Advertisement

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

04:44 PM Sep 25, 2024 | Team Udayavani |

ವಿದ್ಯಾರ್ಥಿ ಜೀವನದ ಕೊನೆ ಘಟ್ಟ ಅಂದ್ರೆ ಎರಡು ವರ್ಷದ ಸ್ನಾತಕೋತ್ತರ ಅಧ್ಯಯನಕ್ಕೆ ಸೇರಿ ಮೂರೇ ತಿಂಗಳಾಗಿತ್ತು. ಮೊದಲಿಗೆ ತರಗತಿಯಲ್ಲಿ ಅಪರಿಚಿತರಂತೆ ಕಂಡ ಸ್ನೇಹಿತರು, ಈಗ ಒಡಹುಟ್ಟಿದವರೇನೋ ಎಂಬ ಮಟ್ಟಕ್ಕೆ ಸ್ನೇಹ ಸಂಬಂಧಗಳು ಗಟ್ಟಿಯಾಗಿವೆ. ಅಧ್ಯಯನದ ಮಧ್ಯ ವರ್ಷದಿಂದಲೂ ತರಗತಿಯಲ್ಲಿ ಎಲ್ಲರೂ ಪ್ರವಾಸಕ್ಕೆ ಹೋಗೊಣ ಎಂಬ ವಿಷಯ ಪ್ರತಿದಿನ ಚರ್ಚೆಯಾಗುತ್ತಲೇ ಇತ್ತು.

Advertisement

ಕೇರಳ, ಗೋವಾ, ಪಾಂಡಿಚೇರಿ, ದಿಲ್ಲಿ ಹೀಗೆ ಹತ್ತು ಹಲವು ಸ್ಥಳಗಳ ಬಗ್ಗೆ ಮಾತುಕತೆ ಆಗುತ್ತಲೇ ಇತ್ತು. ಇದನ್ನು ಮನಗಂಡ ಕ್ಲಾಸ್‌ನ ಪ್ರತಿನಿಧಿಯೂ ಸಹ ಅವಕಾಶಕ್ಕಾಗಿ ಅಲೆದಾಡಿದ್ದು ಅಷ್ಟಿಷ್ಟಲ್ಲ.

ಕೊನೆಗೂ ವಿಭಾಗದ ಮುಖ್ಯಸ್ಥರಿಂದ ಅನುಮತಿ ದೊರೆತ ದಿನದಂದು ಕ್ಲಾಸ್‌ನಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ ಅದರೆ ಕೊರೋನಾ ನಾಲ್ಕನೇ ಹಂತದ ಮಹಾಮಾರಿ ಒಕ್ಕರಿಸಿ ನಮ್ಮ ಕನಸನ್ನು ನುಚ್ಚು ನೂರಾಗಿಸಿತ್ತು. ಅನಂತರ ದಿನಗಳಲ್ಲಿ ಅದು ಬರೀ ಮಾತಾಗೆ ಉಳಿಯಿತೆ ವಿನಃ ಕಾರ್ಯರೂಪಕ್ಕೆ ಬರಲೇ ಇಲ್ಲ.

ಆಕಾಶ ಕಳಚಿ ಬಿದ್ದರೂ ಹೋಗಲೇಬೇಕು ಎಂದು ಹಠಕ್ಕೆ ಬಿದ್ದವರಂತೆ ನೇತ್ರಾವತಿ ಚಾರಣ ಮಾಡಲೇಬೇಕು ಎಂದು ನಾವು 8 ಜನ ನಿರ್ಧರಿಸಿದೆವು. ಅದಕ್ಕೆ ತಕ್ಕಂತೆ ವಾಟ್ಸ್‌ಆ್ಯಪ್‌ ಗ್ರೂಪ್‌, ಯಾವ ದಿನ, ಎಷ್ಟೋತ್ತಿಗೆ ಏನೆಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಗ್ರೂಪ್‌ನಲ್ಲಿ ಚರ್ಚೆಗಳು ಭರದಿಂದಲೇ ನಡೆಯುತ್ತಿದ್ದವು. ಕೊನೆಗೂ ಆ ದಿನ ಬಂದೇಬಿಟ್ಟಿತು. ನಾವು ಉತ್ಸಾಹ, ಉಲ್ಲಾಸದಿಂದ ಬಾಡಿಗೆ ಕಮ್ಯಾಂಡರ್‌ ಜೀಪು ಏರಿ ಹೋರಟೆಬಿಟ್ಟೆವು.

