ಹಾಕಿಯಲ್ಲಿ ಭಾರತ ಮತ್ತೆ ಗತವೈಭವ ಗಳಿಸಬಹುದು, ಹಾಕಿ ಸ್ಟಿಕ್‌ಗಳು ಇನ್ನೊಮ್ಮೆ ಬಿರುಸಿನಿಂದ ಬೀಸಬಹುದು ಎಂಬ ಕನಸು ಮತ್ತೂಮ್ಮೆ ಕುಡಿಯೊಡೆದಿದೆ. ಹೀಗೊಂದು ಆಶೆ ಹುಟ್ಟಿಕೊಳ್ಳಲು ಕಾರಣವೂ ಇದೆ,
ಅದರಲ್ಲೊಂದು ಅರ್ಥವೂ ಇದೆ. 2021ರ ಟೋಕಿಯೊ ಒಲಿಂಪಿಕ್ಸ್ ಮುಗಿದ ಮೇಲೆ ಭಾರತ ಹಾಕಿ ತಂಡದಲ್ಲಿ ಒಂದು ಹೊಸ ಆಶಾಭಾವನೆ ಆರಂಭವಾಗಿದೆ. ಪುರುಷರ ಹಾಕಿ ತಂಡ ಅಲ್ಲಿ ಕಂಚಿನ ಪದಕ ಗೆದ್ದಿತ್ತು. ಮಹಿಳಾ ತಂಡ ಅಲ್ಲಿ ನಾಲ್ಕನೇ ಸ್ಥಾನಿಯಾಗಿತ್ತು.
ಮಹಿಳಾ ತಂಡ ಅದ್ಭುತವಾಗಿ ಆಡಿ ಕೊನೆಯ ನಿಮಿಷಗಳಲ್ಲಿ ಕಂಚು ತಪ್ಪಿಸಿಕೊಂಡಿತು. ಪುರುಷರ ಹಾಕಿ ತಂಡ ಇನ್ನೇನು ಸೋತೇ ಹೋಯಿತು ಎನ್ನುವಾಗ ಜರ್ಮನಿಯನ್ನು ಮಣಿಸಿತು! ಸೆಮಿಫೈನಲ್‌ನಲ್ಲಿ ಭಾರತ ತಂಡ ಬಹುತೇಕ ಗೆದ್ದೇ ಬಿಟ್ಟಿತ್ತು. ಕೊನೆಯ ನಿಮಿಷಗಳಲ್ಲಿ ಹಠಾತ್ ಒತ್ತಡವನ್ನು ನಿಭಾಯಿಸಲಾಗದೆ ಸೋತುಹೋಯಿತು. ಆ ಕಡೆಯ ಹತ್ತು ನಿಮಿಷಗಳನ್ನು ಹೊರತುಪಡಿಸಿದರೆ ಭಾರತೀಯರ ಆಟ ಅದ್ಭುತ. ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಜರ್ಮನಿಎದುರು ಭಾರತ ತಿರುಗಿಬಿದ್ದಿದ್ದು, 2021ರ ಮೂರು ಶ್ರೇಷ್ಠ ಪಂದ್ಯಗಳಲ್ಲೊಂದು ಎಂದು ಗುರುತಿಸಲ್ಪಟ್ಟಿದೆ.
ವಿಶೇಷವೆಂದರೆ ಒಲಿಂಪಿಕ್ಸ್ ಮುಗಿದ ಮೇಲೆ ಭಾರತೀಯ ಹಾಕಿ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ವಿಶ್ವಕಪ್‌ಗೆ ಮಾತ್ರ ಗಂಭೀರವಾಗಿಯೇ ಸಿದ್ಧತೆ ನಡೆಸಿದೆ. ಟೋಕಿಯೊದಲ್ಲಿ ಕಂಚು ಗೆಲ್ಲುವಾಗ ಮನ್‌ಪ್ರೀತ್ ಸಿಂಗ್ ನಾಯಕರಾಗಿದ್ದರು. ಈಗವರು ತಂಡದಲ್ಲಿದ್ದಾರೆ, ಚುಕ್ಕಾಣಿಯನ್ನು ರಕ್ಷಣ ಆಟಗಾರ ಹರ್ಮನ್‌ಪ್ರೀತ್‌ಗೆ ವಹಿಸಲಾಗಿದೆ. ತಂಡವೇನಾದರೂ ವಿಶ್ವಕಪ್ ಗೆದ್ದರೆ ಪ್ರತೀ ಆಟಗಾರರಿಗೆ ತಲಾ 1 ಕೋಟಿ ರೂ. ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ. ನಿರೀಕ್ಷೆಗಳು ಗರಿಗೆದರಿವೆ.
