Advertisement
ಇವತ್ತಿಂದ ನಾನು ಬದಲಾಗಬೇಕು, ದಿನಾ 5 ಗಂಟೆಗೆ ಎದ್ದು ಜಾಗಿಂಗ್‌ಗೆ ಹೋಗ್ಬೇಕು, ಫೇಸ್‌ಬುಕ್-ವಾಟ್ಸಾಪಿನಲ್ಲಿ ಹೆಚ್ಚು ಕಾಲ ಕಳೀಬಾರ್ಧು, ಚಹಾ ಕುಡಿಯೋದು ಕಡಿಮೆ ಮಾಡ್ಬೇಕು, ಫ್ರೆಂಡ್ಸ್ ಜೊತೆ ಸುತ್ತಾಟ ಕಮ್ಮಿ ಮಾಡ್ಬೇಕು ಇತ್ಯಾದಿ ಇತ್ಯಾದಿ ಡೈಲಾಗ್‌ಗಳಿಗೆ ಮತ್ತೂಮ್ಮೆ ಜೀವ ಕಳೆ ಬಂದಿದೆ. ಕಳೆದ ಸಂವತ್ಸರದಲ್ಲಿ ನನಗೆ ಇಂಥ ಡೈಲಾಗ್‌ಗಳ ಹಾವಳಿ ಸ್ವಲ್ಪ ಜಾಸ್ತಿನೇ ಇತ್ತು. ಆದ್ರೆ ಹಿಂದಿರುಗಿ ನೋಡಿದ್ರೆ ಒಂದ್ ವರ್ಷ ಕಳೆಯಿತೇ ಹೊರತು ಹಳಸಲು ಡೈಲಾಗ್‌ಗಳು ನಾಲ್ಕೇ ದಿನದಲ್ಲಿ ತುಕ್ಕು ಹಿಡಿದು ಕರಗಿ ಹೋಗಿದ್ದವು. ಅಯ್ಯೊ! ಏನೇನೆಲ್ಲಾ ವಾಗ್ಧಾನ ತಗೊಂಡಿದ್ದಿಯಲ್ಲೋ? ಒಂದೂ ನೆರವೇರಿಸಿಲ್ಲವಲ್ಲೊ ಅಂತ ಯುಗಾದಿ ಮತ್ತೆ ಮತ್ತೆ ನೆನಪಿಸುತ್ತಿದೆ.
Related Articles
Advertisement
ಇದಕ್ಕೆಲ್ಲ ಕಾರಣ ಸಿಂಪಲ್, ಅದೇ ಮನಸ್ಸೆಂಬ ಮರ್ಕಟನ ಮಹಿಮೆ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಮನಸ್ಸು ನೀನು ನಾಳೆಯಿಂದ ಚೆೇಂಜ್ ಆಗು ಅಂದ್ರೆ ಅದು ಒಪ್ಪುತ್ತಾ? ಬೆಳಗ್ಗೆ ಐದು ಗಂಟೆಗೆ ಎದ್ದು ಜಾಗಿಂಗ್‌ಗೆ ಹೋಗು ಅಂದ್ರೆ ಅದು ಕೇಳುತ್ತಾ? ಊಹುಂ ಬೇಕಿದ್ರೆ ಇನ್ನೊಂದ್ ಅರ್ಧಗಂಟೆ ಹೆಚ್ಚು ನಿದ್ದೆ ಕೇಳುತ್ತೆ ಹೊರತು ಬೇಗ ಏಳ್ಳೋಕೆ ಸುತಾರಾಂ ಒಪ್ಪೋದಿಲ್ಲ. ಇನ್ನು ಮೊಬೈಲನ್ನು ಗಂಟೆಗಟ್ಟಲೆ ಕುಟ್ಟುತ್ತಿದ್ದವರಿಗೆ ಅದರ ಮೇಲೆ ನಿಯಂತ್ರಣ ಮಾಡೋಕು ಈ ಮನಸ್ಸೆಂಬ ಹಠಮಾರಿ ಬಿಡನು!
