Advertisement
ಪ್ರಥಮ ಬಾರಿಗೆ ಶಾಸಕರಾದವರಿಗೆ ಸದನದಲ್ಲಿ ಪಾಲ್ಗೊಳ್ಳುವ ಕುರಿತು ಈಗಾಗಲೇ ಕಾರ್ಯಾಗಾರ ನಡೆಸಿದ್ದ ಸ್ಪೀಕರ್, ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಡುವ ಮುನ್ನ ಸಂಸದೀಯ ಅನುಭವ ಹೆಚ್ಚಿಸಲೂ ಅವಕಾಶ ಮಾಡಿಕೊಟ್ಟರು.
Related Articles
ಬೈಂದೂರು ಬಿಜೆಪಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಬಡವರ ಮನೆಗೆ ಅಕ್ಕಿ ಮುಟ್ಟಿಸುವ ಯೋಚನೆ ಮತ್ತು ಯೋಜನೆ ಯಾವುದೇ ಸರ್ಕಾರ ಮಾಡಿದ್ದರೂ ಅಭಿನಂದನೀಯ. ಆದರೆ, ಯಾವುದೇ ದೇಶ ಅಥವಾ ರಾಜ್ಯದ ಬಂಡವಾಳ ವೆಚ್ಚ ಹೆಚ್ಚಾದರಷ್ಟೇ ಅಭಿವೃದ್ಧಿ ಸಾಧ್ಯ. ನಮ್ಮಲ್ಲಿ ವಿದ್ಯಾಕೇಂದ್ರಗಳು ಸಾಕಷ್ಟಿವೆ. ಮೀನುಗಾರಿಕೆ ಸೇರಿದಂತೆ ಹಲವು ಉದ್ಯಮಗಳಿವೆ. ದುಡಿಯುವ ಕೈಗಳಿಗೆ ಆಧಾರ ಕೊಟ್ಟರೆ ಬಡತನ ದೂರಾಗುತ್ತದೆ. ಜನಪ್ರಿಯ ಯೋಜನೆಗಳು ಬಡತನವನ್ನು ಅಣಕಿಸುತ್ತಿವೆಯೋ? ಆಡಳಿತವನ್ನು ಅಣಕಿಸುತ್ತಿವೆಯೋ ಎಂದು 5 ಗ್ಯಾರಂಟಿಗಳ ಹೆಸರು ಹೇಳದೆಯೇ ಟೀಕಿಸಿದರು.
Advertisement
ಇದನ್ನು ಪುಷ್ಟೀಕರಿಸುವಂತೆ ಕಥೆಯೊಂದನ್ನೂ ಹೇಳಿದ ಅವರು, ಕೋಳಿಯ ಪುಕ್ಕ ಕಿತ್ತಾಗ ಜೀವಂತ ಕೋಳಿ ನೋವಿನಿಂದ ಒದ್ದಾಡುತ್ತಿರುತ್ತದೆ. ಪುಕ್ಕ ಕಿತ್ತ ನಂತರ ಅದೇ ವ್ಯಕ್ತಿ ಎರಡೆರಡು ಅಕ್ಕಿ ಕಾಳು ಹಾಕುತ್ತಾ ಹೋಗುತ್ತಾನೆ. ಆ ಕೋಳಿಯೂ ಅವನ ಹಿಂದೆ ಹೋಗುತ್ತದೆ. ಬಡತನ ಅಣಕಿಸುವ ವಿಷಯ ಆಗಬಾರದು. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಆಸ್ಪತ್ರೆ, ಶಾಲೆ, ಕಾಲುಸಂಕಗಳಿಗೆ ಒದ್ದಾಡುತ್ತಿದ್ದೇವೆ. ಕೊಲ್ಲೂರು ಮೂಕಾಂಬಿಕೆ, ವರಾಹಿ, ಕೆಪಿಸಿಯಂತಹ ಅನೇಕ ಆದಾಯ ತರುವ ಯೋಜನೆಗಳು ನಮ್ಮಲ್ಲಿವೆ. ರೆಕ್ಕೆ-ಪುಕ್ಕ ಬಲಿತ ಹಕ್ಕಿಗಳಾಗೋಣ, ಅಕ್ಕಿ ಕಾಳಿನ ಹಿಂದೆ ಹೋಗುವ ಹಕ್ಕಿಗಳಾಗುವುದು ಬೇಡ ಎಂದು ಮಾರ್ಮಿಕವಾಗಿ ನುಡಿದರು.
