Advertisement

ಸಾಮಾಜಿಕ ಮಾಧ್ಯಮ ಎಂಬ ಹೊಸ ರಕ್ಕಸ!

07:24 PM May 17, 2017 | Karthik A |

ನಾವು ಶಾಲೆ ಮತ್ತು ಕಾಲೇಜುಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದದ್ದು ಕೇವಲ ಚರ್ಚಾಕೂಟಗಳಲ್ಲಿ ಮಾತ್ರ. ನಾವೆಲ್ಲ ಆಗ ಹೆಚ್ಚು ತಲೆಕೆಡಿಸಿಕೊಂಡಿದ್ದು ಸಿನೆಮಾ, ಸಂಗೀತ ಮತ್ತು ಪರೀಕ್ಷೆಗಳ ಬಗ್ಗೆಯಷ್ಟೇ! ಗೆಳೆತನಗಳು ನಮ್ಮವೇ ಆದ ಕಾರಣಕ್ಕೆ ಸೃಷ್ಟಿಯಾಗುತ್ತಿದ್ದವು/ಮುರಿದುಬೀಳುತ್ತಿದ್ದವು. ನಮ್ಮ ಸ್ನೇಹದ ಮೇಲೆ ‘ರಾಜಕೀಯ ಅಭಿಪ್ರಾಯ’ಗಳೆಂದಿಗೂ ಸವಾರಿ ಮಾಡುತ್ತಿರಲಿಲ್ಲ.

Advertisement

1995ರ ಸಿನೆಮಾ ‘ಸ್ಪೀಸೀಸ್‌’ನಲ್ಲಿ ವಿಜ್ಞಾನಿಗಳು ಸಂಶೋಧನೆಯ ಮೂಲಕ ಜೀವಿಯೊಂದನ್ನು ಸೃಷ್ಟಿಸುತ್ತಾರೆ. ತಕ್ಷಣವೇ ಅವರಿಗೆ ತಾವು  ಇಡೀ ಮಾನವ ಕುಲವನ್ನೇ ಅಳಿಸಿಹಾಕಬಲ್ಲ ರಕ್ಕಸನನ್ನು ಸೃಷ್ಟಿಸಿದ್ದೇವೆ ಎನ್ನುವುದು ಮನವರಿಕೆಯಾಗುತ್ತದೆ. ಐತಿಹಾಸಿಕವಾಗಿ ನೋಡಿದಾಗ ಅಣುಬಾಂಬ್‌, ಪರಮಾಣು ಶಸ್ತ್ರಾಸ್ತ್ರಗಳು, ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ಕ್ಲೋನಿಂಗ್‌ನಿಂದ ಹಿಡಿದು ಇತ್ತೀಚಿನ ಗ್ರಾಹಕ ಕೇಂದ್ರಿತ ತಂತ್ರಜ್ಞಾನಗಳಲ್ಲಾಗುತ್ತಿರುವ ಅಭೂತಪೂರ್ವ ಬೆಳವಣಿಗೆಗಳವರೆಗೂ ವಿಜ್ಞಾನಿಗಳನ್ನು ಈ ರೀತಿಯ ‘ಮನವರಿಕೆ’ ಕಾಡುತ್ತಲೇ ಬಂದಿದೆ. ಈಗ ನಮ್ಮ ನಡುವಿರುವ ಹೊಸ ರಕ್ಕಸನೆಂದರೆ ಸೋಷಿಯಲ್‌ ಮೀಡಿಯಾ (ಸಾಮಾಜಿಕ ಮಾಧ್ಯಮ) !

