Advertisement
ಚುನಾವಣೆ ಪ್ರಜಾಸತ್ತೆಯ ಒಂದು ಮುಖ್ಯ ಲಕ್ಷಣ. ಅದರ ಫಲಿತಾಂಶ ಆಡಳಿತ ದಕ್ಷತೆಯ ಮೇಲೆ ನೇರ ಪ್ರಭಾವ ಬೀರುತ್ತದೆ. ವೈಶಿಷ್ಟ್ಯ ಇರುವುದೇ ಇಲ್ಲಿ. ನಮ್ಮ ಆಡಳಿತಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಅದು ಚುನಾವಣೆಯ ಮೂಲಕ. ಹಾಗಾಗಿ ನಮ್ಮದು ಪ್ರಜಾ ಪ್ರತಿನಿಧೀಕರಣ ಸ್ವರೂಪದ ಪ್ರಜಾಸತ್ತೆ. ಈ ಪ್ರತಿನಿಧಿಗಳು ಉತ್ತಮರಾಗಿದ್ದರೆ ಆಡಳಿತದ ದಕ್ಷತೆಯೂ ಉತ್ತಮ ಮಟ್ಟದಲ್ಲಿರುತ್ತದೆ. ಅದಕ್ಷರಾದರೆ ದುಷ್ಟ ನಿರಂಕುಶ ಪ್ರಭುವಿನ ಆಳ್ವಿಕೆಗಿಂತಲೂ ಕಡೆಯಾದೀತು. ಆದರೆ ವಿಶ್ವ ಕಂಡ ಅನೇಕ ಆಡಳಿತ ಪದ್ಧತಿಯಲ್ಲಿ ಪ್ರಜಾಸತ್ತಾತ್ಮಕ ಆಡಳಿತವೇ ಸರ್ವಶ್ರೇಷ್ಠವಾದುದು ಎಂಬುದು ಬುದ್ಧಿಜೀವಿಗಳ ಅಭಿಮತ. ಭಾರತ ಕಳೆದ ಎಪ್ಪತ್ತು ವರ್ಷದಿಂದ ಪ್ರಜಾಸತ್ತಾತ್ಮಕ ಆಡಳಿತದಲ್ಲಿ ನಡೆದು ಬರುತ್ತಿದೆ. ಹಾಗಾದರೆ ಭಾರತ ನೈಜ ಪ್ರಜಾಸತ್ತೆಯ ಸವಿಯನ್ನು ಅನುಭವಿಸುತ್ತಿದೆಯೇ? ಈ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ.
Related Articles
Advertisement
ಇಲ್ಲಿ ಮತದಾರರ ಜವಾಬ್ದಾರಿ ಗುರುತರವಾದದ್ದು. ಚುನಾ ಯಿತ ಪ್ರತಿನಿಧಿ ತನ್ನ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತಿದ್ದಾನೆ ಎಂಬ ಅವಲೋಕನ ನಡೆಸುತ್ತಲೇ ಇರಬೇಕು. ಮುಖ್ಯವಾಗಿ ಸದನದಲ್ಲಿ ಆತನ ಹಾಜರಾತಿ. ಆತನ ಪದನಾಮವೇ ಸೂಚಿಸು ವಂತೆ ಆತ ಆ ಸದನದ ಸದಸ್ಯ. ಸದನದ ಸಕಲ ಕಲಾಪಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳುವುದೇ ಆತನ ಪ್ರಥಮ ಕರ್ತವ್ಯ. ದುರ ದೃಷ್ಟವೆಂದರೆ ಸರಾಸರಿಯಾಗಿ ನಮ್ಮ ಪ್ರತಿನಿಧಿಗಳ ಹಾಜರಾತಿ ಯಾವ ಸಂದರ್ಭಗಳಲ್ಲಿಯೂ ಶೇಕಡಾ 50ಕ್ಕಿಂತ ಕಡಿಮೆ ಇರುತ್ತದೆ. ಇದರಿಂದಾಗಿ ಗಹನವಾದ ವಿಷಯಗಳೂ ಕೂಡಾ ವಿಸ್ತೃತವಾದ ಚರ್ಚೆಗೆ ಒಳಗಾಗದೆ ಕೇವಲ ಉಪಸ್ಥಿತ ಸದಸ್ಯರ ಬಹುಮತ ನೆಲೆಯಲ್ಲಿ ತೀರ್ಮಾನ ಗೊಂಡು ಮಸೂದೆ ಕಾನೂನಾಗಿ ಜಾರಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಇದು ಚುನಾಯಿತ ಪ್ರತಿನಿಧಿಗಳ ಕರ್ತವ್ಯಲೋಪ ಎಂದು ಮತದಾರರು ಪರಿಗಣಿಸುವ ಸ್ಥಿತಿ ಉಂಟಾಗಬೇಕು. ಅದು ಮತದಾನದ ಜಾಗೃತಿಯ ಲಕ್ಷಣ. ಹಾಗೆ ಸದನದ ಹೊರಗೂ ಚುನಾಯಿತ ಪ್ರತಿನಿಧಿಗಳ ನಡವಳಿಕೆಯನ್ನು ಗಮನಿಸುವ ಪರಿಪಾಠ ಮಾಡಿಕೊಳ್ಳಬೇಕು. ಈ ಅಂಶಗಳು ಸರಕಾರದ ನಿರ್ವಹಣೆಯ ಮೇಲೆ ಬೆಳಕು ಚೆಲ್ಲುತ್ತದೆ.
