ಇನ್ನು ಸರಿಯಾಗಿ ನಾಲ್ಕು ವರ್ಷದ ಹೊತ್ತಿಗೆ (2023) ಎಲ್ಲರ ಕೈಯಲ್ಲಿ ಮೊಬೈಲ್ ಇರಬೇಕು, ಅದರಲ್ಲಿ ಇಂಟರ್‌ನೆಟ್ ಪದ್ಮಾಸನ ಹಾಕಿ ಕುಳಿತಿರಬೇಕು ಅನ್ನೋದು ದೊಡ್ಡ ದೊಡ್ಡ ಕಂಪೆನಿಗಳ ಲೆಕ್ಕಾಚಾರ. ಪ್ರಸ್ತುತ ಭಾರತದಲ್ಲಿ 560ಮಿಲಿಯನ್ ಮಂದಿ ಅಂತರ್ಜಾಲ ಚಂದಾದಾರರಾಗಿದ್ದಾರಂತೆ. ಎಲ್ಲಾ ಅಂತರ್ಜಾಲ ಕಂಪೆನಿಗಳು 2023ರ ಒಳಗೆ ಇದರಲ್ಲಿ ಶೇ. 50ರಷ್ಟು ಏರಿಸುವ ಗುರಿಯನ್ನು ಇಟ್ಟುಕೊಂಡಿವೆ.
ಹೆಚ್ಚು ಆದಾಯ ಇರುವ ರಾಜ್ಯಗಳು ಅಂದರೆ ಕರ್ನಾಟಕ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ ಪಂಜಾಬ್, ತಮಿಳುನಾಡು ಮುಂತಾದ ಕಡೆ ನೂರರಲ್ಲಿ 54 ಮಂದಿಯ ಬಳಿ ಮಾತ್ರ ಅಂತರ್ಜಾಲ ಸಂಪರ್ಕ ಇದೆಯಂತೆ.
ಮಧ್ಯಮ ಆದಾಯ ಇರುವ ಆಂಧ್ರಪ್ರದೇಶ, ಚತ್ತೀಸ್‌ಘಡ, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಶ್ಚಿಮ ಬಂಗಾಳಗಳಲ್ಲಿ ಶೇ.41ರಷ್ಟು ಮಂದಿ ಅಂತರ್ಜಾಲ ಚಂದದಾರರಾಗಿದ್ದಾರೆ. ಕಡಿಮೆ ಆದಾಯ ಹೊಂದಿದ ಜನರಿಂದಲೇ ತುಂಬಿರುವ ಅಸ್ಸಾಂ, ಅರುಣಾಚಲಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ, ತ್ರಿಪುರ ಮುಂತಾದ ರಾಜ್ಯಗಳಲ್ಲಿ ನೂರಕ್ಕೆ 28 ಜನ ಮಾತ್ರ ಅಂತರ್ಜಾಲ ಬಳಕೆ ಮಾಡುತ್ತಿದ್ದಾರಂತೆ.
ಇಡೀ ದೇಶದ ಲೆಕ್ಕ ತೆಗೆದುಕೊಂಡರೆ ಪ್ರತಿ ರಾಜ್ಯ ಸರಾಸರಿ ಅಂತರ್ಜಾಲದ ಸಂಪರ್ಕದ ಬೆಳವಣಿಗೆ ವರ್ಷಕ್ಕೆ ಶೇ.15ರಷ್ಟು ಮಾತ್ರ ಇದೆ. ನಾಲ್ಕು ವರ್ಷದ ಅವಧಿಯಲ್ಲಿ (ಶೇ. 26ರಷ್ಟು)ಪರವಾಗಿಲ್ಲ ಅನ್ನೋ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಅದು ಮಧ್ಯಪ್ರದೇಶದಲ್ಲಿ ಮಾತ್ರ.
ಈಗ ಎಲ್ಲವೂ ಡಿಜಿಟಲೀಕರಣವಾಗಿದೆ. ನೆಟ್ ಇಲ್ಲದೆ ಬದುಕಿಲ್ಲ ಅನ್ನೋ ಮಟ್ಟಿಗೆ ಬದುಕು ಬಂದು ನಿಂತಿದೆ. ಈ ಅನಿವಾರ್ಯವನ್ನು ಮತ್ತಷ್ಟು ವಿಸ್ತರಿಸಿಕೊಂಡು ಲಾಭ ಮಾಡಿಕೊಳ್ಳ ಬೇಕೆಂಬುದು ಕಂಪೆನಿಗಳ ಲೆಕ್ಕಾಚಾರ. ಏನೇ ಹೇಳಿ, ಜಾಲ ನಮ್ಮದು ಬೀಳ್ಳೋರು ನೀವು-ಇದು ಕಂಪನಿಗಳ ತಂತ್ರ.