ನಾನು ಚಿಕ್ಕವನಿದ್ದಾಗ(80ರ ದಶಕದಲ್ಲಿ ಜನಿಸಿದ್ದು) ಗೆಳೆಯರೊಂದಿಗೆ ಮತ್ತು ಬಂಧುಗಳೊಂದಿಗೆ ಸಂಪರ್ಕದಲ್ಲಿರುವುದು ಬಹಳ ಕಷ್ಟದ ಕೆಲಸವಾಗಿತ್ತು. ಆ ಸಮಯದಲ್ಲಿ ಎಲ್ಲರ ಬಳಿಯೂ ಟೆಲಿಫೋನ್‌ ಇರಲಿಲ್ಲ, ಪತ್ರಗಳನ್ನು ಬರೆಯುವ ಆಸಕ್ತಿ ಎಲ್ಲರಿಗೂ ಇರಲಿಲ್ಲ, ಇನ್ನು ಆ ಕಾಲದಲ್ಲಿ ಮೇಲಿಂದ ಮೇಲೆ ಪ್ರಯಾಣ ಮಾಡಿ ಆಪ್ತರನ್ನು ಭೇಟಿಯಾಗುವಷ್ಟು ಪೂರಕವಾಗಿರಲಿಲ್ಲ ಆರ್ಥಿಕತೆ. ಆದರೆ ನಾವು ಭೇಟಿಯಾದಾಗಲೆಲ್ಲ, ಅಲ್ಲಿ ಸಂತಸವಿರುತ್ತಿತ್ತು, ನಮ್ಮ ನಡುವೆ ವಿಚಾರ ವಿನಿಮಯಗಳಾಗುತ್ತಿದ್ದವು. ಆಗ ನಮಗೆಲ್ಲ ಒಂದೇ ವಾಹಿನಿಗಳಿಂದ ಮಾಹಿತಿ ಸಿಗುತ್ತಿದ್ದ ಕಾರಣದಿಂದಲೋ ಏನೋ, ನಮ್ಮ ನಡುವಿನ ‘ಸಾಮಾಜಿಕ’ ಮತ್ತು ‘ರಾಜಕೀಯ’ ಚರ್ಚೆಗಳೂ ಏಕ ರೀತಿಯ ಅಭಿಪ್ರಾಯದಲ್ಲೇ ಇರುತ್ತಿದ್ದವು. ನನ್ನ ಅಪ್ಪ ಮತ್ತು ಅಂಕಲ್‌ಗ‌ಳು ದೇಶದ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದವರು. ಅವರ ನಡುವೆ ಯಾವಾಗಲೂ ಈ ವಿಚಾರದಲ್ಲಿ ದೀರ್ಘ‌ ಚರ್ಚೆಗಳು ನಡೆಯುತ್ತಿದ್ದವು. ಮಧ್ಯಾಹ್ನ ಊಟಕ್ಕೆ ಕುಳಿತಾಗ ಆರಂಭವಾಗುತ್ತಿದ್ದ ಅವರ ಮಾತು ರಾತ್ರಿಯ ಭೋಜನದವರೆಗೂ ಸಾಗುತ್ತಿತ್ತು. 

