾಗ 60 ಜನಕ್ಕೆ ನೆಗೆಟಿವ್ ಎಂದು ವರದಿ ಬಂದಿದ್ದು, ಉಳಿದ ಒಂದು ಪ್ರಕ ರಣ ಮಾತ್ರ ಪಾಸಿಟಿವ್ ಎಂದು ಏ.8 ರಂದು ಪ್ರಕರಣ ದಾಖಲಾಗಿದೆ. ಇವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ 31 ಜನರ ಪೈಕಿ 20 ಜನರ ವರದಿ ನೆಗೆಟಿವ್ ಆಗಿದ್ದು ಉಳಿದ 11 ಜನರ ವರದಿ ನಾಳೆ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಇನ್ನೂ ನೆರೆಯ ಆಂಧ್ರಪ್ರದೇಶದ ಹಿಂದೂಪುರದಲ್ಲಿ ಇತ್ತೀಚೆಗೆ ಕೋವಿಡ್ 19 ಸೋಂಕಿಗೆ ಓರ್ವ ವ್ಯಕ್ತಿ ಮೃತ ಪಟ್ಟಿದ್ದು, ಅವರ ಮಗ ಭೌತಚಿಕಿತ್ಸಕ (ಪಿಸಿಯೋಥೆರಪಿಸ್ಟ್) ನಾಗಿ ನಮ್ಮ ಜಿಲ್ಲೆಯ 8ಜನರಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಈ 8 ಜನರನ್ನು ಪರೀಕ್ಷೆಗೆ ಒಳ ಪಡಿಸಲಾಗಿದ್ದು, ಎಲ್ಲರ ವರದಿ ನೆಗಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.