ಬಂಗಾರಪೇಟೆ: ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಬ್ಬರನ್ನು ಸಹಕಾರ ಇಲಾಖೆ ವರ್ಗಾವಣೆಗೊಳಿಸಿ, ಹುದ್ದೆಯಿಂದ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ನೋಟಿಸ್ ನೀಡಿ ಒಂದೂವರೆ ತಿಂಗಳು ಕಳೆದರೂ ಅಧಿಕಾರ ಬಿಟ್ಟುಕೊಡದೇ ಕಾಲಹರಣ ಮಾಡುತ್ತಿದ್ದಾರೆ ಎಂಬ ದೂರು ತಾಲೂಕಿನ ಬೋಡಗುರ್ಕಿ ವಿಎಸ್ ಎಸ್‌ಎನ್‌ನಿಂದ ಕೇಳಿ ಬಂದಿದೆ.
ಸಹಕಾರ ಸಂಘದಲ್ಲಿ ಆಡಳಿತ ಹಾಗೂ ಲೆಕ್ಕಪತ್ರಗಳ ಬಗ್ಗೆಸಮಗ್ರವಾಗಿ ಮಾಹಿತಿ ಕೇಳಿದ್ದ ವಿಎಸ್‌ಎಸ್‌ಎನ್ ಅಧ್ಯಕ್ಷರ ವಿರುದ್ಧವೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಘದ ನಿರ್ದೇಶಕರನ್ನು ಎತ್ತಿಕಟ್ಟಿ, ರಾಜೀನಾಮೆ ಕೊಡಿಸಿ ಸಂಘವನ್ನು ಸೂಪರ್‌ಸೆಡ್ ಮಾಡಿಸಿರುವ ಆರೋಪವನ್ನು ಪ್ರಭಾರ ಸಿಇಒ ಎನ್.ಶ್ರೀರಾಮರೆಡ್ಡಿ ಎದುರಿಸುತ್ತಿದ್ದು, ಇವರನ್ನು ವರ್ಗಾವಣೆ ಮಾಡಿ ಮೂರು ತಿಂಗಳೇ ಕಳೆದರೂ ಇದುವರೆಗೂ ಬಿಡುಗಡೆ ಹೊಂದಿಲ್ಲ ಎಂದು ಆರೋಪಿಸಲಾಗುತ್ತಿದೆ. ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಶಿಫಾರಸು ಮೇರೆಗೆ ಪ್ರಭಾರಿ ಸಿಇಒ ಆಗಿದ್ದ ಎನ್. ಶ್ರೀರಾಮರೆಡ್ಡಿರನ್ನು ಆ.22 ರಂದು ಬೋಡಗುರ್ಕಿವಿಎಸ್ ಎಸ್‌ಎನ್‌ನಿಂದ ಪ್ರಭಾರ ವಹಿಸಿದ್ದನ್ನು ವಾಪಸ್ ಪಡೆದು, ಹುಲಿಬೆಲೆ ವಿಎಸ್‌ಎಸ್‌ಎನ್ ಸಿಇಒ ಜಿ.ಆರ್. ಮಂಜುನಾಥ್‌ಗೌಡ ಅವರನ್ನು ನಿಯೋಜನೆ ಮಾಡಿ, ಆದೇಶಿಸಿದ್ದರೂ ಇದುವರೆಗೆ ಎನ್.ಶ್ರೀರಾಮರೆಡ್ಡಿರಿಂದ ಅಧಿಕಾರ ಹಸ್ತಾಂತರ ಮಾಡಿಕೊಳ್ಳಲು ಆಗಿಲ್ಲ.
ಬೋಡಗುರ್ಕಿ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆದು ಇನ್ನೂ ಆರು ತಿಂಗಳು ಮುಗಿಯುವುದರೊಳಗೆ 11 ಸದಸ್ಯರ ಪೈಕಿ 7 ಮಂದಿ ಅಧ್ಯಕ್ಷರ ವಿರುದ್ಧವೇ ತಿರುಗಿಬಿದ್ದು ರಾಜೀನಾಮೆ ನೀಡಿದ್ದರಿಂದ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಆಡಳಿತಾಧಿಕಾರಿಯನ್ನು ನೇಮಿಸಿ, ಸಂಘವನ್ನು ಸೂಪರ್‌ಸೀಡ್ ಮಾಡಿದರು.
