Advertisement

New Criminal Law: ಶಿಕ್ಷೆ ಪ್ರಮಾಣ 7 ವರ್ಷದಿಂದ 5ಕ್ಕಿಳಿಸಲು ಶಿಫಾರಸು

09:05 PM Nov 12, 2023 | Team Udayavani |

ನವದೆಹಲಿ: ಪ್ರಸ್ತಾವಿತ ಹೊಸ ಕ್ರಿಮಿನಲ್‌ ಕಾನೂನಿನಲ್ಲಿ “ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವ ಪ್ರಕರಣಗಳಿಗೆ’ 7 ವರ್ಷ ಕಾರಾಗೃಹ ವಾಸದ ಶಿಕ್ಷೆ ವಿಧಿಸಿರುವುದು ಸಮಂಜಸವಲ್ಲ ಎಂದು ಹೇಳಿರುವ ಸಂಸದೀಯ ಸಮಿತಿ, ಈ ಶಿಕ್ಷೆಯನ್ನು 5 ವರ್ಷಗಳಿಗೆ ಇಳಿಸಬೇಕು ಎಂದು ಸಲಹೆ ನೀಡಿದೆ.

Advertisement

ವೇಗದ ಚಾಲನೆ ಅಥವಾ ನಿರ್ಲಕ್ಷ್ಯ ಚಾಲನೆ ಮಾಡಿ ವ್ಯಕ್ತಿಯ ಸಾವಿಗೆ ಕಾರಣನಾಗುವ ಚಾಲಕನು, ಆ ಸ್ಥಳದಿಂದ ಓಡಿ ಹೋದರೆ ಅಥವಾ ಘಟನೆ ಬಗ್ಗೆ ಪೊಲೀಸರಿಗಾಗಲೀ, ಮ್ಯಾಜಿಸ್ಟ್ರೇಟ್‌ಗಾಗಲೀ ಮಾಹಿತಿ ನೀಡದೇ ಇದ್ದರೆ ಅಂಥವರಿಗೆ 10 ವರ್ಷ ಜೈಲು ಶಿಕ್ಷೆಯಾಗಬೇಕು ಎಂದು ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌)ಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪವನ್ನೂ ಉಳಿಸಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆಯೂ ಸಮಾಲೋಚನೆ ನಡೆಯಬೇಕು ಎಂದೂ ಬಿಜೆಪಿ ಸಂಸದ ಬೃಜ್‌ಲಾಲ್‌ ನೇತೃತ್ವದ ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್‌ 304ಎ ಅನ್ವಯ ಇಂಥ ಶಿಕ್ಷೆಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣಕ್ಕೆ ಹೋಲಿಸಿದರೆ ಹೊಸ ಕಾನೂನಿನಲ್ಲಿ ಪ್ರಸ್ತಾಪಿಸಲಾದ ಶಿಕ್ಷೆಯ ಪ್ರಮಾಣವು ಅಧಿಕವಾಗಿದೆ. ಹೀಗಾಗಿ, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವಂಥ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣವನ್ನು 7ರ ಬದಲಿಗೆ 5ಕ್ಕೆ ಇಳಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಆ.11ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬ ಮೂರು ವಿಧೇಯಕಗಳನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ವಿಧೇಯಕಗಳ ಕುರಿತು ಪರಿಶೀಲನೆ ನಡೆಸಿರುವ ಸಂಸದೀಯ ಸಮಿತಿಯು ಶುಕ್ರವಾರ ರಾಜ್ಯಸಭೆಗೆ ತನ್ನ ವರದಿಯನ್ನು ಸಲ್ಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next