ನಾವು ಶಾಲೆ ಮತ್ತು ಕಾಲೇಜುಗಳಲ್ಲಿ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದದ್ದು ಕೇವಲ ಚರ್ಚಾಕೂಟಗಳಲ್ಲಿ ಮಾತ್ರ. ನಾವೆಲ್ಲ ಆಗ ಹೆಚ್ಚು ತಲೆಕೆಡಿಸಿಕೊಂಡಿದ್ದು ಸಿನೆಮಾ, ಸಂಗೀತ ಮತ್ತು ಪರೀಕ್ಷೆಗಳ ಬಗ್ಗೆಯಷ್ಟೇ! ಗೆಳೆತನಗಳು ನಮ್ಮವೇ ಆದ ಕಾರಣಕ್ಕೆ ಸೃಷ್ಟಿಯಾಗುತ್ತಿದ್ದವು/ಮುರಿದುಬೀಳುತ್ತಿದ್ದವು. ನಮ್ಮ ಸ್ನೇಹದ ಮೇಲೆ ‘ರಾಜಕೀಯ ಅಭಿಪ್ರಾಯ’ಗಳೆಂದಿಗೂ ಸವಾರಿ ಮಾಡುತ್ತಿರಲಿಲ್ಲ. ಯಾವಾಗ ನಾವು ಉನ್ನತ ಶಿಕ್ಷಣ ಮತ್ತು ಕೆಲಸಕ್ಕಾಗಿ ಊರುಗಳನ್ನು ತೊರೆದೆವೋ, ಕೂಡಲೇ ನಾವು ಸ್ನೇಹಿತರೊಂದಿಗೆ ಟಚ್‌ ಕಳೆದುಕೊಳ್ಳಬೇಕಾಯಿತು. ಆಗ ಎದುರಾಯಿತು ನೋಡಿ ಮಾಹಿತಿ ಅಥವಾ ಡಿಜಿಟಲ್‌ ಯುಗ. ಮೊಬೈಲ್‌ ಫೋನ್‌ಗಳು, ಇಮೇಲ್‌, ಯಾಹೂ ಮೆಸೆಂಜರ್‌, ಆರ್ಕುಟ್‌ ಮತ್ತು ಫೇಸ್‌ಬುಕ್‌ನಂಥ ನವ ಮಾಧ್ಯಮಗಳ ಮೂಲಕ ಎಂದೋ ದೂರವಾಗಿದ್ದ ಗೆಳೆಯರನ್ನು ಹುಡುಕಿ ಬಹಳ ಎಕ್ಸೈಟ್‌ ಆದೆವು. ಈ ಹೊಸ ಮಾಧ್ಯಮಗಳು ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಹತ್ತಿರಕ್ಕೆ ತರುವಲ್ಲಿ ಸಹಾಯ ಮಾಡಿದವು. ನಮ್ಮ ಜೀವನದ ಪ್ರಮುಖ ವಿದ್ಯಮಾನಗಳನ್ನು ಫೋಟೋ ಮೂಲಕ ಹಂಚಿಕೊಕೊಳ್ಳುವುದರಲ್ಲೇ ಸೋಷಿಯಲ್‌ ಮೀಡಿಯಾಗಳ ಆರಂಭಿಕ ವರ್ಷಗಳು ವಿನಿಯೋಗವಾದವು. ಸ್ಕೈಪ್‌ ಅಥವಾ ಯಾಹೂ ಮೂಲಕ ನಾವು ನಿರಂತರವಾಗಿ ಮಾತನಾಡಲಾರಂಭಿಸಿದೆವು. 

ನಮ್ಮಲ್ಲಿ ಕೆಲವರಂತೂ ತಮ್ಮ ‘ಹಳೆಯ ಪ್ರೀತಿಯನ್ನು’ ಈ ಮಾಧ್ಯಮಗಳಲ್ಲಿ ಕಳ್ಳಬೆಕ್ಕಿನಂತೆ ಹಿಂಬಾಲಿಸಿ, ಆಕೆ/ಆತ ತಮಗೆ ಜೋತುಬಿದ್ದ ‘ದಡ್ಡಶಿಖಾಮಣಿ’ಯೊಂದಿಗೆ ಹೇಗೆ ಏಗುತ್ತಿದ್ದಾರೋ ಎಂದು ಆಶ್ಚರ್ಯಪಡುತ್ತಿದ್ದೆವು! ಇದು ನಿಜಕ್ಕೂ ಡಿಜಿಟಲ್‌ ಯುಗದ ಮಧುಚಂದ್ರ ಅವಧಿಯಾಗಿತ್ತು. 
ಆದರೆ ನಿಧಾನಕ್ಕೆ ನಾವು ಕಟ್ಟಿಕೊಂಡ ಲೋಕ ಕಳಚಿಬೀಳಲಾರಂಭಿಸಿತು. ಅಂತರ್ಜಾಲದಲ್ಲಿ ಸುದ್ದಿ ತಾಣಗಳು ವಿಪರೀತವೆನ್ನುವಷ್ಟರ ಮಟ್ಟಿಗೆ ಸೃಷ್ಟಿಯಾದವು ಮತ್ತು ನಮ್ಮ ನಡುವೆ ಬಿರುಕು ಉಂಟುಮಾಡಲಾರಂಭಿಸಿದವು. ಜನರು ತಾವು ಆನ್‌ಲೈನ್‌ನಲ್ಲಿ ನೋಡಿದ ಅಥವಾ ಓದಿದ ಸಂಗತಿಗಳ ಆಧಾರದಲ್ಲಿ ಒಂದು ಅಭಿಪ್ರಾಯವನ್ನು ರೂಪಿಸಿಕೊಂಡರು. ಈ ಅಭಿಪ್ರಾಯಗಳನ್ನು ಸ್ಕೈಪ್‌ನ ಗ್ರೂಪ್‌ ಕರೆಗಳಲ್ಲಿ ಹೇರಲಾರಂಭಿಸಿದರು. ಕ್ರಿಕೆಟ್‌ ತಂಡದ ಸಂಯೋಜನೆಯಿಂದ ಹಿಡಿದು, ಶಾರೂಖ್‌ ಖಾನ್‌ ಮತ್ತು ರಾಜಕೀಯದವರೆಗೆ.. ಒಟ್ಟಲ್ಲಿ ಎಲ್ಲಾ ವಿಷಯಗಳ ಬಗ್ಗೆಯೂ ತಮ್ಮದೊಂದು ಅಭಿಪ್ರಾಯ ಇರಲೇಬೇಕೆಂದು ಭಾವಿಸಿದರು. ಆಗ ನಾವೆಲ್ಲ ಪರಸ್ಪರ ದೂರವಾಗಲಾರಂಭಿಸಿದೆವು. ಯಾವ ಫೇಸ್‌ಬುಕ್‌ನಲ್ಲಿ ನಾವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೆವೋ, ನಮ್ಮ ಜೀವನದ ಹೊಸ ಆರಂಭಗಳ ಬಗ್ಗೆ ವಾರ್ತೆ ಬಿತ್ತರಿಸುತ್ತಿದ್ದೆವೋ, ಅದೇ ಫೇಸ್‌ಬುಕ್‌ ನಮ್ಮ ಅಭಿಪ್ರಾಯಗಳನ್ನು ಹೇರುವ ವೇದಿಕೆಯಾಗಿ ಬದಲಾಯಿತು.

