Advertisement

ಕನ್ನಡ ಪತ್ರಿಕೋದ್ಯಮಕ್ಕೆ 175 ವರ್ಷ

06:00 AM Jul 01, 2018 | |

ಇಂದಿಗೆ, ಅಂದರೆ ಜುಲೈ 1, 2018ಕ್ಕೆ ಕನ್ನಡ ಪತ್ರಿಕೋದ್ಯಮದ ಇತಿಹಾಸಕ್ಕೆ 175 ವರ್ಷಗಳು! ಕನ್ನಡದ ಪ್ರಪ್ರಥಮ ವಾರ್ತಾಪತ್ರಿಕೆ ಮಂಗಳೂರ ಸಮಾಚಾರ ಪ್ರಕಟಗೊಂಡದ್ದು ಜುಲೈ 1, 1843ರಂದು. ಮಂಗಳೂರಿನ ಬಾಸೆಲ್‌ ಮುದ್ರಣಾಲಯದವರು ಪ್ರಕಟಿಸಿದರು. ರೆವರೆಂಡ್‌ ಹರ್ಮನ್‌ ಫ್ರೆಡ್ರಿಕ್‌ ಮೋಗ್ಲಿಂಗ್‌ ಅವರು ಸಂಪಾದಕರಾಗಿದ್ದರು.

Advertisement

ಇಲ್ಲಿಗೆ ಆ ಕಾಲದ ಶೈಲಿಯ ಮುದ್ರಣ ತಾಂತ್ರಿಕತೆಯನ್ನು ಪರಿಚಯಿಸಿದವರು ಬಾಸೆಲ್‌ ಮಿಷನ್‌ನವರು. “ಬಾಸೆಲ್‌ ಎಂಬುದು ಜರ್ಮನಿ, ಫ್ರಾನ್ಸ್‌, ಸ್ವಿಜರ್ಲೆಂಡ್‌ ದೇಶಗಳು ಸೇರುವಲ್ಲಿ ಸ್ವಿಜರ್ಲೆಂಡ್‌ನ‌ಲ್ಲಿರುವ ಚಿಕ್ಕ ಪಟ್ಟಣ. 1815ರಲ್ಲಿ ಸ್ಥಾಪನೆಯಾಗಿ 1834ರಲ್ಲಿ ಅವರು ಆಗಿನ ಕೆನರಾ ಜಿಲ್ಲೆಯ ಮಂಗಳೂರಿಗೆ ಬಂದರು’. ಇಲ್ಲಿ ಮುದ್ರಣ ಸಹಿತ ತಮ್ಮ ಚಟುವಟಿಕೆಗಳನ್ನು ಆರಂಭಿಸಿದರು. ಅಧ್ಯಯನ ಮಾಹಿತಿಗಳ ಪ್ರಕಾರ, 1841ರಲ್ಲಿ ರೆ| ಜಾನ್‌ ವೇಗಲ್‌ ಎಂಬ ಬಾಸೆಲ್‌ ಮಿಷನರಿಯವರು ಮುಂಬಯಿಯಿಂದ ಒಂದು ಮುದ್ರಣ ಯಂತ್ರವನ್ನು ಮಂಗಳೂರಿಗೆ ತಂದರು. ಬಾಸೆಲ್‌ ಮಿಷನ್‌ ಪ್ರಸ್‌ ಆರಂಭಿಸಿದರು. ಮುಂದೆ ಅದು ಆಯಾ ಕಾಲಘಟ್ಟದ ಮುದ್ರಣ ಯಂತ್ರಗಳನ್ನು ಹೊಂದುತ್ತಾ ಸಾಗಿತು. ಮುದ್ರಣಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳೂ ಇಲ್ಲಿ ನಡೆಯಿತು.

ಈ ನಡುವೆ 1836ರಲ್ಲಿ ರೆವರೆಂಡ್‌ ಹರ್ಮನ್‌ ಮೊಗ್ಲಿಂಗ್‌ ಅವರು ಜರ್ಮನಿಯಿಂದ ಮಂಗಳೂರಿನ ಬಾಸೆಲ್‌ ಮಿಷನ್‌ಗೆ ಆಗಮಿಸಿದರು. ಅವರು ಇಲ್ಲಿ ನಾಲ್ಕು ವರ್ಷಗಳ ಕಾಲ ಕನ್ನಡ ಕಲಿತರು. ಕನ್ನಡ ಪತ್ರಿಕೆಯನ್ನು ಆರಂಭಿಸುವುದು, ಕನ್ನಡದಲ್ಲಿ ಧಾರ್ಮಿಕ ಸಹಿತ ಕೃತಿಗಳನ್ನು ರಚಿಸುವುದು ಅವರ ಬದ್ಧತೆಯಾಗಿತ್ತು.

