ಸೋಮವಾರಪೇಟೆ : ಉಪ ಚುನಾವಣೆ ಫಲಿತಾಂಶದಿಂದ ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮುಂದಿನ ದಿನಗಳಲ್ಲಿ ಕೊಡಗಿನ ಸಮಗ್ರ ಅಭಿವೃದ್ಧಿ ಸುಲಭವಾಗಲಿದೆ ಎಂದು ತಿಳಿಸಿದ್ದಾರೆ.
ಸೋಮವಾರಪೇಟೆ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ನಡೆದ ಬಿಜೆಪಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಫಲಿತಾಂಶ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿವೃದಿ§ ಪರವಾದ ಆಡಳಿತ ಮುಂದುವರೆಯಲು ಜನತೆ ಮಾಡಿರುವ ಆಶಿರ್ವಾದವೆಂದರು.
ಮುಂದಿನ ಮೂರೂವರೆ ವರ್ಷಗಳು ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ ಬಿ.ಜೆ.ಪಿ. ಸರ್ಕಾರ ಇನ್ನು ಮುಂದೆ ಯಾವುದೇ ತೊಂದರೆ ಇಲ್ಲದೆ ಅವದಿ ಪೂರೈಸುವುದರೊಂದಿಗೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು. ಯಡಿಯೂರಪ್ಪ ನವರ ಸಂಪುಟದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಂತ್ರಿಯಾಗುವುದರೊಂದಿಗೆ ಜಿಲ್ಲೆಯ ಉಸ್ತುವಾರಿ ವಹಿಸಿ ಕೊಳ್ಳುವಂತಾಗಲಿ ಎಂದರು.
ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮನುಕುಮಾರ್ ರೈ, ನಗರಾಧ್ಯಕ್ಷ ಎಸ್.ಆರ್. ಸೋಮೇಶ, ತಾಲೂಕು ಪಂಚಾಯತ್ ಸದಸ್ಯ ಧರ್ಮಪ್ಪ, ಪಂ.ಪಂ. ಸದಸ್ಯರಾದ ಪಿ.ಕೆ ಚಂದ್ರು, ಮಹೇಶ್, ಪಕ್ಷದ ಪ್ರಮುಖರಾದ ಕಿಬ್ಬೆಟ್ಟ ಮಧು, ಸುಧಾಕರ್ ಹುಲ್ಲೂರಿಕೊಪ್ಪ ಚಂದ್ರು, ಶರತ್, ಜೀವನ್, ಪ್ರದೀಪ್ ಸಂಭ್ರಮಾಚರಣೆ ಸಂದರ್ಭ ಉಪಸ್ಥಿತರಿದ್ದರು.
ಬಿ.ಜೆ.ಪಿ. ಬಲಿಷ್ಠ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿದ್ದ ಜೆ.ಡಿ.ಎಸ್. ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದು ಹಾಗೂ ಮಾಜಿ ಸಚಿವ ಜಿ.ಟಿ. ದೇವೆಗೌಡರು ಕಾಂಗ್ರೆಸ್ ಪರವಾಗಿ ಬಹಿರಂಗವಾಗಿ ಕೆಲಸ ಮಾಡಿದ ಕಾರಣ ಬಿ.ಜೆ.ಪಿ.ಗೆ ಸೋಲಾಯಿತು ಎಂದು ಅಪ್ಪಚ್ಚು ರಂಜನ್‌ಅಭಿಪ್ರಾಯಪಟ್ಟರು. ಹುಣಸೂರಿ ನಲ್ಲೂ ಬಿ.ಜೆ.ಪಿ. ಬಲಿಷ್ಠವಾಗುತ್ತಿದೆ ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಎಂದು ತಿಳಿಸಿದರು. ಸರ್ಕಾರ ಸುಭದ್ರವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉತ್ತಮ ಅವಕಾಶ ದೊರೆತಂತಾಗಿದೆ ಎಂದು ಹೇಳಿದರು.