ಬದಲಾವಣೆ ಅಂದ್ರೇನು?ಹೊಸ ವರ್ಷ ಬಂತು, ನಾನು ಅದನ್ನ ಮಾಡ್ತೀನಿ, ಚೇಂಜ್ ಆಗ್ತಿàನಿ ಅಂತ ಸಿಕ್ಕಾಪಟ್ಟೆ ಬದಲಾವಣೆಗಳನ್ನು ನಮ್ಮ ಮೇಲೆ ಹೇರಿಕೊಳ್ಳೋದು ದೊಡ್ಡ ತಪ್ಪು. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಪರಿಣಾಮ ಬೀರುವುದು ಖಂಡಿತ. ಉದಾಹರಣೆಗೆ ಒಬ್ಬ ಕಂಠಮಟ್ಟ ಕುಡಿಯೋ ವ್ಯಕ್ತಿ ಏಕಾಏಕಿ ಕುಡಿಯೋದು ಬಿಟ್ರೆ ಸತ್ತೇ ಹೋದಾನು. ಅದಕ್ಕೆ ಬದಲಾಗಿ ತೆಗೆದುಕೊಳ್ಳುವ ಮದ್ಯದ ಪ್ರಮಾಣವನ್ನು ನಿಧಾನವಾಗಿ ಕಡಿಮೆಗೊಳಿಸಿ ಕೊನೆಗೆ ಶೂನ್ಯಕ್ಕೆ ತಂದು ನಿಲ್ಲಿಸುವುದೇ ಬದಲಾವಣೆಯ ಜಾಣತನ. ಆರೋಗ್ಯಕರ ಜೀವನ ಶೈಲಿಗೆ ವ್ಯಾಯಾಮ ಅತೀ ಅಗತ್ಯ. ಹಾಗಂತ ದಿನಕ್ಕೆ ನಾಲ್ಕು ಹೆಜ್ಜೆ ಸವೆಸದವನು ಏಕಾಏಕಿ ನಾಲ್ಕು ಗಂಟೆಗೆ ಎದ್ದು ಜಾಗಿಂಗ್ ಮಾಡೋದು ಖಂಡಿತಾ ಸರಿಯಲ್ಲ. ಅಂತಹ ಕಟ್ಟುನಿಟ್ಟಿನ ದೇಹದಂಡನೆ ನಿಮ್ಮ ದೇಹಕ್ಕೆ ಒಗ್ಗಿಕೊಳ್ಳಲು ಸಾಧ್ಯವೇ ಇಲ್ಲ. ನಿಧಾನವಾಗಿ ಆರಂಭಿಸಿ 15 ನಿಮಿಷ, 30 ನಿಮಿಷ, 45 ನಿಮಿಷ ಹೀಗೆ ದಿನದಿಂದ ದಿನಕ್ಕೆ ಅಥವಾ ವಾರದಿಂದ ವಾರಕ್ಕೆ ಸಮಯವನ್ನು ಹೆಚ್ಚಿಸಿಕೊಳ್ಳಿ. ವ್ಯಾಯಾಮ ದೇಹವನ್ನು ಸುಸ್ಥಿತಿಯಲ್ಲಿಡಲೋ ಅಥವಾ ಒಲಿಂಪಿಕ್ಸ್‌ಗೆ ತೆರಳಿ ಚಿನ್ನವನ್ನು ಗೆದ್ದು ತರಲೋ ಎಂಬ ಒಂದು ಸಣ್ಣ ಅಂಶ ನಮ್ಮ ತಲೆಯಲ್ಲಿರಬೇಕು. ಇನ್ನು ಅಂತರ್ಜಾಲವನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟರೆ ನಾನು ಗೆದ್ದಂತೆ ಸರಿ ಎಂಬ ತಲೆಬುಡವಿಲ್ಲದ ಆಲೋಚನೆ ಕೈಬಿಡಬೇಕಾಗುತ್ತದೆ. ಅಂತರ್ಜಾಲದಿಂದ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಒಳ್ಳೆಯದರ ಉಪಯೋಗ ಪಡೆದುಕೊಳ್ಳಲು ಅಂತರ್ಜಾಲದ ಮೊರೆ ಹೋಗಿ. ಹೊಸ ವಿಷಯಗಳ ಹುಡುಕಾಟ, ಓದುವುದು, ಪತ್ರಿಕೆಗಳ ಮೇಲೆ ಕಣ್ಣಾಡಿಸಲು ಅಂತರ್ಜಾಲದ ಉಪಯೋಗ ಪಡೆದುಕೊಳ್ಳಿ. ಬೇಸರವೆನಿಸಿದರೆ ಫೇಸ್‌ಬುಕ್, ವಾಟ್ಸಾಪ್‌ಗ್ಳಲ್ಲಿ ಗೆಳೆಯರೊಂದಿಗೆ ಚಾಟ್ ಮಾಡಿ. ಹೊಸ ವಿಷಯಗಳನ್ನು ಶೇರ್ ಮಾಡಿಕೊಳ್ಳಿ , ಆಟ ಆಡಿ ಎಂಜಾಯ್ ಮಾಡಿಕೊಳ್ಳಿ. ಅಂತರ್ಜಾಲದ ವಿಪರೀತ ಬಳಕೆ ಮಾಡುತ್ತಿದ್ದರೆ, ಅದು ನಿಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದರೆ ಗಮನ ಹರಿಸಿ ಕಡಿಮೆಗೊಳಿಸಿ. ಅದು ಬಿಟ್ಟು ಅಂತರ್ಜಾಲದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡುತ್ತೇನೆ ಅಂದರೆ ಹುಚ್ಚು ಹಿಡಿಯೋದು ಗ್ಯಾರಂಟಿ ! ಬದಲಾಣೆಗೊಂದು ಪ್ರತ್ಯೇಕ ದಿನ ಬೇಕೆ?
ಕೆಲವರದೊಂದು ವಿಚಿತ್ರ ಆಚರಣೆ. ಹೊಸವರ್ಷಕ್ಕೊ, ದೀಪಾವಳಿಗೋ ಅಥವಾ ಇನ್ನಿತರ ಶುಭಸಮಾರಂಭಕ್ಕೋ ಬದಲಾವಣೆಯ ಅಮಲು ತಲೆಗೆ ಏರಿ ಬಿಡುತ್ತೆ. ನಿಜಕ್ಕೂ ಬದಲಾವಣೆಗೆ ಇಂಥದ್ದೇ ಒಂದು ದಿನ ಅಂತ ನಿಗದಿ ಮಾಡುವ ಜರೂರತ್ತು ಏನಿದೆ? ಒಂದು ಕೆಟ್ಟ ಹವ್ಯಾಸ ನಿಮ್ಮ ಜೀವನವನ್ನು ಋಣಾತ್ಮಕ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದರೆ ಕೂಡಲೇ ಅಂತಹ ಹವ್ಯಾಸವನ್ನು ತೊರೆಯಲು ನಿರ್ಧರಿಸಬೇಕು.
ಹೊಸ ಸಂವತ್ಸರ ಎಲ್ಲರಿಗೂ ಹೊಸತು ತರಲಿ. – ಅಕ್ಷಿತ್ ದೇವಾಡಿಗ ಎಲ್ಲೂರು