1843ರ ಜುಲೈ 1ರಂದು ಅವರ ಸಂಪಾದಕತ್ವದಲ್ಲಿ ಮಂಗಳೂರ ಸಮಾಚಾರ ಎಂಬ ಕನ್ನಡ ಪತ್ರಿಕೆ ಆರಂಭವಾಯಿತು. ಕನ್ನಡ ಪತ್ರಿಕೋದ್ಯಮಕ್ಕೆ ಅವರು ಈ ಮೂಲಕ ನಾಂದಿ ಹಾಡಿದರು. ಆರಂಭಿಕವಾಗಿ ಇದು ಪಾಕ್ಷಿಕವಾಗಿತ್ತು. ಕಲ್ಲಚ್ಚು ಸಹಿತ ಕೆಲವು ತಂತ್ರಗಳು ಆಗಿನ ಮುದ್ರಣ ಪ್ರಕ್ರಿಯೆಗೆ ಬಳಕೆಯಾಗುತ್ತಿತ್ತು. ಮೊಳೆಗಳ ಸ್ವರೂಪದಲ್ಲಿ ಅಕ್ಷರಗಳ ಜೋಡಣೆಯಾಗುತ್ತಿತ್ತು. ಬೆಲೆ ಆಗಿನ ಒಂದು ದುಡ್ಡು!

ಮಂಗಳೂರ ಸಮಾಚಾರ ಪತ್ರಿಕೆ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ಪತ್ರಿಕೆ ಸಹಿತ ಓದುವ ಹವ್ಯಾಸ ಬೆಳೆಯಲು ಸ್ಫೂರ್ತಿಯಾಯಿತು. ಪತ್ರಿಕೆಯಲ್ಲಿ  “ವೂರ ವರ್ತಮಾನಗಳು, ಸರಕಾರಿ ನಿರೂಪಗಳು/ ಕಾನೂನು, ಸುಬುದ್ಧಿಯನ್ನು ಹೇಳುವ ಸಾಮತಿಗಳು, ಹಾಡುಗಳು, ವಾಚಕರ ವಾಣಿ’ಗಳು ಅಂಕಣಗಳಾಗಿದ್ದವೆಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಈ ಪತ್ರಿಕೆಯ ಹೆಸರನ್ನು “ಕಂನಡ ಸಮಾಚಾರ’ ಎಂದು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಆರಂಭಿಸಿದರು. ರೆ| ಮೊಗ್ಲಿಂಗ್‌ ಅವರು ಈ ಬಗ್ಗೆ ಹೀಗೆ 16ನೇ ಸಂಚಿಕೆಯಲ್ಲಿ ಹೇಳಿದ್ದಾರೆ- “ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ, ಶಿರಸಿ, ಹೊಂನಾವರ ಮೊದಲಾದ ಸ್ಥಳಗಳಲ್ಲಿ ಕೆಲವು ನೂರು ಮಂದಿ ಈ ಕಾಗದವನ್ನು ಈವರೆಗೆ ತೆಗೆದುಕೊಳ್ಳುತ್ತಾ ಬಂದರು. ಮೊದಲಿನ ನಂಬ್ರದ ಕಾಗದಗಳನ್ನು ಛಾಪಿಸಿ ಪ್ರಕಟನ ಮಾಡುವಾಗ್ಲೆ ನಾವು ಮಾಡಿದ ಆಲೋಚನೆ ಈ ದೇಶಸ್ಥರಲ್ಲಿ ಅನೇಕರಿಗೆ ಕಂನಡ ಭಾಷೆಯಲ್ಲಿ ಬರೆದ ಒಂದು ಸಮಾಚಾರ ಕಾಗದವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ಧಿ ಮಾಡುವ ಪ್ರಯತ್ನದಿಂದ ಇನ್ನು ಮುಂದೆ ಅದನ್ನು ಕಲ್ಲಿನಿಂದ ಛಾಪಿಸದೆ ಬಳ್ಳಾರಿಯಲ್ಲಿ ಇರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚೆ$çಸಿದ್ದೇವೆ.ಆ ಮೇಲೆ ಕಂನಡ ಶೀಮೆಯ ನಾಲ್ಕು ದಿಕ್ಕುಗಳಲ್ಲಿ ಯಿರುವವರು ಶುದ್ಧವಾದ ಮೊಳೆ ಅಚ್ಚುಗಳಿಂದ ಆಗುವ ಬರಹವನ್ನು ಸುಲಭವಾಗಿ ಓದಬಹುದು. ಇದಲ್ಲದೆ… ಹೆಚ್ಚು ವರ್ತಮಾನವನ್ನೂ ಚರಿತ್ರೆಗಳನ್ನೂ ವಿದ್ಯಾಪಾಠಗಳನ್ನೂ, ಬುದ್ಧಿಮಾತುಗಳನ್ನೂ ಬರೆಯುವುದಕ್ಕೆ ಸ್ಥಳ ಸಿಕ್ಕುವುದು’.

