Advertisement
ರಾಜ್ಯ ರಾಜಕೀಯ ಮತ್ತು ಚುನಾವಣೆ ವಿಷಯ ಬಂದಾಗ ಬೆಳಗಾವಿಯ ಸಕ್ಕರೆ ರಾಜಕಾರಣದ ಬಗ್ಗೆ ಮಾತನಾಡದೆ ಮುಂದೆ ಹೋಗುವಂತೆಯೇ ಇಲ್ಲ. ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸಕ್ಕರೆ ರಾಜಕಾರಣದ ಗಾಢ ಪ್ರಭಾವ ಅಂಟಿಕೊಂಡಿದೆ. ಅಷ್ಟೇ ಏಕೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಹ ಜಿಲ್ಲೆಯ ಸಕ್ಕರೆ ರಾಜಕಾರಣದ ಲಾಬಿಗೆ ಸಂಪೂರ್ಣ ಮಣಿದಿವೆ. ಹೀಗಾಗಿ ಇಲ್ಲಿ ಸಕ್ಕರೆ ಕಾರ್ಖಾನೆಗಳ ರಾಜಕಾರಣವನ್ನು ನಿರ್ಲಕ್ಷ್ಯ ಮಾಡುವಂತೆಯೇ ಇಲ್ಲ.
ಗಡಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಮತ್ತು ರಾಜಕೀಯದ ಬಗ್ಗೆ ಪ್ರಸ್ತಾವ ಮಾಡಿದರೆ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ, ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ಕೆಂಪವಾಡ ಸಕ್ಕರೆ ಕಾರ್ಖಾನೆ, ಸತೀಶ ಶುಗರ್ಸ್, ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ, ವಿಶ್ವನಾಥ ಕತ್ತಿ ಸಕ್ಕರೆ ಕಾರ್ಖಾನೆ ಮತ್ತು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಈ ಕಾರ್ಖಾನೆಗಳ ಮೂಲಕ ಸಾಕಷ್ಟು ರಾಜಕಾರ ಣಿಗಳು ರಾಜ್ಯಮಟ್ಟದಲ್ಲಿ ತಮ್ಮ ಶಕ್ತಿ ತೋರಿಸಿದರು. ಸರಕಾರದ ರಚನೆಯಲ್ಲಿ ಮಹತ್ವ ಪಾತ್ರ ನಿರ್ವಹಿಸುವಷ್ಟು ಬೆಳೆದು ನಿಂತರು.
Related Articles
ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಚಿಕ್ಕೋಡಿ ಭಾಗದಲ್ಲಿ ಸಕ್ಕರೆ ರಾಜಕಾರಣಿಗಳ ದಂಡೇ ಇದೆ. ರಾಜ್ಯ ರಾಜಕಾರಣದ ಆಳ ಅಗಲವನ್ನು ಬಲ್ಲವರಾಗಿರುವ ಈ ನಾಯಕರು ರೈತ ಸಮುದಾಯ ತಮ್ಮ ಮಾತು ಮೀರದಂತೆ ನೋಡಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆಗಳ ಷೇರುದಾರರು ಹಾಗೂ ಸದಸ್ಯರಾಗಿರುವ ರೈತರು ಸಕ್ಕರೆ ಕಾರ್ಖಾನೆಗಳನ್ನು ದೂರ ಇಟ್ಟು ಚುನಾವಣೆಯ ಬಗ್ಗೆ ವಿಚಾರ ಮಾಡದಂತೆ ರಾಜಕಾರಣಿಗಳು ವಾತಾವರಣ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಚುನಾವಣೆಯ ಸಮಯದಲ್ಲಿ ಯಾವಾಗಲೂ ಸಕ್ಕರೆ ರಾಜಕಾರಣ ತನ್ನ ಛಾಪು ತೋರಿಸುತ್ತಲೇ ಬಂದಿದೆ.
Advertisement
ವಿಧಾನಸಭೆ ಚುನಾವಣೆ ಸಮಯದಲ್ಲಿ ರೈತರ ಹಿತವೇ ತಮ್ಮ ಮುಖ್ಯ ಧ್ಯೇಯ ಎನ್ನುವ ರಾಜಕೀಯ ಪಕ್ಷಗಳು ಬಾಕಿ ಹಣ ಪಾವತಿ, ಕಬ್ಬಿಗೆ ವೈಜ್ಞಾನಿಕ ದರ ನಿಗದಿ, ತೂಕದಲ್ಲಿ ಮೋಸ ನಡೆಯದಂತೆ ಕ್ರಮ ಸಹಿತ ಹತ್ತಾರು ಭರವಸೆ ನೀಡುತ್ತವೆ. ಚುನಾವಣೆ ಮುಗಿಯುತ್ತಿದ್ದಂತೆ ಯಾವ ರಾಜಕೀಯ ಪಕ್ಷಗಳೂ ಈ ಭರವಸೆಗಳ ಕಡೆಗೆ ಗಮನ ಕೊಡುವುದಿಲ್ಲ. ಎಲ್ಲ ಪಕ್ಷಗಳ ಬಹುತೇಕ ಪ್ರಭಾವಿ ನಾಯಕರು ಸಕ್ಕರೆ ಕಾರ್ಖಾನೆಗಳ ಮಾಲಕರಾಗಿರುವುದರಿಂದ ಪಕ್ಷಗಳು ಸಹ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಪರಿಣಾಮ ಸಕ್ಕರೆ ರಾಜಕಾರಣ ಮತ್ತು ರೈತರ ಸಮಸ್ಯೆಗಳು ಕೇವಲ ಚುನಾವಣೆಗೆ ಮಾತ್ರ ಸೀಮಿತ ಎನ್ನುವಂತಾಗಿದೆ.
-ಕೇಶವ ಆದಿ