Advertisement

ಈ ಸಣ್ಣ ಬದಲಾವಣೆಗೆ ದೊಡ್ಡ ತಿರುವು ನೀಡಿದ್ದು 2009 ಮತ್ತು 2014ರ ಚುನಾವಣೆಗಳು. ಪ್ರತಿಯೊಂದು ಆನ್‌ಲೈನ್‌ ವೇದಿಕೆಯಲ್ಲೂ ಕೋಲಾಹಲ ಸೃಷ್ಟಿಯಾಯಿತು. ಇದರಲ್ಲಿ ಅವಕಾಶವನ್ನು ಕಂಡ ಮಾಧ್ಯಮಮನೆಗಳು ಮತ್ತು ರಾಜಕೀಯ ಪಕ್ಷಗಳು, ತಮ್ಮ ಪ್ರೊಪಗಾಂಡಾ ಹರಡಲು ಈ ಹೊಸ ತಂತ್ರಜ್ಞಾನವನ್ನು ಬಳಸಲಾರಂಭಿಸಿದವು. ಅಕಟಕಟಾ, ಆರಂಭವಾಯಿತು ನೋಡಿ! ಯಾರೊಬ್ಬರ ವಿರುದ್ಧವೂ ಒಂದೇ ಒಂದು ಕಟು ಶಬ್ದ ಬಳಸುವುದಿಲ್ಲ ಎಂಬಂತಿದ್ದ ಆಂಕಲ್‌, ವಾಟ್ಸಾಪ್‌ನಲ್ಲಿ ಸುದೀರ್ಘ‌ ದ್ವೇಷಮಯ ಸಂದೇಶಗಳನ್ನು ಫಾರ್ವರ್ಡ್‌ ಮಾಡಲಾರಂಭಿಸಿದರು. ವಾಟ್ಸಾಪ್‌, ಫೇಸ್‌ಬುಕ್‌, ಸ್ಕೈಪ್‌ನಲ್ಲಿನ ಗೆಳೆಯರ ಗುಂಪುಗಳು ಪರಸ್ಪರ ಹೊಡೆದಾಡುವ ವೇದಿಕೆಗಳಾಗಿ ಬದಲಾದವು. 

