ಬಾಗಲಕೋಟೆ: ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಕುರಿತು ಗುಜರಾತ್ ಮಾದರಿಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಕುರಿತು ಚರ್ಚೆಯಾಗಿಲ್ಲ. ದಂಡದ ಮೊತ್ತ ಕಡಿಮೆ ಮಾಡುವ ಕುರಿತು ಎಲ್ಲೆಡೆ ಒತ್ತಡ ಬಂದಿದ್ದು, ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್ಚು ದಂಡಕ್ಕೆ ಹೆದರಿ ಕಾನೂನು ಪಾಲನೆ ಮಾಡುತ್ತಾರೆ ಎಂಬುದು ಸರ್ಕಾರದ ಉದ್ದೇಶ. ಹೀಗಾಗಿಯೇ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೊಳಿಸಿದೆ. ಈ ಹೊಸ ಕಾಯ್ದೆಯಡಿ ದಂಡ ಸ್ವಲ್ಪ ಹೆಚ್ಚಾಗಿದೆ ಎಂದು ಎಲ್ಲ ರಾಜ್ಯದವರು ಹೇಳಿದ್ದಾರೆ. ಹೀಗಾಗಿ, ಕೆಲವು ರಾಜ್ಯಗಳಲ್ಲಿ ದಂಡದ ಸ್ವರೂಪದಲ್ಲಿ ತಿದ್ದುಪಡಿ ಮಾಡಲಾಗಿದೆ. ಅದು ನಮಗೆ ನಿಖರವಾಗಿ ತಿಳಿದಿಲ್ಲ. ರಾಜ್ಯದಲ್ಲೂ ದಂಡವನ್ನು ಪುನರ್ ಪರಿಶೀಲನೆ ಮಾಡುವ ವಿಚಾರದಲ್ಲಿದ್ದೇವೆ ಎಂದರು.
ಸಾರಿಗೆ ನಿಯಮ ಉಲ್ಲಂಘನೆ: ಹೊಸ ಮೋಟಾರು ವಾಹನ ಕಾಯಿದೆ ಅನ್ವಯ ಕಾರು ಚಾಲಕರ ಪಕ್ಕದ ಸೀಟಿನಲ್ಲಿ ಕುಳಿತ ವ್ಯಕ್ತಿಗಳು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಬೇಕು. ಆದರೆ, ಕಾರಜೋಳ ಹೊಸ ಪ್ರವಾಸಿ ಮಂದಿರದಿಂದ ಡಿಸಿ ಕಚೇರಿ, ಅಲ್ಲಿಂದ ಬಾದಾಮಿ ತಾಲೂಕು ಕಗಲಗೊಂಬ ಗ್ರಾಮಕ್ಕೆ ತೆರಳಿದರು. ಈ ವೇಳೆ, ಸೀಟ್ ಬೆಲ್ಟ್ ಧರಿಸಲೇ ಇಲ್ಲ.
ಜೆಡಿಎಸ್ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿಗೆ ಬರುವುದಾದರೆ ಸ್ವಾಗತ. ಬಿಜೆಪಿ ನಿಂತ ನೀರಲ್ಲ. ಹರಿಯುವ ನೀರು. ಬಿಜೆಪಿಯ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತವಿದೆ.
-ಗೋವಿಂದ ಕಾರಜೋಳ, ಡಿಸಿಎಂ