ಸರ್ವವ್ಯಾಪಿ ಬಜೆಟ್ ಇದು. ಚುನಾವಣೆಗೆ ಮೊದಲು ಹೇಳಿದ್ದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಹಣ ಮೀಸಲಿಟ್ಟಿದ್ದಾರೆ. ಇದು ಸಿಎಂ ಆರ್ಥಿಕ ಜ್ಞಾನಕ್ಕೆ ಹಿಡಿದ ಕನ್ನಡಿ. ಇಷ್ಟು ದೊಡ್ಡ ಮೊತ್ತದ ಗ್ಯಾರಂಟಿಗಳನ್ನು ಜಾರಿಗೊಳಿಸಲು ಕಾಂಗ್ರೆಸ್‌ನಿಂದಲ್ಲದೆ ಬೇರಾವ ಸರ್ಕಾರದಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ.-ಎಚ್.ಡಿ. ತಮ್ಮಯ್ಯ, ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಆನೆ ಸಮಸ್ಯೆಯಿಂದ 15 ವರ್ಷದಲ್ಲಿ 75ಕ್ಕೂ ಹೆಚ್ಚು ಜನ ಪ್ರಾಣ ತೆತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಬ್ಯಾರಿಕೇಡ್‌ಗೆ 120 ಕೋಟಿ ರೂ. ಬೇಕಿದೆ. ಎತ್ತಿನಹೊಳೆಯಿಂದ ನೀರು ತೆಗೆದುಕೊಂಡು ಹೊರಟಿದ್ದೀರಿ. ಅಲ್ಲಿನ ಗ್ರಾಮಗಳಿಗೇ ಮೂಲಸೌಕರ್ಯ, ಕುಡಿಯುವ ನೀರಿಲ್ಲದ ಸ್ಥಿತಿ ಇದೆ. ಕ್ಷೇತ್ರಕ್ಕೆ ಸೌಕರ್ಯ ಕಲ್ಪಿಸಿ ನೀರು ತೆಗೆದುಕೊಂಡು ಹೋಗಿ.
– ಸಿಮೆಂಟ್ ಮಂಜು, ಸಕಲೇಶಪುರ ಬಿಜೆಪಿ ಶಾಸಕ ಭೌಗೋಳಿಕವಾಗಿ ದೊಡ್ಡ ಕ್ಷೇತ್ರ. 6.50 ಲಕ್ಷ ಎಕರೆ ಇದೆ. ರಸ್ತೆಗಳು ಹಾಳಾಗಿವೆ. ಅನುದಾನ ಕಡಿಮೆ ಇದೆ. ಗುಡ್ಡಗಾಡು ಪ್ರದೇಶಗಳೂ ಇವೆ. 280 ದಾಖಲೆ ಗ್ರಾಮಗಳು, 88 ಹಾಡಿಗಳಿವೆ. ಮೂಲಸೌಕರ್ಯದ ಕೊರತೆ ಸಾಕಷ್ಟಿದೆ. 4.32 ಲಕ್ಷ ಎಕರೆ ಅರಣ್ಯ ಪ್ರದೇಶ ಇದೆ. ಚಿರತೆ ದಾಳಿಯಿಂದ ಮಗು ಅಸುನೀಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ವಹಿಸಬೇಕು.
– ಎಂ.ಆರ್. ಮಂಜುನಾಥ್, ಹನೂರು ಜೆಡಿಎಸ್ ಶಾಸಕ ಡಾ.ನಂಜುಡಪ್ಪ ವರದಿ ಪ್ರಕಾರ ನಮ್ಮ ತಾಲೂಕು ಹಿಂದುಳಿದಿದೆ. ಬೇಸಿಗೆ, ಕಡುಬೇಸಿಗೆ, ಚಳಿಗಾಲ ಬಿಟ್ಟರೆ ಮಳೆಗಾಲ ಇಲ್ಲವೇ ಇಲ್ಲ. ಹೊಸದಾಗಿ ಕೆರೆ ತುಂಬಿಸುವ ಯೋಜನೆಗಳನ್ನು ತೀವ್ರಗತಿಯಲ್ಲಿ ಕೈಗೊಳ್ಳಬೇಕು. ಶಾಲೆಗಳಿಗೆ ಮೂಲಸೌಕರ್ಯ ಕೊಡಿ. ಕೈಗಾರಿಕೆಗಳನ್ನು ಅರಂಭಿಸಿ, ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು.
-ಲತಾ ಮಲ್ಲಿಕಾರ್ಜುನ್, ಹರಪನಹಳ್ಳಿ ಪಕ್ಷೇತರ ಸದಸ್ಯೆ