ಕೊಲಂಬೊ: ‘ಇದು ಶ್ರೀಲಂಕಾ ಕ್ರಿಕೆಟಿನ ನೂತನ ಆರಂಭ’ ಎಂದು ನಾಯಕ ದಿಮುತ್ ಕರುಣರತ್ನೆ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಸಾಮಾನ್ಯ ಆಟವಾಡಿದ ಬಳಿಕ ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಯಲ್ಲಿ ಲಂಕಾ ಕ್ಲೀನ್‌ಸ್ವೀಪ್ ಸಾಧಿಸಿ ಅಸಾಮಾನ್ಯ ಪ್ರದರ್ಶನ ನೀಡಿತ್ತು. 44 ತಿಂಗಳ ಬಳಿಕ ತವರಲ್ಲಿ ಮೊದಲ ಸರಣಿ ಗೆದ್ದ ಹೆಗ್ಗಳಿಕೆ ಲಂಕಾದ್ದಾಗಿದೆ.
‘ವಿಶ್ವಕಪ್ ಬಳಿಕ ನಾವು ಹೊಸ ಅಭಿಯಾನ ಆರಂಭಿಸಿದ್ದೇವೆ. ಈ ಬಾರಿ ನಮಗೆ ಹೊಸ ಪ್ರತಿಭೆಗಳು ಲಭಿಸಿವೆ. ಮುಂಬರುವ ತವರಿನ ಹಾಗೂ ವಿದೇಶಿ ಸರಣಿಗಳಲ್ಲಿ ಇವರೆಲ್ಲರಿಗೂ ಅವಕಾಶ ನೀಡಿ 2023ರ ವಿಶ್ವಕಪ್ ವೇಳೆ 15 ಮಂದಿ ಆಟಗಾರರ ಸಶಕ್ತ ತಂಡವನ್ನು ಕಟ್ಟಬೇಕಿದೆ’ ಎಂದು ಕರುಣರತ್ನೆ ಹೇಳಿದರು.
‘ನಾವು ಸುದೀರ್ಘ ಸಮಯದ ಬಳಿಕ ತವರಿನ ಸರಣಿಯನ್ನು ಜಯಿಸಿದ್ದೇವೆ. ಹೀಗಾಗಿ ದೊಡ್ಡ ಮಟ್ಟದಲ್ಲೇ ಸಂಭ್ರಮಾಚರಣೆ ನಡೆಯಬೇಕಿದೆ. ಇನ್ನು ನ್ಯೂಜಿಲ್ಯಾಂಡ್ ಎದುರಿನ ಕಠಿನ ಸರಣಿ ಎದುರಾಗಲಿದೆ. ಇದಕ್ಕೆ ಹೆಚ್ಚಿನ ತಯಾರಿ ಮಾಡಬೇಕು’ ಎಂದರು.
ಈ ಪಂದ್ಯವನ್ನು ಇತ್ತೀಚೆಗಷ್ಟೇ ವಿದಾಯ ಹೇಳಿದ ಲಂಕಾ ಬೌಲರ್ ನುವಾನ್ ಕುಲಶೇಖರ ಅವರಿಗೆ ಅರ್ಪಿಸಲಾಗಿತ್ತು.
ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಭಯೋತ್ಪಾದ ದಾಳಿ ಬಳಿಕ ನಡೆದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾ ಗಿತ್ತು. ಇಲ್ಲಿ ಯಾವುದೇ ಭೀತಿ ಇಲ್ಲದೆ ಆಡಬಹುದು ಎಂಬುದಕ್ಕೆ ಈ ಸರಣಿ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಲಂಕಾ ನಾಯಕ ದಿಮುತ್ ಕರುಣರತ್ನೆ ಈ ಸಂಗತಿಯನ್ನೂ ಪ್ರಸ್ತಾವಿಸಿದರು.