ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದ ನೂತನ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ ಅವರು ಶುಕ್ರವಾರ ಕಿಮ್ಸ್ ಆಸ್ಪತ್ರೆಗೆ ಭೇಟಿಕೊಟ್ಟು ಕ್ಷೇತ್ರದ ವಿವಿಧ ರೋಗಿಗಳ ಆರೋಗ್ಯ ವಿಚಾರಿಸಿದರು.
ಇಂಗಳಗಿಯ ಅವರಾದಿ, ಗುಡೇನಕಟ್ಟಿಯ ಜುಲೇಖಾಬೇಗಂ ಜಾತಗಾರ, ಚಿಕ್ಕನರ್ತಿಯ ಕಲ್ಲಪ್ಪ ಮುಶೇನವರ, ಯರಗುಪ್ಪಿ, ಅದರಗುಂಚಿ ಯಲ್ಲವ್ವ ಕಾಮಜಾನ, ಕಲಘಟಗಿಯ ಬೀಬಿಅರ್ಷಾ ಬಸರಿಕಟ್ಟಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿನ 8-10 ರೋಗಿಗಳು ವಿವಿಧ ಕಾಯಿಲೆಗೆ ಸಂಬಂಧಿಸಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ತೀವ್ರ ಅಸ್ವಸ್ಥಗೊಂಡಿರುವ ತರ್ಲಘಟ್ಟದ ರಜೇಸಾಬ್ ಸುಂಕದ ಕ್ಯಾಥ್‌ಲ್ಯಾಬ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರನ್ನೆಲ್ಲ ಕುಸುಮಾವತಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ ಕಿಮ್ಸ್‌ನ ವೈದ್ಯರಿಗೆ ರೋಗಿಗಳ ಬಗ್ಗೆ ಕಾಳಜಿ ವಹಿಸಿ ಹೆಚ್ಚಿನ ಚಿಕಿತ್ಸೆ ನೀಡಬೇಕೆಂದು ಸೂಚಿಸಿದರು. ಇದೇ ವೇಳೆ ಕಿಮ್ಸ್‌ನಲ್ಲಿ ಬಡವರಿಗೆ ಇರುವ ಚಿಕಿತ್ಸಾ ಸೌಲಭ್ಯ, ವೈದ್ಯಕೀಯ ಯಂತ್ರೋಪಕರಣಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು ಎಂದು ತಿಳಿದುಬಂದಿದೆ.
ದಿ| ಸಿ.ಎಸ್. ಶಿವಳ್ಳಿ ಅವರು ಸಹಿತ ತಮ್ಮ ಕ್ಷೇತ್ರದಲ್ಲಿನ ಯಾವುದೇ ಜನರು ಚಿಕಿತ್ಸೆಗೆಂದು ಕಿಮ್ಸ್‌ಗೆ ದಾಖಲಾಗಿದ್ದರೆ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಹೆಚ್ಚಿನ ಚಿಕಿತ್ಸೆ ಕೊಡಿಸಲು ನೆರವಾಗುತ್ತಿದ್ದರು. ಅದೇ ಹಾದಿಯಲ್ಲಿ ಅವರ ಪತ್ನಿ ಕುಸುಮಾವತಿ ಆಯ್ಕೆಯಾದ ಮರುದಿನವೇ ಕಿಮ್ಸ್‌ಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಕಿಮ್ಸ್‌ನ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಮೊದಲಾದವರಿದ್ದರು.
Advertisement
ಕುಂದಗೋಳ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ರೋಗಿಗಳನ್ನು ಕುಸುಮಾವತಿ ಅವರು ತಾವು ಆಯ್ಕೆಯಾದ ಮರುದಿನವೇ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.