Advertisement

ದಿವಾನರ ಛಾಯಾಗ್ರಹಣದ ಹೊಸ ಛಾಪು

09:55 AM Nov 30, 2019 | mahesh |

“ಇಲ್ಲೆ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ…’ ಇದು “ಚಿರು’ ಚಿತ್ರದ ಹಾಡು. ಈ ಹಾಡು ಇಂದಿಗೂ ಎಲ್ಲರ ಬಾಯಲ್ಲೂ ಗುನುಗುವಂತಿದೆ ಅಂದರೆ, ಅದಕ್ಕೆ ಗಿರಿಧರ್‌ ದಿವಾನ್‌ ಸಂಯೋಜಿಸಿದ ರಾಗ. ಹೌದು, ಗಿರಿಧರ್‌ ದಿವಾನ್‌ ಈಗ ಬರೀ ಸಂಗೀತ ನಿರ್ದೇಶಕರಷ್ಟೇ ಅಲ್ಲ, ಅವರೊಬ್ಬ ಛಾಯಾಗ್ರಾಹಕರಾಗಿಯೂ ಮತ್ತು ಸಂಕಲನಕಾರರಾಗಿಯೂ ಸೈ ಎನಿಸಿಕೊಂಡಿದ್ದಾರೆ.

Advertisement

ಬಹಳಷ್ಟು ಜನರಿಗೆ ಗೊತ್ತಿಲ್ಲ. ಗಿರಿಧರ್‌ ದಿವಾನ್‌ ಅವರು ಕ್ಯಾಮೆರಾ ಕೈಚಳಕದಲ್ಲಿ ಎತ್ತಿದ ಕೈ. ತಮ್ಮ ಸಂಗೀತ ನಿರ್ದೇಶನದ ಜೊತೆಯಲ್ಲೇ ಅವರೀಗ ಛಾಯಾಗ್ರಾಹಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹರಿಪ್ರಿಯಾ ಅಭಿನಯದ “ಕನ್ನಡ್‌ ಗೊತ್ತಿಲ್ಲ’ ಸಿನಿಮಾ ಮೂಲಕ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಗಿರಿಧರ್‌ ದಿವಾನ್‌ ಅವರ ಕೈಚಳಕ ಎಲ್ಲರಿಗೂ ಮೆಚ್ಚುಗೆಯಾಗಿದೆ. ಆ ಚಿತ್ರಕ್ಕೆ ಬರೀ ಕ್ಯಾಮೆರಾ ಕೆಲಸ ಮಾತ್ರವಲ್ಲ, ಸಂಕಲನಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಛಾಯಾಗ್ರಾಹಕರಾಗಿ ತಮ್ಮ ಮೊದಲ ಚಿತ್ರದಲ್ಲೇ ಮೆಚ್ಚುಗೆ ಪಡೆದಿರುವ ಗಿರಿಧರ್‌ ದಿವಾನ್‌, ಇದೀಗ ಒಂದಷ್ಟು ಹೊಸ ಚಿತ್ರಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. “ಕನ್ನಡ್‌ ಗೊತ್ತಿಲ್ಲ’ ಸಿನಿಮಾದ ಕೆಲಸ ನೋಡಿದ ಅನೇಕರು, ಗಿರಿಧರ್‌ ದಿವಾನ್‌ ಅವರೊಂದಿಗೆ ಸಿನಿಮಾ ಮಾಡುವ ಮನಸು ಮಾಡಿದ್ದಾರೆ. ಇದೆಲ್ಲದರ ನಡುವೆಯೂ ಗಿರಿಧರ್‌ ಇಲ್ಲಿಯವರೆಗೆ ಸುಮಾರು 14 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ ಎಂಬುದು ಇನ್ನೊಂದು ವಿಶೇಷ.

ಸಂಗೀತ, ಸಂಕಲನ ಹಾಗು ಛಾಯಾಗ್ರಹಣ ಈ ಮೂರು ವಿಭಾಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ಸುಮ್ಮನೆ ಈ ವಿಭಾಗವನ್ನು ಆಯ್ಕೆ ಮಾಡಿಕೊಂಡಿಲ್ಲ. ಮೂಲತಃ ಸಂಗೀತ ಕುಟುಂಬದಿಂದ ಬಂದ ಅವರಿಗೆ ಸಂಗೀತ ಸುಲಭವಾಗಿದೆ. ಸಿನಿಮಾಟೋಗ್ರಫಿಯಲ್ಲಿ ಪದವಿ ಪಡೆದುಕೊಂಡು ಕ್ಯಾಮೆರಾ ಹಿಡಿದಿದ್ದಾರೆ. ಅತ್ತ ಎಡಿಟಿಂಗ್‌ ಕೆಲಸವನ್ನೂ ಅಷ್ಟೇ ನೀಟ್‌ ಆಗಿ ಕಲಿತು ಬಂದಿದ್ದಾರೆ. ಅವರಿಗೆ ಸಂಗೀತಕ್ಕಿಂತಲೂ ಛಾಯಾಗ್ರಹಣದಲ್ಲಿ ಬಲವಾಗಿ ಬೇರೂರುವ ಭರವಸೆ ಇದೆ. ಆ ಕುರಿತು ಹೇಳುವ ಅವರು, “ನನ್ನ ಸಂಗೀತದ ಕೆಲಸಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ನಾನು ಈ ಮೂರು ವಿಭಾಗವನ್ನೂ ಪ್ರೀತಿಸುತ್ತೇನೆ. ನಾವು ಮಾಡುವ ಕೆಲಸ ಮೊದಲು ನಮಗೆ ತೃಪ್ತಿ ಕೊಡಬೇಕು. ಆಮೇಲೆ ನೋಡುಗರಿಗೂ ಅದು ಇಷ್ಟವಾಗುವಂತೆ ಕೆಲಸ ಮಾಡಬೇಕು’ ಎಂಬುದು ಅವರ ಮಾತು.

ಅದೇನೆ ಇರಲಿ, ಇಲ್ಲಿಯವರೆಗೂ ಅವರು ಸುಮಾರು 500 ಕ್ಕೂ ಹೆಚ್ಚು ನಟ,ನಟಿಯರ ಫೋಟೋಶೂಟ್‌ ಮಾಡಿದ್ದಾರೆ. 200 ಕ್ಕೂ ಹೆಚ್ಚು ಜಾಹಿರಾತುಗಳಿಗೂ ಕ್ಯಾಮೆರಾ ಹಿಡಿದ ಅನುಭವವೂ ಇದೆ.40 ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಶೀರ್ಷಿಕೆ ಸಂಗೀತ ನೀಡಿದ್ದಾರೆ. 60 ಕ್ಕೂ ಹೆಚ್ಚು ಆಡಿಯೋ ಆಲ್ಬಂ ಕೂಡ ಮಾಡಿದ್ದಾರೆ. ಸದ್ಯ ತಮ್ಮದೇ ಒಂದು ರೆಕಾರ್ಡಿಂಗ್‌ ಸ್ಟುಡಿಯೋ, ಎಡಿಟಿಂಗ್‌ ಸ್ಟುಡಿಯೋ ಇಟ್ಟುಕೊಂಡಿರುವ ಗಿರಿಧರ್‌ ಹೊಸಬಗೆಯ ಚಿತ್ರಗಳಲ್ಲಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಚಾಲೆಂಜ್‌ ಎನಿಸುವ ಸ್ಕ್ರಿಪ್ಟ್ ಜೊತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next