ತಾಲೂಕಿನ ಬೋಡಗುರ್ಕಿ ವಿಎಸ್‌ಎಸ್‌ಎನ್‌ನಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿಗರು ತನ್ನ ಪ್ರಾಬಲ್ಯವನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರು ಹೆಚ್ಚಾಗಿ ಗೆದ್ದಿದ್ದರೂ ಶಾಸಕ ಎಸ್.ಎನ್ .ನಾರಾಯಣಸ್ವಾಮಿ ಪ್ರಭಾವದಿಂದ ಕಾಂಗ್ರೆಸ್ ಬೆಂಬಲಿತ ಲಕ್ಷ್ಮೀನಾರಾಯಣ ಅವರನ್ನು ಅಧ್ಯಕ್ಷರಾಗಿ ಮಾಡಲಾಗಿತ್ತು. ಆಗ ಅಧ್ಯಕ್ಷರು ಸಿಇಒ ಅವರನ್ನು ಲೆಕ್ಕಪತ್ರಗಳ ವಿಚಾರದಲ್ಲಿ ಪ್ರಶ್ನಿಸಿದ್ದರು. ಆಗ ಸಂಘದ ಕೆಲವು ನಿರ್ದೇಶಕರೊಂದಿಗೆ ತನ್ನ ಹಿಡಿತ ಸಾಧಿಸಿರುವ ಸಿಇಒ ಎನ್.ಶ್ರೀರಾಮರೆಡ್ಡಿ, ಸಂಘವನ್ನು ಸೂಪರ್ ಸೀಡ್ ಮಾಡಿಸಿರುವ ದೂರು ಕೇಳಿಬಂದಿದೆ.
ಬೋಡಗುರ್ಕಿವಿಎಸ್‌ಎಸ್‌ಎನ್ ಪ್ರಭಾರಿ ಸಿಇಒ ಆಗಿರುವ ಎನ್.ಶ್ರೀರಾಮರೆಡ್ಡಿ, ಕೆಜಿಎಫ್ ತಾಲೂಕಿನ ಕೆಂಪಾಪುರ ವಿಎಸ್‌ಎಸ್‌ಎನ್ ಸಿಇಒ ಆಗಿದ್ದುಕೊಂಡು, ಇದರ ಜೊತೆಗೆ ಮಾಲೂರು ತಾಲೂಕಿನ ದೊಡ್ಡಶಿವಾರ ವಿಎಸ್‌ಎಸ್‌ಎನ್ ಪ್ರಭಾರ ಸಿಇಒ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಆಡಳಿತ ಮಂಡಳಿ ಮೊದಲು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವಶದಲ್ಲಿತ್ತು. ಪ್ರಸಕ್ತ ರಾಜಕೀಯ ಬದಲಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಸಿಇಒ ಎನ್. ಶ್ರೀರಾಮರೆಡ್ಡಿ, ಬಿಜೆಪಿ ಮುಖಂಡರೊಂದಿಗೆ ಸಂಸದ ಎಸ್.ಮುನಿಸ್ವಾಮಿ ಭೇಟಿ ಮಾಡಿ, ಬೋಡಗುರ್ಕಿವಿಎಸ್‌ಎಸ್‌ಎನ್ ಪ್ರಭಾರ ಸಿಇಒ ಆಗಿ ಮುಂದುವರಿಯಲು ಕಸರತ್ತು ನಡೆಸುತ್ತಿದ್ದಾರೆ. ಇತ್ತ ಲಕ್ಷ್ಮಿನಾರಾಯಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜ್ ಸೇರಿ ಶಾಸಕ ಎಸ್.ಎನ್ .ನಾರಾಯಣಸ್ವಾಮಿ ಮೂಲಕ ಎನ್.ಶ್ರೀರಾಮರೆಡ್ಡಿ ಅವರನ್ನು ಇಲ್ಲಿಂದ ಬಿಡುಗಡೆ ಮಾಡಿಸಲು ತೀವ್ರ ಕಸರತ್ತು ಮಾಡುತ್ತಿದ್ದಾರೆ.
ಸದ್ಯಕ್ಕೆ ತಾಲೂಕಿನ ಬೋಡಗುರ್ಕಿವಿಎಸ್‌ಎಸ್ ಎನ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಬಲಾಬಲ ಪೈಪೋಟಿ ಹೆಚ್ಚಾಗಿದೆ. ಪ್ರಭಾರ ಸಿಇಒ ಎನ್.ಶ್ರೀರಾಮರೆಡ್ಡಿ ಸಂಘದ ಆಡಿಟ್ ಮಾಡಿಸಬೇಕು, ಅಲ್ಲಿಯವರೆಗೂ ಅಧಿಕಾರವನ್ನು ಯಾರಿಗೂ ಹಸ್ತಾಂತರ ಮಾಡದೇ ತಾವೇ ಮುಂದುವರಿ ಯುವುದಾಗಿ ಹೇಳುತ್ತಿದ್ದಾರೆ.
-ಎಂ.ಸಿ.ಮಂಜುನಾಥ್