Advertisement

ಮತ್ತೆ ಶುರುವಾಗಿದೆ ನಂಬರ್‌ ಜಿಜ್ಞಾಸೆ

11:08 PM Jul 24, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಆದರೆ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೂ ತಾಂತ್ರಿಕ ಕಾರಣಗಳು ಅಡ್ಡಿಯಾಗುವ ಸಾಧ್ಯತೆ ಇದೆ. ರಾಜೀನಾಮೆ ಸಲ್ಲಿಸಿರುವ ಹದಿನೈದು ಶಾಸಕರ ರಾಜೀನಾಮೆ ಅಂಗೀಕಾರವಾಗದೇ ಇರುವುದರಿಂದ ರಾಜ್ಯ ವಿಧಾನಸಭೆಯ 225 ಸಂಖ್ಯಾ ಬಲದಲ್ಲಿ ಬಹುಮತ ಸಾಬೀತಿಗೆ ಅಗತ್ಯವಿರುವ 113 ಶಾಸಕರ ಬೆಂಬಲದ ಪಟ್ಟಿಯನ್ನು ರಾಜ್ಯಪಾಲರಿಗೆ ತೋರಿಸಬೇಕಾದ ಅನಿವಾರ್ಯತೆ ಇದೆ ಎಂಬ ಬಗ್ಗೆ ತಾಂತ್ರಿಕ ಜಿಜ್ಞಾಸೆ ಈಗ ಉಂಟಾಗಿದೆ.

Advertisement

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಯಾವುದೇ ಪಕ್ಷಕ್ಕೂ ಸ್ವಷ್ಪ ಬಹುಮತ ಇಲ್ಲದಿರುವುದರಿಂದ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಲು ರಾಜ್ಯಪಾಲರಿಗೆ ಮನವರಿಕೆಯಾಗಬೇಕು. ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯವೂ ರಾಜ್ಯಪಾಲರ ನಡೆಯ ಮೇಲೆ ನಿಂತಿದ್ದು, ಈಗಾಗಲೇ ಒಂದು ಬಾರಿ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದಾಗ ಅವರು ಬಹುಮತ ಸಾಬೀತು ಪಡಿಸದೇ ವಿಫ‌ಲರಾಗಿರುವುದರಿಂದ ರಾಜ್ಯಪಾಲರು ಈ ಬಾರಿ ಅವರಿಗೆ ಸ್ಪಷ್ಟ ಸಂಖ್ಯಾ ಬಲ ತೋರಿಸದೇ ಅವಕಾಶ ನೀಡುವ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಾಲಿ ವಿಧಾನಸಭೆಯಲ್ಲಿ ಬಿಜೆಪಿ 105 ಶಾಸಕರ ಸಂಖ್ಯಾ ಬಲ ಹೊಂದಿದ್ದು, ಇಬ್ಬರು ಪಕ್ಷೇತರರ ಬೆಂಬಲ ವ್ಯಕ್ತವಾದರೂ 107ಕ್ಕೆ ಏರಿಕೆಯಾಗಲಿದೆ. ಆದರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹದಿನೈದು ಜನ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವಾಗದೇ ಉಳಿದಿರುವುದರಿಂದ, ಅವರ ರಾಜೀನಾಮೆ ಪ್ರಕರಣಗಳನ್ನು ಸ್ಪೀಕರ್‌ ಇತ್ಯರ್ಥಗೊಳಿಸುವವರೆಗೂ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದಂತಾಗುತ್ತದೆ.