Advertisement

ಕುರುಕು ತಿನಿಸುಗಳನ್ನು ತಿನ್ನುತ್ತಾ, ತೋಚಿದ ಹಾಡುಗಳನ್ನು ಹಾಡುತ್ತಾ, ಒಬ್ಬರನ್ನೊಬ್ಬರು ಗೇಲಿ ಮಾಡುತ್ತಾ ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌ ಎಂಬ ಬೆಂಗಳೂರಿನ ನಮ್ಮ ಮೆಟ್ರೋ ಕಂಠದ ಧ್ವನಿಯಂತೆ ನಮ್ಮ ಪಯಣವು ಸಾಗುತ್ತಾ. ಗುಯೆನ್ನುವ ಪಶ್ಚಿಮ ಘಟ್ಟಗಳ ದಟ್ಟ ಕಾನನದ ಮಧ್ಯೆ, ಕಡಿದಾದ, ಕೆಸರಾದ ದಾರಿಯ ನಡುವೆ ಕಮ್ಯಾಂಡರ್‌ ಜೀಪಿನಲ್ಲಿ ಕುಳಿತ ನಮಗೆಲ್ಲಾ ಅದೊಂದು ವಾಹ್‌….! ಅವಿಸ್ಮರಣೀಯ ಅನುಭವ. ಕೊನೆಗೂ ಉಜಿರೆಯಿಂದ ಒಳರಸ್ತೆಯ ಮೂಲಕ ಸಂಸೆ ಅನ್ನೋ ಭೂಲೋಕದ ಸ್ವರ್ಗವನ್ನ ತಲುಪಿ, ಅಲ್ಲಿಂದ ನೇತ್ರಾವತಿ ಚಾರಣದ ಪ್ರಾರಂಭದ ಸ್ಥಳಕ್ಕೆ ಬಂದು ಟಿಕೆಟ್‌ ಪಡೆದು, ಚಾರಣವನ್ನು ಸಂತೋಷ, ಕೌತುಕ, ಉತ್ಸಾಹದೊಂದಿಗೆ ಪ್ರಾರಂಭಿಸಿದೆವು.

ಸಣ್ಣ ಸಣ್ಣ ವಿಷಯಕ್ಕೂ ಗುರ್ರೆನ್ನೋ ಸ್ನೇಹಿತೆ, ಅರ್ಧಂಬರ್ಧ ಹಾಡು ಹಾಡುವ ಸ್ನೇಹಿತ, ಕಾಲೇಜು ದಿನಗಳಲ್ಲಿ ಕಳೆದ ಕ್ಷಣಗಳ ಮೆಲುಕು, ಹೀಗೆ ಹಲವಾರು ವಿಷಯಗಳ ಕುರಿತು ಮಾತನಾಡುತ್ತಾ ನಮ್ಮ ಚಾರಣ ಸಾಗಿತ್ತು. ಇದೆಲ್ಲದರ ನಡುವೆ ಕೆಲವರಿಗೆ ಏರಲು ಆಯಾಸವಾದ್ರೆ, ಇನ್ನು ಕೆಲವರಲ್ಲಿ ನೇತ್ರಾವತಿ ಕೊನೆಯ ಭಾಗವನ್ನು ನಾನೇ ಮೊದಲು ನೋಡಬೇಕೆನ್ನುವ ಉತ್ಸಾಹ. ಒಟ್ಟಿನಲ್ಲಿ ಚಾರಣವು ನವೋಲ್ಲಾಸ, ಕುತೂಹಲ, ಆಯಾಸ, ಆತಂಕ ಹಾಗೂ ತಳಮಳದೊಂದಿಗೆ ಹೊ ರಟು, ಕೊನೆಯದಾಗಿ ನೇತ್ರಾವತಿ ಎಂಡ್‌ ಪಾಯಿಂಟ್‌ಗೆ ಬಂದು ನಿಲ್ಲಿಸಿತು.

ಆ ಮನೋಹರ ದೃಶ್ಯವನ್ನು ಕಂಡ ಎಲ್ಲರ ಕಣ್ಣು ಪಾವನವಾಯಿತು. ಕೆಲವರು ಸಂತೋಷವನ್ನು ಸಂಭ್ರಮಿಸೋಕೆ ಕೇಕೆ ಹಾಕಿ ನರ್ತಿಸಿದರೆ, ಇನ್ನು ಕೆಲವರು ಮೂಕವಿಸ್ಮಿತರಾಗಿ ಆ ಕ್ಷಣವನ್ನು ಮಂತ್ರ ಮುಗ್ಧರಾಗಿ ಅನು ಭವಿಸುತ್ತಿದ್ದರು. ಹೀಗೆ ಬೆಟ್ಟ ಹತ್ತುವಾಗಿನ ಉತ್ಸಾಹ ಇಳಿ ಯುವಾಗ ಇರಲೇ ಇಲ್ಲ. ಯಾಕೆಂದರೆ ಅಂತಹ ರಮಣೀಯ ಪ್ರಕೃತಿಯ ಅನುಭವನ್ನು ಯಾರಿಗೆ ತಾನೆ ಇಷ್ಟ ಆಗಲ್ಲ? ಒಟ್ಟಿನಲ್ಲಿ ಭಾರವಾದ ಮನಸ್ಸಿನಿಂದ ಬೆಟ್ಟ ಇಳಿಯುವೆಡೆಗೆ ಮುಖ ಮಾಡಿದೆವು.  ಒಟ್ಟಿನಲ್ಲಿ ಕಾಲೇಜು ಜೀವನದ ಕೊನೆಯ ದಿನಗಳು ಚಿರಸ್ಥಾಯಿಯಾಗಿ ನೆನಪಿನ ಪುಟದಲ್ಲಿ ಉಳಿಯುವಂತೆ ಆಗಿದ್ದು ನಮ್ಮ ಸೌಭಾಗ್ಯವೇ ಸರಿ. ಕಾಲೇಜು ಸ್ನೇಹಿತರೊಂದಿಗೆ ಸಂಬಂಧಗಳು ಗಟ್ಟಿಯಾಗಿರಬೇಕೆಂದರೇ ನೀವು ನಿಮ್ಮ ಸಹಪಾಠಿಗಳ ಜತೆಗೆ ಪ್ರವಾಸಕ್ಕೆ ಹೋಗಿ ಬನ್ನಿ.

-ವಿಜಯಕುಮಾರ ಹಿರೇಮಠ

ಗದಗ

Advertisement

Udayavani is now on Telegram. Click here to join our channel and stay updated with the latest news.

Next