Advertisement

ವಲಸೆಯಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳ: ಡಾ|ಸ್ವಾಮಿ

12:40 PM Jun 13, 2018 | Team Udayavani |

ಚಿತ್ರದುರ್ಗ: ಕಾಫಿ ತೋಟದಲ್ಲಿ ಕೆಲಸ ಮಾಡಲು ವಲಸೆ ಹೋದ ಕುಟುಂಬಗಳು ತಮ್ಮ ಜೊತೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಕೆಲಸದಲ್ಲಿ ತೊಡಗಿಸುತ್ತಿದ್ದಾರೆ. ಇದರಿಂದ ಮಕ್ಕಳು  ಬಾಲಕಾರ್ಮಿಕರಾಗಿ  ದುಡಿಯುವುದು,
ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ಪರಿಸರವಾದಿ ಡಾ| ಎಚ್‌.ಕೆ.ಎಸ್‌. ಸ್ವಾಮಿ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಐನಹಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ದುಡಿಮೆ ಮಾಡುವುದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಹೋಟೆಲ್‌ಗ‌ಳಲ್ಲಿ
ಕೆಲಸ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಶಾಲೆಗಳನ್ನು ತೊರೆದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. 

ಪೋಷಕರ ಜತೆ ನಗರಗಳಲ್ಲಿ ನರಕದ ಜೀವನ ನಿರ್ವಹಿಸುವಂತಾಗಿದೆ. ಬಾಲಕಾರ್ಮಿಕರ ನಿವಾರಣೆಗೆ ಗ್ರಾಮೀಣ ಜನರ ವಲಸೆ ತಡೆಯಬೇಕು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸಿ ಅವರನ್ನು ಹಿಂತಿರುಗಿಸುವಂತೆ ಏರ್ಪಾಡು ಮಾಡಬೇಕು ಎಂದರು. 

ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ಶಾಲೆಗಳಲ್ಲಿ ಸೂಕ್ತ ಅರಿವು ಮೂಡಿಸಬೇಕು. ಮೂಲ ಶಿಕ್ಷಣವನ್ನು ಅನುಷ್ಠಾನಗೊಳಿಸಬೇಕು.  ಶಾಲೆಯಲ್ಲೇ ಮಗು ದುಡಿಮೆಯ ಮಾರ್ಗಗಳನ್ನು ಕಲಿಯಬೇಕು. ಹತ್ತನೇ ತರಗತಿ
ಪೂರ್ಣಗೊಳ್ಳುವಷ್ಟರಲ್ಲಿ ಮಗು ಟೈಲರಿಂಗ್‌, ಬಡಗಿ ಕೆಲಸ, ಗುಡಿ ಕೈಗಾರಿಕೆಯ ಕೆಲಸಗಳು, ಕಾಗದ ತಯಾರಿಕೆ, ಕೃಷಿ ಕೆಲಸ ಮುಂತಾದ ಕೈಕಾಲುಗಳನ್ನು ಬಳಸಿ ದುಡಿಯುವಂತಹ ಮಾರ್ಗಗಳನ್ನು ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.

Advertisement

ಪರಿಸರದ ಅಸಮತೋಲನಕ್ಕೆ ನಾವು ನಡೆಸುತ್ತಿರುವ ಜೀವನಶೈಲಿಯೂ ಕಾರಣ. ಸರಳ ಜೀವನ, ಸ್ವದೇಶಿ ಜೀವನದಿಂದ ದೂರ ಸರಿದಿದ್ದರ ಫಲವಾಗಿ ಇಂದು ಮಾಲಿನ್ಯ ಹೆಚ್ಚಾಗಿದೆ. ಆಧುನಿಕ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಗೊಬ್ಬರಗಳು ಮತ್ತು ಕ್ರಿಮಿನಾಶಕ ಬಳಸಲಾಗುತ್ತಿದೆ. ಇವುಗಳ ದೀರ್ಘ‌ಕಾಲಿಕ ಬಳಕೆಯಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು, ನವೀಕರಿಸುವ ಸೂಕ್ಷ್ಮಜೀವಿಗಳು ನಾಶವಾಗುತ್ತವೆ. 

ಅಲ್ಲದೆ  ಹ್ಯೂಮಸ್‌ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಎರೆಹುಳುಗಳು ನಾಶವಾಗುತ್ತವೆ. ಫಲವತ್ತಾದ ಭೂಮಿ ಬರಡು ಭೂಮಿಯಾಗಿ ಪರಿವರ್ತನೆಯಾಗುತ್ತದೆ. ಮಣ್ಣಿನಲ್ಲಿರುವ ಉಪಯುಕ್ತ ಘಟಕಗಳನ್ನು ತೆಗೆದು
ಅನುಪಯುಕ್ತ ಘಟಕಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಗುಣಮಟ್ಟ ಗಣನೀಯವಾಗಿ ಕುಂಠಿತಗೊಳ್ಳುತ್ತದೆ.

ಅದರೊಂದಿಗೆ ಮಣ್ಣಿನಲ್ಲಿರುವ ವಿವಿಧ ಜೀವಿಗಳು ನಾಶಗೊಳ್ಳುತ್ತವೆ ಎಂದು ಎಚ್ಚರಿಸಿದರು. ಪ್ಲಾಸ್ಟಿಕ್‌ ಮರುಬಳಕೆ ಮಾಡಿದರೆ ರಸ್ತೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು, ಶಾಖ ಉತ್ಪಾದನೆ ಘಟಕಗಳಿಗೆ ಕಳುಹಿಸಬಹುದು. 

ಪ್ಲಾಸ್ಟಿಕ್‌ನಿಂದ ಮತ್ತೂಮ್ಮೆ ನಾವು ಪ್ಲಾಸ್ಟಿಕ್‌ ಗಳನ್ನು, ಕೆಳದರ್ಜೆಯ ಪ್ಲಾಸ್ಟಿಕ್‌ ಉತ್ಪಾದನೆ ಮಾಡಿಕೊಳ್ಳಬಹುದು.
 ಕೆಳದರ್ಜೆಯ ಪ್ಲಾಸ್ಟಿಕ್‌ ಗಳನ್ನು ಮತ್ತೆ ಮರು ಉತ್ಪಾದನೆಗೆ ಕಳಿಸಿ ಯಾವುದಾದರೊಂದು ಶಕ್ತಿಯ ರೂಪಕ್ಕೆ ಬಳಕೆ
ಮಾಡಿ ಅದನ್ನು ಉಪಯೋಗಿಸಿಕೊಳ್ಳಬಹುದು ಎಂದು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು. ಮುಖ್ಯ ಶಿಕ್ಷಕ ಜಿ. ಹನುಮಂತಪ್ಪ, ಶಿಕ್ಷಕರಾದ ಓಂಕಾರಪ್ಪ, ಗೋವಿಂದಪ್ಪ, ರೇವಣ್ಣ, ಸುಜಾತಾ, ಮಂಜುಳಾ, ಶಕುಂತಲಾ, ಕೋಕಿಲಾ, ವೀಣಾ, ನಾಗರಾಜ್‌ ಇದ್ದರು. ಮಕ್ಕಳು ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next