ಇದೆಲ್ಲ ಒಂದು ರೀತಿಯಲ್ಲಿ ಸೈನ್ಸ್‌ಫಿಕ್ಷನ್‌ ಸಿನೆಮಾದಲ್ಲಿನ ದ್ವಿತೀಯಾರ್ಧದಲ್ಲಿ ಹೇಗೆ ರಕ್ಕಸ ಜೀವಿಗಳು ಇಡೀ ಜಗತ್ತನ್ನೇ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುತ್ತವೋ, ಹಾಗೆಯೇ ಕಾಣಿಸಲಾರಂಭಿಸಿತು. ಇಂಥ ರಕ್ಕಸವಾಗಿ ಬದಲಾದ ಸೋಷಿಯಲ್‌ ಮೀಡಿಯಾ ಎಲ್ಲಾ ದಿಕ್ಕಿನಲ್ಲೂ ವಿಷ ಕಾರುತ್ತಾ ಸಾಗಿತು. ಪ್ರತಿಯೊಬ್ಬರೂ ತಮ್ಮನ್ನು ತಾವು ಒಂದೋ ಎಡಪಂಥೀಯರ ಸಾಲಿನಲ್ಲಿ, ಇಲ್ಲವೇ ಬಲಪಂಥೀಯರ ಸಾಲಿನಲ್ಲಿ ಗರ್ವದಿಂದ ಗುರುತಿಸಿಕೊಳ್ಳಲಾರಂಭಿಸಿದರು. ಸ್ನೇಹಿತರೊಂದಿಗೆ ಕಳೆದ ಅದ್ಭುತ ಕ್ಷಣಗಳನ್ನೆಲ್ಲ ಮರೆತು, ಪರಸ್ಪರರ ನಿಂದನೆಗಿಳಿದರು, ಅನ್‌ಫ್ರೆಂಡ್‌ ಮಾಡಿದರು. ನಮಗೆಲ್ಲ ಗೆಳೆಯರು ಮತ್ತು ಕುಟುಂಬಕ್ಕಿಂತ ಶಶಿ ಥರೂರ್‌, ಅರ್ನಬ್‌ ಗೋಸ್ವಾಮಿ, ನರೇಂದ್ರ ಮೋದಿ, ಅರವಿಂದ್‌ ಕೇಜ್ರಿ ವಾಲ್‌, ಯಡಿಯೂರಪ್ಪ, ಸಿದ್ದರಾಮಯ್ಯ ಹೆಚ್ಚು ಆಪ್ತರಾದರು!