Advertisement

ಕನ್ನಡ ಪತ್ರಿಕೋದ್ಯಮಕ್ಕೆ ಆರಂಭಿಕ ದಿನಗಳಿಂದಲೇ ಓದುಗರ ಬೆಂಬಲ ದೊರೆಯಿತೆಂದು ಈ ಮಾತುಗಳಿಂದ ತೀರ್ಮಾನಕ್ಕೆ ಬರಬಹುದು. ಮೊಗ್ಲಿಂಗ್‌ (1811-1881) ಅವರು ಹೀಗೆ ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಸ್ಥಾಪಿಸಿದರು.

175 ವರ್ಷಗಳ ಹಿಂದೆ ಇಲ್ಲಿ ಆರಂಭವಾದ ಕನ್ನಡ ಪತ್ರಿಕಾರಂಗ ಈಗ ಪ್ರತಿಷ್ಠೆಯ, ವಿಶ್ವಾಸಾರ್ಹ ಪತ್ರಿಕೋದ್ಯಮ ವಾಗಿ ವಿಸ್ತಾರಗೊಂಡಿದೆ. ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದಿಂದ ಸಮ್ಮಿಲಿತವಾಗಿ ಸಮೃದ್ಧಗೊಂಡಿದೆ. ಪತ್ರಿಕೆಗಳು, ನಿಯತಕಾಲಿಕೆಗಳು, ಸೆಟಿಲೈಟ್‌ ಟಿವಿ ವಾಹಿನಿಗಳು, ದೇಶದಲ್ಲೇ ಗರಿಷ್ಠ ಎಂಬಂತಹ ಪ್ರಾದೇಶಿಕ ಪ್ರಸಾರದ ವಾಹಿನಿಗಳು, ಆನ್‌ಲೈನ್‌ ಆವೃತ್ತಿಗಳು, ಸಂಜೆ ಪತ್ರಿಕೆಗಳು, ವೆಬ್‌ಸೈಟ್‌ಗಳು, ಫೇಸ್‌ಬುಕ್‌-ವಾಟ್ಸಪ್‌ ಮಾಹಿತಿ ವಿನಿಮಯಗಳು, ಆಕಾಶವಾಣಿ- ಎಫ್‌ಎಂ ಪ್ರಸಾರಗಳು, ಇಂಟರ್‌ನೆಟ್‌ ಬಳಕೆಗಳು.. ಹೀಗೆ ಎಲ್ಲಾ ಸ್ವರೂಪದ ಮಾಧ್ಯಮಗಳಲ್ಲಿ ಕನ್ನಡ ರಾರಾಜಿಸುತ್ತಿದೆ. 24*7 ಎಂಬಂತೆ ಸುದ್ದಿ, ಮಾಹಿತಿ, ಮನರಂಜನೆ.

ಮುದ್ರಣ, ವಿದ್ಯುನ್ಮಾನ ಮಾಧ್ಯಮ ಸಹಿತ ಕನ್ನಡ ಪತ್ರಿಕೋದ್ಯಮ ಈಗ ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಸಮೂಹ ಸಂವಹನ- ಪತ್ರಿಕೋದ್ಯಮದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಪಿಎಚ್‌ಡಿ ಅವಕಾಶಗಳಿವೆ. ಎಲ್ಲಾ ಮಹಾ ಅಭಿಯಾನಗಳು ಪುಟ್ಟ ಹೆಜ್ಜೆಯೊಂದಿಗೆ ಆರಂಭವಾಗುತ್ತವೆ ಎಂಬ ಪ್ರಸಿದ್ಧ ಉಕ್ತಿಯೊಂದಿದೆ. ಅಂತೆಯೇ 175 ವರ್ಷಗಳ ಹಿಂದೆ ಮಂಗಳೂರ ಸಮಾಚಾರ ಎಂಬ ಪುಟ್ಟ ಹೆಜ್ಜೆಯೊಂದಿಗೆ ಆರಂಭವಾದ ಕನ್ನಡ ಪತ್ರಿಕೋದ್ಯಮದ ಅಭಿಯಾನ ಈಗ ಮಹಾಅಭಿಯಾನವಾಗಿ ಸಂಭ್ರಮಿಸುತ್ತಿದೆ.

ಈ ದೇಶವೆಂಬ ಮನೆಯಲ್ಲಿ  ವಾಸಿಸುವ ಜನರು…
175 ವರ್ಷಗಳ ಹಿಂದೆ, ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರದಲ್ಲಿ ಸಂಪಾದಕ ರೆ| ಮೊಗ್ಲಿಂಗ್‌ ಅವರು ಪತ್ರಿಕೆಯ ಆಶಯವನ್ನು ಹೀಗೆ ವಿವರಿಸಿದ್ದಾರೆ: ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ಉಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕೂ ದಿಕ್ಕಿಗೆ ಕಿಟಿಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷವೊಂದು ಸಾರಿ ಶಿದ್ದ ಮಾಡಿ ಅದನ್ನು ಓದಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಿಕಿಗಳನ್ನು ನೋಡಿದ ಹಾಗಿರುವುದು’.

ಮನೋಹರ ಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next