Advertisement
ಮದ್ಯಪಾನ ಮಾಡಿ ವಾಹನ ಚಲಾಯಿಸಿ ಸಿಕ್ಕಿಬೀಳುವ ಮದ್ಯಾಸುರರ ವಾಹನ ಜಪ್ತಿ ಮಾಡಿದರೆ ಪೊಲೀಸರ ಜತೆಗೆ ವಾಗ್ವಾದಕ್ಕಿಳಿಯುತ್ತಾರೆ. ಮತ್ತೂಂದೆಡೆ ಪಾನಮತ್ತ ಮಾನಿನಿಯರ ಜತೆ ಜಗಳಕ್ಕಿಳಿದು, ಅವಾಚ್ಯ ಶಬ್ದಗಳಿಂದ ಬೈಗುಳ ತಿಂದೇ ವಾಹನ ಜಪ್ತಿ ಮಾಡುವುದು ಅನಿವಾರ್ಯವಾಗಿದೆ. ಒಟ್ಟಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ನಶೆಯಲ್ಲಿ ತೇಲಾಡುತ್ತಿರುವ ಮದ್ಯಾಸುರರು ಹಾಗೂ ಮಾನಿನಿಯರನ್ನು ನಿಯಂತ್ರಿಸುವುದೇ ಸಂಚಾರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
Related Articles
Advertisement
ಟ್ರಾಫಿಕ್ ಪೊಲೀಸರೂ ಅಲರ್ಟ್: ರಕ್ತದಲ್ಲಿ ಇಂತಿಷ್ಟು ಎಂ.ಜಿಗಿಂತ ಹೆಚ್ಚು ಅಲ್ಕೋಹಾಲ್ ಅಂಶ ಕಂಡು ಬಂದರೆ ಅಂತಹ ಸವಾರರ ವಿರುದ್ಧ ಕೇಸ್ ದಾಖಲಿಸಲೇಬೇಕು ಎಂಬ ನಿಯಮಗಳಿವೆ. ಪ್ರತಿ ಅಲ್ಕೋಮೀಟರ್‌ಗಳನ್ನು ಆಯಾ ಠಾಣೆಗಳಿಗೆ ವಿತರಿಸಿರುವ ದಾಖಲೆಗಳು ಹಾಗೂ ಅದರ ಮೇಲೆ ನಂಬರ್‌ಗಳಿರುತ್ತವೆ. ನಿರ್ದಿಷ್ಟ ದಿನಗಳಂದು ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುವ ಅಧಿಕಾರಿ ಹಾಗೂ ಸಿಬ್ಬಂದಿ ಮಾಹಿತಿಯೂ ದಾಖಲಾಗಿರುತ್ತದೆ. ಆಡಿಟಿಂಗ್ ವೇಳೆ ತಪ್ಪು ಕಂಡು ಬಂದರೆ ಸಂಬಂಧಿಸಿದ ಸಂಚಾರ ಪೊಲೀಸರೇ ಇದಕ್ಕೆ ಸ್ಪಷ್ಟನೆ ಕೊಡಬೇಕಾಗುತ್ತದೆ. ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದರೆ ಶಿಸ್ತು ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರೂ ಅಲರ್ಟ್ ಆಗಿದ್ದಾರೆ.
ಹೊಸ ವರ್ಷಕ್ಕೆ ಮದ್ಯಪ್ರಿಯರು ಎಚ್ಚರ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪಾನಮತ್ತರಾಗಿ ವಾಹನ ಚಲಾಯಿಸಿದರೆ ಸಿಕ್ಕಿ ಬೀಳುವುದು ಗ್ಯಾರೆಂಟಿ. ಆ ದಿನ ಸಂಜೆಯಿಂದ ಮುಂಜಾನೆವರೆಗೂ ನಗರದೆಲ್ಲೆಡೆ ಪಾನಮತ್ತ ವಾಹನ ಸವಾರರ ಮೇಲೆ ಹದ್ದಿನ ಕಣ್ಣಿಡಲು ಸಂಚಾರ ವಿಭಾಗದ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ 3 ವರ್ಷಗಳಿಂದ ಹೊಸ ವರ್ಷಾಚರಣೆಯ ಮದ್ಯದ ಪಾರ್ಟಿಗೆ ಕೋವಿಡ್ ಅಡ್ಡಿಯಾಗಿತ್ತು. 2023ರ ಹೊಸ ವರ್ಷಾಚರಣೆಗೆ ಈ ಎಲ್ಲ ಅಡ್ಡಿ, ಆತಂಕ ದೂರವಾಗಿ ಬೆಂಗಳೂರಿಗರು ಸಂಭ್ರಮಿಸಲು ಕಾತರರಾಗಿದ್ದಾರೆ. ಕೆಲ ಐಶಾರಾಮಿ ಹೋಟೆಲ್ ಕೊಠಡಿಗಳು, ಪಬ್, ರೆಸ್ಟೋರೆಂಟ್‌ಗಳ ಟೇಬಲ್‌ಗಳು ಹೊಸ ವರ್ಷಾಚರಣೆಗೆ 10 ದಿನ ಮುಂಗಡವಾಗಿ ಬುಕ್ ಆಗಿವೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಾರಾಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಿದರೆ ನಡೆಯಬಹುದಾದ ಅಪಘಾತ ತಪ್ಪಿಸಬಹುದು. – ಡಾ.ಎಂ.ಎ.ಸಲೀಂ, ವಿಶೇಷ ಆಯುಕ್ತ, ಬೆಂಗಳೂರು ಸಂಚಾರ ಪೊಲೀಸ್ ವಿಭಾಗ
-ಅವಿನಾಶ್ ಮೂಡಂಬಿಕಾನ