ಜಗ್ಗೇಶ್ ಪುತ್ರ ಗುರುರಾಜ್ ಅಭಿನಯದ “ದಂಧೆ ಬಾಯ್ಸ’ ಆರಂಭದಲ್ಲಷ್ಟೇ ಸುದ್ದಿಯಾಗಿತ್ತು. ಆ ಬಳಿಕ ಆ ಸಿನಿಮಾ ಬಗ್ಗೆ ಎಳ್ಳಷ್ಟೂ ಮಾಹಿತಿ ಇರಲಿಲ್ಲ. ಸದ್ದಿಲ್ಲದೆಯೇ ಶೇ. 90 ರಷ್ಟು ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್‌ಗೆ ರೆಡಿಯಾಗುತ್ತಿದೆ ಚಿತ್ರತಂಡ. ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಜಗ್ಗೇಶ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದ ಜಗ್ಗೇಶ್, “ಈ ಚಿತ್ರದ ನಿರ್ದೇಶಕ ಚಂದ್ರಹಾಸ, ಒಂಥರಾ ಹಠವಾದಿ. ಮೊದಲಿದ್ದ ನಿರ್ಮಾಪಕರು ಕಾರಣಾಂತರದಿಂದ ಹಿಂದಕ್ಕೆ ಸರಿದಾಗ, ಅವರೇ ನಿರ್ಮಾಣ ಮಾಡಿ ಸಿನಿಮಾ ಮುಗಿಸಿದ್ದಾರೆ. ರಾಯರು ಪ್ರೇಕ್ಷಕರ ರೂಪದಲ್ಲಿ ಬಂದು ನಿಮಗೆ ಒಳ್ಳೆಯದನ್ನು ಮಾಡುತ್ತಾರೆ. ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಕೆಲವರಿಗೆ ಯೋಗ ಬರುತ್ತೆ. ಅದರಿಂದ ಪರವಶನಾಗಿ, ಎಲ್ಲವನ್ನೂ ನಾನೇ ಮಾಡಿದ್ದು ಅಂತ ಹೇಳಿಕೊಳ್ಳುತ್ತಾರೆ. ಆದರೆ, ನಾನು ಅಂತ ಹೇಳಿಕೊಳ್ಳುವವನು ಮೂರ್ಖ. ಈ ಚಿತ್ರತಂಡ ಕಷ್ಟಪಟ್ಟಿರುವುದು ಗೊತ್ತಿದೆ. ಮುಂದೆ ಪ್ರತಿಫಲ ಸಿಗುತ್ತೆ’ ಎಂದರು ಜಗ್ಗೇಶ್.
ನಿರ್ದೇಶಕ ಕಮ್ ನಿರ್ಮಾಪಕ ಬಿ.ಕೆ.ಚಂದ್ರಹಾಸ ಅವರಿಗೆ ಮೊದಲು ನಿರ್ದೇಶನದ ಜವಾಬ್ದಾರಿ ಇತ್ತಂತೆ. ಆದರೆ, ಮೂಲ ನಿರ್ಮಾಪಕರು ಅನಾರೋಗ್ಯದಿಂದ ಹಿಂದೆ ಸರಿದಿದ್ದರಿಂದ, ಕೊನೆಗೆ ಅವರೇ ನಿರ್ಮಾಣ ಮಾಡುವ ಧೈರ್ಯ ಮಾಡಿದ್ದರಿಂದ ಸಿನಿಮಾ ಮಾಡಿ ಮುಗಿಸಿದ್ದಾರಂತೆ. “ಹಳ್ಳಿಯಿಂದ ಬರುವ ಮೂವರು ಅಮಾಯಕ ಅವಿದ್ಯಾವಂತ ಹುಡುಗರು, ಬೆಂಗಳೂರಿಗೆ ಬಂದು ಬದುಕಲು ರೌಡಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಡಾನ್ ಒಬ್ಬನನ್ನು ಕೊಲೆ ಮಾಡಿದರೆ ಆ ಜಾಗದಲ್ಲಿ ನಾವೇ ಇರಬಹುದು ಎಂಬ ಆಸೆಯಿಂದ ಕೆಲ ದಂಧೆಗೆ ಕೈ ಹಾಕುತ್ತಾರೆ. ಅವರ ಆಸೆ, ಗುರಿ ಈಡೇರುತ್ತದೆಯಾ ಎಂಬುದು ಒನ್‌ಲೈನ್. ಇಲ್ಲಿ ಬೆಂಗಳೂರಿನ ಇನ್ನೊಂದು ಕರಾಳ ಮುಖವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಅಂತ ವಿವರ ಕೊಟ್ಟರು ಚಂದ್ರಹಾಸ.
ಗುರುರಾಜ ಜಗ್ಗೇಶ್ ಇಲ್ಲಿ ಹೊಸತನ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಗೆಳತನಕೋಸ್ಕರ ಏನೆಲ್ಲಾ ಮಾಡ್ತಾನೆ ಎನ್ನುವ ಪಾತ್ರ ಅವರದಂತೆ. ಇನ್ನು, ಮಹೇಶ್‌ಗೆ ಮೊದಲ ಚಿತ್ರದಲ್ಲಿ ನಟಿಸಿದ ಖುಷಿ. ತನುಜಾ ಇಲ್ಲಿ ನಾಯಕಿಯಾಗಿದ್ದಾರೆ. ಅವರಿಗೆ ಒಳ್ಳೆಯ ಪಾತ್ರ ಮಾಡಿರುವುದರಿಂದ ಹೊಸ ಐಡೆಂಟಿಟಿ ಸಿಗುತ್ತೆ ಎಂಬ ವಿಶ್ವಾಸವಿದೆಯಂತೆ. ಸೌಜನ್ಯ ಇಲ್ಲಿ ವೇಶ್ಯೆ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಯತಿರಾಜ್ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಶ್ರೀವತ್ಸ ಸಂಗೀತ ನೀಡಿದರೆ, ಪಿ.ಎಲ್.ರವಿ ಅವರ ಛಾಯಾಗ್ರಹಣವಿದೆ.