ಹೀಗಾಗಿ, ರಾಜ್ಯಪಾಲರೂ ಶಾಸಕರ ರಾಜೀನಾಮೆ ಪ್ರಕರಣಗಳು ಇತ್ಯರ್ಥವಾಗುವವರೆಗೂ ಬಿಜೆಪಿಗೆ ಸರ್ಕಾರ ರಚನೆಗೆ ಹಕ್ಕು ಮಂಡನೆಗೆ ಆಹ್ವಾನ ನೀಡುವುದು ಅನುಮಾನ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಪೂರ್ಣ ವಿವರ ರಾಜ್ಯಪಾಲರ ಬಳಿ ಇದೆ. ಅಲ್ಲದೆ, ಅತಿ ದೊಡ್ಡ ಪಕ್ಷವನ್ನು ಬಹುಮತ ಸಾಬೀತು ಪಡಿಸಲು ಆಹ್ವಾನಿಸುವ ಅಧಿಕಾರವೂ ಅವರಿಗಿದೆ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಲೂ ಬಹುದು ಎನ್ನಲಾಗಿದೆ.

ಅವರಿಗೆಲ್ಲಿದೆ ಬಹುಮತ?: ರಾಜ್ಯಪಾಲ ವಜುಭಾಯಿ ವಾಲಾ ಅವರು ಸದ್ಯದ ಕರ್ನಾಟಕ ವಿಧಾನಸಭೆಯ ಸಂಖ್ಯಾ ಬಲದ ಆಧಾರದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲ ಎನ್ನುವ ಅಭಿಪ್ರಾಯವನ್ನು ಮಂಗಳವಾರ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆಯೇ? ಹಾಗೆಂದು ಮೂಲಗಳು ಹೇಳುತ್ತಿವೆ. ಬಿಜೆಪಿಯವರನ್ನು ಯಾವಾಗ ಸರ್ಕಾರ ರಚನೆಗೆ ಆಹ್ವಾನಿಸುತ್ತೀರಿ ಎಂದು ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಲು ತೆರಳಿದಾಗ ನಿಯೋಗದಲ್ಲಿದವರು ರಾಜ್ಯಪಾಲರನ್ನು ಕೇಳಿದರು. ಆಗ ಅವರಿಗೂ ಎಲ್ಲಿದೆ ಬಹುಮತ ಎಂದು ಅವರು ಮರು ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Advertisement

ಯಡಿಯೂರಪ್ಪ ಈಗಾಗಲೇ ಒಂದು ಬಾರಿ ಸರ್ಕಾರ ರಚನೆಯ ಹಕ್ಕು ಮಂಡಿಸಿ ಬಹುಮತ ಸಾಬೀತು ಪಡಿಸುವಲ್ಲಿ ವಿಫ‌ಲರಾಗಿರುವುದರಿಂದ ರಾಜ್ಯಪಾಲರು ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡುವುದು ಅನುಮಾನ. ಹಾಲಿ ಸಂಖ್ಯಾ ಬಲದಲ್ಲಿ ಬಹುಮತ ಸಾಬೀತು ಪಡಿಸಲು 113 ಶಾಸಕರ ಬೆಂಬಲದ ಪಟ್ಟಿಯನ್ನು ರಾಜ್ಯಪಾಲರಿಗೆ ತೋರಿಸಿ ಮನವರಿಕೆ ಮಾಡಿಕೊಟ್ಟರೆ, ಸರ್ಕಾರ ರಚನೆಗೆ ಅವಕಾಶ ನೀಡಬಹುದು.
-ಪ್ರೊ.ರವಿವರ್ಮಕುಮಾರ್‌, ಮಾಜಿ ಅಡ್ವೋಕೇಟ್‌ ಜನರಲ್‌

ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷದ ನಾಯಕನಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರು ಅವಕಾಶ ನೀಡಬಹುದು. ಆದರೆ, ಅವರಿಗೆ ಆ ನಾಯಕನಿಗೆ ಬಹುಮತ ಸಾಬೀತು ಪಡಿಸುವಷ್ಟು ಶಾಸಕರ ಸಂಖ್ಯಾಬಲ ಇದೆ ಎನ್ನುವುದು ಮನವರಿಕೆಯಾಗಬೇಕು. ಆಗ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಿ, ನಿರ್ಧಿಷ್ಟ ಸಮಯದಲ್ಲಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಬಹುದು.
-ಬಿ.ವಿ.ಆಚಾರ್ಯ, ಮಾಜಿ ಅಡ್ವೋಕೇಟ್‌ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next