ಸರಕಾರದ ಹಾಗೂ ಅಭ್ಯರ್ಥಿಯ ಕಾರ್ಯನಿರ್ವಹಣೆಯನ್ನು ಗಮನಿಸಿ ಮತದಾನ ಮಾಡುವ ಮತದಾರರಿಗೆ “ಅನಿಶ್ಚಿತ ಮತದಾರರು’ (floating voters) ಎಂದು ಕರೆಯುತ್ತಾರೆ. ಇದು ಅಮೇರಿಕಾದ ಪರಿಕಲ್ಪನೆ. ಅವರು ಯಾವ ಪಕ್ಷಕ್ಕೂ ಯಾವ ವ್ಯಕ್ತಿಗೂ ಅಂಟಿಕೊಳ್ಳುವವರಲ್ಲ. ಈ ಸ್ವತಂತ್ರ ಚಿಂತಕರ ಸಂಖ್ಯೆ ಭಾರತದಲ್ಲಿ ಅತ್ಯಲ್ಪ (insignificant). ಅದು ಕೇವಲ ಶೇಕಡಾ 3-5ರಷ್ಟು. ಆದರೆ ಅಮೇರಿಕಾದಲ್ಲಿ ಇವರ ಪ್ರಮಾಣ ಶೇಕಡಾ 30-35ರಷ್ಟಿದೆ. ಹಾಗಾಗಿ ಅಲ್ಲಿನ ಸರಕಾರಗಳು ಬಹು ಎಚ್ಚರದಿಂದ ಕಾರ್ಯ ನಿರ್ವಹಿಸುತ್ತವೆ. ಆದರೆ ಭಾರತದಲ್ಲಿ ಪಕ್ಷ ಹಾಗೂ ವ್ಯಕ್ತಿಯ ಮೇಲಿನ ಮತದಾರರ ನಿಷ್ಠೆ ನಿರಂತರ ಹಾಗೂ ಅಭಾದಿತ. ಅನೇಕ ಮಂದಿ ವಿದ್ಯಾವಂತರು ಕೂಡಾ ಈ ಅಚಲ ನಿಷ್ಠೆಯ ಗುಂಗಿನಲ್ಲಿಯೇ ಸದಾ ಕಾಲ ಇರುತ್ತಾರೆ. ಮತದಾರರ ಈ ಮನೋವೃತ್ತಿಯನ್ನು ನಮ್ಮ ರಾಜಕಾರಣಿಗಳು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವಲ್ಲಿ ನಿಸ್ಸೀಮರು. ಯಾವ ರಾಜಕೀಯ ಪಕ್ಷದ ಸರಕಾರ ಬಂದರೂ ಭ್ರಷ್ಟಾಚಾರ ನಿರ್ಮೂಲನ ಮಾಡುವ ಮಾತಂತಿರಲಿ ಕಡೇ ಪಕ್ಷ ನಿಯಂತ್ರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ. ಬದಲು ಆಯಾ ಪಕ್ಷದ ಮೂಲ ಸಿದ್ಧಾಂತಗಳನ್ನು ಸಂವಿಧಾನದ ಆಶಯದ ಸೋಗಿನಲ್ಲಿ ವಿವಿಧ ಜನ ಮರಳು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮರಳಿ ಅಧಿಕಾರಕ್ಕೆ ಬರುವ ಕಸರತ್ತು ನಡೆಸುತ್ತಿರುತ್ತಾರೆ. ಇವರ ಮನೋಭಿಷ್ಟವನ್ನು ಈಡೇರಿಸಲು ಇದ್ದಾರಲ್ಲಾ ಪಕ್ಷ ಹಾಗೂ ವ್ಯಕ್ತಿನಿಷ್ಠೆ ಇರುವ ಮತದಾರರು.
ಈಗ ಭಾರತದ ಬೃಹತ್ ಮತದಾರ ಸ್ತೋಮದಲ್ಲಿ ಸ್ವತಂತ್ರವಾಗಿ ಚಿಂತಿಸಿ ವಿವೇಚನಾಯುಕ್ತವಾಗಿ ಮತದಾನ ಮಾಡುವವರ ಅರ್ಥಾತ್ ಅನಿಶ್ಚಿತ ಮತದಾರರ ಸಂಖ್ಯೆ ಅಧಿಕಗೊಳ್ಳಬೇಕು. ಬಹುಪಕ್ಷೀಯ ವ್ಯವಸ್ಥೆಯಿಂದ ಸೋಲು-ಗೆಲುವಿನ ಅಂತರ ಕಡಿಮೆ ಇರುವ ಭಾರತದಲ್ಲಿ ಅನಿಶ್ಚಿತ ಮತದಾರರ ಸಂಖ್ಯೆ ಹೆಚ್ಚಳದಿಂದ ಚುನಾವಣಾ ಫಲಿತಾಂಶದ ಮೇಲೆ ತೀವ್ರ ಪರಿಣಾಮ ಉಂಟಾಗುವುದರಲ್ಲಿ ಸಂದೇಹವಿಲ್ಲ. ಇದರಿಂದ ಉತ್ತಮ ವ್ಯಕ್ತಿಯ ಆಯ್ಕೆಗೆ ಸಹಕಾರಿ ಹಾಗೂ ಅಧಿಕಾರದಲ್ಲಿರುವ ಚುನಾಯಿತ ಪ್ರತಿನಿಧಿಗೆ ಎಚ್ಚರಿಕೆಯ ಸಂದೇಶವೂ ಆದೀತು.
ಬೇಳೂರು ರಾಘವ ಶೆಟ್ಟಿ