ಸಾಹಸ ನಿರ್ದೇಶಕರ “ಸಾಧನೆ’ ಬಗ್ಗೆ ಎಷ್ಟು ಹೇಳಿದರೂ ಸಾಲದು. ತೆರೆಯ ಮೇಲೆ ಹೀರೋಗಳು ಎದುರಾಳಿಗಳನ್ನು ಹೊಡೆದುರುಳಿಸುವ ದೃಶ್ಯ ನೋಡಿ, ಅತ್ತ ಅಭಿಮಾನಿಗಳು ಜೋರು ಶಿಳ್ಳೆ, ಚಪ್ಪಾಳೆ ಹಾಕುತ್ತಾರೆ. ಅದೆಲ್ಲಾ ಕ್ರೆಡಿಟ್ ಸೇರೋದು ಮಾತ್ರ ಆ ಹೀರೋಗೆ ಹೊರತು, ಹೀಗೇ ಮಾಡಬೇಕು ಅಂತ ಹೇಳಿಕೊಡುವ ಸ್ಟಂಟ್ ಮಾಸ್ಟರ್ಗಲ್ಲ.
ಆ್ಯಕ್ಷನ್ ಹೀರೋ ಅಂತ ಕರೆಸಿಕೊಳ್ಳುವ ಪ್ರತಿಯೊಬ್ಬ ನಟ ಕೂಡ ಸ್ಟಂಟ್ ಮಾಸ್ಟರ್ ಹೇಳಿದ್ದನ್ನೇ ಮಾಡಬೇಕು. ಈಗಿಲ್ಲಿ ಹೇಳಹೊರಟಿರುವ ವಿಷಯ ಸ್ಟಂಟ್ ಮಾಸ್ಟರ್ ಬಗ್ಗೆ. ಅದರಲ್ಲೂ ಕಳೆದ ಎರಡೂವರೆ ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಥ್ರಿಲ್ ಎನಿಸುವಂತಹ ಸ್ಟಂಟ್ ಮಾಡುತ್ತ,ಮಾಡಿಸುತ್ತ ಬಂದಿರುವ ಥ್ರಿಲ್ಲರ್ ಮಂಜು ಬಗ್ಗೆ.
ಹೌದು, ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಗಾಂಧಿನಗರಕ್ಕೆ ಎಂಟ್ರಿಯಾಗಿ ಬರೋಬ್ಬರಿ 25 ವರ್ಷಗಳು ಪೂರೈಸಿವೆ. ಈವರೆಗೆ 456 ಚಿತ್ರಗಳಿಗೆ ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ 17ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ, ತುಳು, ಗುಜರಾತಿ, ಕೊಂಕಣಿ ಸೇರಿದಂತೆ ನೂರಾರು ಚಿತ್ರಗಳಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಥ್ರಿಲ್ಲರ್ ಮಂಜು ಬಗ್ಗೆ ಈಗ ಇಷ್ಟೊಂದು ಹೇಳುವುದಕ್ಕೆ ಕಾರಣವೂ ಇದೆ. ಐದು ವರ್ಷದ ಹಿಂದೆ “ಪೊಲೀಸ್ ಸ್ಟೋರಿ 3′ ಎಂಬ ಆ್ಯಕ್ಷನ್ ಸಿನಿಮಾ ಮಾಡಿದ್ದರು. ಸುದೀಪ್ ಆ ಚಿತ್ರದಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಥ್ರಿಲ್ಲರ್ ಯಾವ ಸಿನಿಮಾ ನಿರ್ದೇಶನಕ್ಕೂ ಕೈ ಹಾಕಿರಲಿಲ್ಲ. ಆದರೆ, ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈಗ ಹೊಸ ವಿಷಯವೆಂದರೆ, ಥ್ರಿಲ್ಲರ್ ಮಂಜು ಹೊಸದೊಂದು ಸಿನಿಮಾಗೆ ಕೈ ಹಾಕಿದ್ದಾರೆ.
ಅದೊಂದು ಹೊಸಬಗೆಯ ಕಥೆ. ಅದು ಪಕ್ಕಾ ಆ್ಯಕ್ಷನ್ ಸಿನಿಮಾ ಬೇರೆ. ಆ ಚಿತ್ರದ ಮೂಲಕ ಹೊಸ ಸ್ಟಂಟ್‌ಗಳನ್ನು ಪರಿಚಯಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈಗಾಗಲೇ ಅದಕ್ಕೆ ಎಲ್ಲಾ ತಯಾರಿ ನಡೆದಿದ್ದು, ಇಷ್ಟರಲ್ಲೇ ಚಿತ್ರದ ಶೀರ್ಷಿಕೆ ಏನು, ಹೀರೋ ಯಾರು ಇತ್ಯಾದಿ ವಿಷಯವನ್ನು ಹೇಳಲಿದ್ದಾರೆ. ಅವರಿಗೆ ಇರುವ ದೊಡ್ಡ ಕನಸೆಂದರೆ, ಕನ್ನಡದಲ್ಲಿ ನೂರು ಕೋಟಿ ಬಿಜಿನೆಸ್ ಮಾಡುವಂತಹ ಚಿತ್ರವೊಂದನ್ನು ಮಾಡಬೇಕೆಂಬುದು.
ಆ ಮೂಲಕ ದಾಖಲೆ ಬರೆಯೋ ಆಸೆ ಅವರದು. ಇಷ್ಟು ವರ್ಷ ನಿರ್ದೇಶನದಿಂದ ದೂರ ಇದ್ದ ಥ್ರಿಲ್ಲರ್, ಆ ಗ್ಯಾಪ್‌ನಲ್ಲಿ ಸ್ಟಂಟ್ ಮಾಡತ್ತಲೇ ಸದ್ದಿಲ್ಲದೆ ನಾಲ್ಕು ಕಥೆಗಳನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಸದ್ಯಕ್ಕೆ ಸ್ಟಂಟ್ ಮಾಡಿಸುವುದರಲ್ಲೇ ಬಿಜಿಯಾಗಿರುವ ಥ್ರಿಲ್ಲರ್ ಕೈಯಲ್ಲಿ ಆರೇಳು ಚಿತ್ರಗಳಿವೆ. ರಿಲೀಸ್‌ಗೆ “ಲೀಡರ್’, “ಮರಿ ಟೈಗರ್’,” ಉಪೇಂದ್ರ ಮತ್ತೆ ಬಾ’,” ನಂಜುಂಡಿ ಕಲ್ಯಾಣ 2′, ರಾಜ ಲವ್ಸ್ ರಾಧೆ’ ಸೇರಿದಂತೆ ಹೊಸಬರ ಚಿತ್ರಗಳಿವೆ.