ಅಲ್ಪಸಂಖ್ಯಾತರ ವಿರುದ್ಧ ಕಟು ಮಾತನಾಡುವುದಕ್ಕೂ ಮುನ್ನ, ತಮ್ಮ ಸ್ನೇಹಿತರಲ್ಲೂ ಅಲ್ಪಸಂಖ್ಯಾತರಿದ್ದಾರೆ ಎನ್ನುವುದನ್ನು ಜನ ಯೋಚಿಸಲೇ ಇಲ್ಲ. ತಮ್ಮನ್ನು ತಾವೇ ‘ಸರ್ವೋತ್ತಮ’ ಸ್ಥಾನದಲ್ಲಿ ಕುಳ್ಳಿರಿಸಿಕೊಂಡ ಪ್ರಗತಿಪರರು ತಮ್ಮ ಗೆಳೆಯರ ಬುದ್ಧಿಮತ್ತೆ ಮತ್ತು ಶಿಕ್ಷಣವನ್ನು ಪ್ರಶ್ನಿಸಲಾರಂಭಿಸಿದರು. ಇದೇ ಸಮಯಕ್ಕಾಗಿ ಕಾದು ಕುಳಿತಿತ್ತೇನೋ ಎಂಬಂತೆ ಅಂತರ್ಜಾಲಕ್ಕೆ ಪ್ರವೇಶಿಸಿದ ಹೊಸ ತಲೆಮಾರೂ ಈ ಅವನತಿಯ ಕಥೆಯನ್ನು ಮುಂದುವರಿಸುತ್ತಾ ಸಾಗುತ್ತಿದೆ. ಹಲವಾರು ನಂಟುಗಳನ್ನು ಕಡಿದುಕೊಂಡ ನಂತರವೇ ನನಗೆ ಈ ತಂತ್ರಜ್ಞಾನವು ನನ್ನ ಜೀವನದಲ್ಲಿ ಅತಿ ಋಣಾತ್ಮಕ ಪಾತ್ರ ನಿರ್ವಹಿಸುತ್ತಿದೆ ಎನ್ನುವುದು ಅರ್ಥವಾಯಿತು. ಬಳಕೆದಾರನಿಗೆ ಏನು ಬೇಕೋ ಅದನ್ನು ಪೂರೈಸುವ ವ್ಯವಸ್ಥೆಗೆ ‘ಪರ್ಸನಲೈಸೇಷನ್‌(ವೈಯಕ್ತೀಕರಣ)’ ಎಂಬ ತಾಂತ್ರಿಕ ಹೆಸರಿದೆ. ಈ ಪರಿಕಲ್ಪನೆ ಹುಟ್ಟಿಕೊಂಡಾಗ ಇದನ್ನು ವರದಾನವೆಂದೇ ಭಾವಿಸಲಾಗಿತ್ತೇನೋ? ಆದರೆ ಅದು ಶಾಪವಾಗಿ ಬದಲಾಯಿತು. ನಮ್ಮನ್ನೆಲ್ಲ ಪರಸ್ಪರರಿಂದ ದೂರ ಮಾಡಿತು. ಈಗ ನಾವು ನಮ್ಮ ಅಭಿಪ್ರಾಯಗಳಿಗೆ ಪೂರಕವಾದದ್ದನ್ನೇ ಸೇವಿಸುತ್ತಿದ್ದೇವೆ. ನಮ್ಮ ನಿಲುವಿಗೆ ಭಿನ್ನವಾಗಿರುವುದನ್ನು ನಿರಾಕರಿಸುತ್ತಾ, ನಮಗೇನು ಬೇಕೋ ಅದನ್ನಷ್ಟೇ ನೋಡುತ್ತೇವೆ, ಓದುತ್ತೇವೆ. ಇಷ್ಟೇ ಅಲ್ಲ, ತಂತ್ರಜ್ಞಾನದ ‘ಪರ್ಸನಲ್‌’ ಸಲಹೆಯ ಆಧಾರದಲ್ಲೇ ಗೆಳೆಯರನ್ನು ಮಾಡಿಕೊಳ್ಳುತ್ತಿದ್ದೇವೆ. ನಮಗರಿವಿಲ್ಲದಂತೆಯೇ ಇದೆಲ್ಲ, ನಾವು ನೋಡುತ್ತಾ ಬೆಳೆದ ‘ಬಹುತ್ವ’ದ ವಿರುದ್ಧಾರ್ಥಕವಾಗಿಬಿಟ್ಟಿದೆ.

ನಾನೀಗ ಅಂತರ್ಜಾಲದ ಮೂಲಕ ಪ್ರಭಾವಕ್ಕೊಳಗಾಗದೇ ಶಾಂತವಾಗಿರಲು ನಿರ್ಧರಿಸಿದ್ದೇನೆ ಮತ್ತು ನನ್ನ ಜೀವನದಲ್ಲಿನ ಸಂಬಂಧಗಳು ಹಾಗೂ ಗೆಳೆತನಗಳನ್ನು ಉಳಿಸಿಕೊಳ್ಳುವತ್ತ ಪ್ರಯತ್ನಿಸಲು ತೀರ್ಮಾನಿಸಿದ್ದೇನೆ. ಸೋಷಿಯಲ್‌ ಮೀಡಿಯಾದ ವಿಷಮಯ ಪ್ರಭಾವದಿಂದ ಮತ್ತು ಮೈ ತುಂಬಾ ಅನ್ಯರೆಡೆಗೆ ‘ದ್ವೇಷ ತುಂಬಿಕೊಂಡ’ ವ್ಯಕ್ತಿಯಾಗುವುದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ನಾವೆಲ್ಲರೂ ಯೋಚಿಸಲೇಬೇಕಾದ ಸಮಯವಿದು.

– ಬಸವ್‌ ಬಿರಾದಾರ್‌ (ಲೇಖಕರು ನಾಟಕ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕರು)

Advertisement

Udayavani is now on Telegram. Click here to join our channel and stay updated with the latest news.

Next