ಭಾರತ ಹಾಕಿ ತಂಡ ಗತವೈಭವ ಗಳಿಸಲು ಹಾಕಿ ಸಂಸ್ಥೆ, ಇನ್ನಿತರರು ಪ್ರಯತ್ನ ಹಾಕುತ್ತಲೇ ಇದ್ದಾರೆ. ಆದರೆ ಒಂದು ವಿಚಾರವನ್ನು ಎಲ್ಲರೂ ಮರೆತು ಬಿಟ್ಟಂತಿದೆ. ಯಾವುದೇ ಕ್ರೀಡೆ ಬೆಳೆಯಬೇಕಾದರೆ ಅದು ಎಲ್ಲಕಡೆ ಹಬ್ಬಿಕೊಳ್ಳಬೇಕು. ಆಗ ಹೊಸ, ವಿಭಿನ್ನ ಪ್ರತಿಭೆಗಳು ಆ ಕ್ರೀಡೆಗೆ ಹೆಚ್ಚಿನ ಮೌಲ್ಯವನ್ನು ತುಂಬುತ್ತಾರೆ. ಹಾಕಿಯ ಸಮಸ್ಯೆಯಿರುವುದೇ ಇಲ್ಲಿ. ಈ ತಂಡದಲ್ಲಿ ಪ್ರಸ್ತುತ ಕರ್ನಾಟಕದ ಒಬ್ಬನೇ ಒಬ್ಬ ಆಟಗಾರನಿಲ್ಲ. ಕೊಡಗು ಆಟಗಾರರು ಭಾರತ ತಂಡದಲ್ಲಿ ಸತತವಾಗಿ ಸ್ಥಾನ ಪಡೆದಿದ್ದರು. ಈಗ ಅಂತಹದ್ದೊಂದು ದೃಶ್ಯವಿಲ್ಲ. ಒಟ್ಟಾರೆ ತಂಡವನ್ನು ಪರಿಶೀಲಿಸಿದರೆ ಬಹುತೇಕರು ಪಂಜಾಬ್‌ನವರು, ಪಕ್ಕದ ಹರಿಯಾಣದವರು ಇದ್ದಾರೆ. ಈಶಾನ್ಯ ರಾಜ್ಯಗಳಲ್ಲೂ ಈಗ ಹಾಕಿ ಆಟಗಾರರು ಹುಟ್ಟಿಕೊಂಡಿದ್ದಾರೆ. ಅಷ್ಟು ಬಿಟ್ಟರೆ ಉಳಿದೆಲ್ಲ ರಾಜ್ಯಗಳು ಹಾಕಿ ವಿಚಾರದಲ್ಲಿ ಮೌನ!
ಕ್ರಿಕೆಟ್ ಭಾರತದಲ್ಲಿ ಬೆಳೆದಿರುವುದೇ ಅದು ದೇಶದ ಮೂಲೆಮೂಲೆಗೆ ತಲುಪಿರುವುದರಿಂದ, ಆಟಗಾರರಿಗೆ ಬೇಕಾದ ಸೌಲಭ್ಯಗಳು ಸಿಗುತ್ತಿರುವುದರಿಂದ. ಹಾಕಿಯಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಕ್ರೀಡೆ ಜನಪ್ರಿಯವಾದಾಗ ಅದನ್ನು ಆಯ್ದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಆಗ ತನ್ನಿಂತಾನೇ ಆಯ್ಕೆಗೆ ಹೆಚ್ಚು ಆಟಗಾರರು ಸಿಗುತ್ತಾರೆ. ಈಗ ಆಯ್ಕೆ ಮಾಡಲು ಪ್ರತಿಭಾವಂತ ಹಾಕಿ ಪಟುಗಳ ಸಂಖ್ಯೆಯೇ ಕಡಿಮೆಯಿದೆ. ಕ್ರಿಕೆಟ್‌ನಂತೆ ಒಂದೊಂದು ಸ್ಥಾನಕ್ಕೆ ಐದು, ಆರು ಮಂದಿ ಸ್ಪರ್ಧಿಸುವ ಪರಿಸ್ಥಿತಿಯಿಲ್ಲ. ಈ ಕೊರತೆಯನ್ನು ಮೊದಲು ಹಾಕಿ ಇಂಡಿಯಾ ನೀಗಿಕೊಳ್ಳಬೇಕು.