Advertisement

ನವಜಾತ ಶಿಶುವಿನ ಶ್ರವಣ ಪರೀಕ್ಷೆ ಕಡ್ಡಾಯ

11:19 AM Sep 08, 2018 | |

ಮೈಸೂರು: ನವಜಾತ ಶಿಶುಗಳು ಗಂಭೀರ ಸ್ವರೂಪದ ಶ್ರವಣದೋಷದಿಂದ ಬಳಲುವುದನ್ನು ತಪ್ಪಿಸಲು ಆರಂಭದಲ್ಲಿಯೇ ಸಮಸ್ಯೆಯನ್ನು ಗುರುತಿಸಬೇಕಾದ ಅಗತ್ಯತೆ ಇದೆ ಎಂದು ಕಾಕ್ಲಿಯರ್‌ ಗ್ಲೋಬಲ್‌ ಹಿಯರಿಂಗ್‌ನ ರಾಯಭಾರಿ, ಅಂತಾರಾಷ್ಟ್ರೀಯ ಕ್ರಿಕೆಟಿಗ ಬ್ರೆಟ್‌ ಲೀ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರವಣದೋಷದಿಂದ ಆಗುವ ನಷ್ಟದ ಅಂದಾಜು ಊಹೆಗೆ ನಿಲುಕದ್ದು, ಒಂದು ಅಂದಾಜಿನ ಪ್ರಕಾರ ಪ್ರಪಂಚದಲ್ಲಿ 466 ದಶಲಕ್ಷ ಜನರು ಶ್ರವಣದೋಷ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಕುರಿತು ಗಮನಸೆಳೆಯಲು ನಾನು ತೊಡಗಿಕೊಂಡಿದ್ದೇನೆ. ಕಿವುಡುತನ ನಿವಾರಣೆಗೆ ಈಗ ತಂತ್ರಜ್ಞಾನ ನೆರವಾಗುತ್ತಿದೆ. ಕಾಕ್ಲಿಯರ್‌ನ ಒಟ್ಟು ಗುರಿ ಜನರಿಗೆ ಅವರ ಬದುಕನ್ನು ಮರಳಿಸುವುದೇ ಆಗಿದೆ ಎಂದರು.

ಪೋಷಕರು ಮತ್ತು ಕುಟುಂಬ ಸದಸ್ಯರು ಕಿವುಡುತನದ ಯಾವುದೇ ಸಣ್ಣ ಚಿಹ್ನೆಗಳನ್ನು ನಿರ್ಲಕ್ಷಿಸಬಾರದು ಮತ್ತು ಅತ್ಯಂತ ತುರ್ತುಕ್ರಮ ತೆಗೆದುಕೊಳ್ಳಬೇಕು. ಒಂದು ಇಂಪ್ಲಾಂಟ್‌ ಹೇಗೆ ಒಬ್ಬ ವ್ಯಕ್ತಿಯನ್ನು ಮೌನದಿಂದ ಶಬ್ದದೆಡೆಗೆ ಕೊಂಡೊಯ್ಯುತ್ತದೆ ಎಂಬುದನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇದೊಂದು ಜೀವನ ಬದಲಾಗುವ ಕ್ಷಣವಾಗಿದೆ ಎಂದರು. 

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ವಿಶ್ವದ ಜನಸಂಖ್ಯೆಯ ಶೇ.5ರಷ್ಟು ಮಂದಿ ಶ್ರವಣದೋಷದಿಂದ ಬಳಲುತ್ತಿದ್ದು, ಇವರಲ್ಲಿ 34 ದಶಲಕ್ಷ ಮಕ್ಕಳೂ ಸೇರಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ 2050ರ ವೇಳೆಗೆ 900 ದಶಲಕ್ಷ ಜನರು ಶ್ರವಣದೋಷದ ತೊಂದರೆಗೆ ಒಳಗಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸಾಫ್ಟ್ವೇರ್‌ ಅಭಿವೃದ್ಧಿ: ಕೇರಳದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ 66 ಸರ್ಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಶ್ರವಣದೋಷ ಪರೀಕ್ಷೆ ಮಾಡಲಾಗುತ್ತಿದೆ. ಕೇರಳ ಸಾಮಾಜಿಕ ಭದ್ರತಾ ಮಿಷನ್‌ ಇದಕ್ಕಾಗಿ ಸಾಫ್ಟ್ವೇರ್‌ ಅಭಿವೃದ್ಧಿ ಪಡಿಸಿದೆ. ಈ ಮಾಹಿತಿಯನ್ನು ಜಿಲ್ಲಾ ಮಟ್ಟದ ಸಮಿತಿಗಳು ಸೇರಿ ಇತರೆ ಸಂಸ್ಥೆಗಳ ಜೊತೆಗೆ ಹಂಚಿಕೆ ಮಾಡಿಕೊಳ್ಳಲು, ಮುಂದುವರಿದ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗಲಿದೆ ಎಂದರು. 

Advertisement

ಡಾ.ದತ್ತಾತ್ರಿ ಮಾತನಾಡಿ, ಭಾರತದಲ್ಲಿ ಶ್ರವಣದೋಷ ಸಮಸ್ಯೆ ಕುರಿತಂತೆ ಸಾರ್ವಜನಿಕ ಅರಿವು ಕಡಿಮೆ ಇದೆ. ಈ ಹಿಂದೆ ಮಕ್ಕಳಲ್ಲಿ ಈ ದೋಷ ಕಂಡುಬಂದಾಗ, ಅವರು ಮೂಕಭಾಷೆ ಕಲಿತು ಅದರಲ್ಲಿ ಪರಿಣಿತಿ ಹೊಂದಿ ಧ್ವನಿಯಿಲ್ಲದ ಬದುಕಿಗೆ ಹೊಂದಿಕೊಳ್ಳಬೇಕಾಗಿತ್ತು.

ಆದರೆ, ಮುಂದಿನ ದಿನಗಳಲ್ಲಿ ಆ ಸಮಸ್ಯೆ ಇರುವುದಿಲ್ಲ. ಶಿಶುವಿನ ಜನನವಾದ ಮೊದಲ ತಿಂಗಳಲ್ಲೇ ಅಥವಾ 12 ತಿಂಗಳ ಒಳಗೆ ಪರೀಕ್ಷೆ ಮಾಡಿಸುವುದು ಉತ್ತಮ. ಈ ಹಂತದಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡುವುದು ಕೂಡಾ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next