ಮಲ್ಪೆ: ಪೊಲೀಸರು ಜನಸ್ನೇಹಿಯಾಗಬೇಕು, ಪೊಲೀಸ್ ವ್ಯವಸ್ಥೆ ಜನಸಮುದಾಯದತ್ತ ಚಲಿಸಬೇಕು ಎಂಬ ಹಿನ್ನೆಲೆಯಲ್ಲಿ ಸರಕಾರ ಸುಧಾರಿತ ಗಸ್ತು ವ್ಯವಸ್ಥೆ (ಬೀಟ್) ಜಾರಿಗೊಳಿಸಿ ಆದೇಶ ನೀಡಿದ್ದು ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದು ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಹೇಳಿದರು.
ಅವರು ಗುರುವಾರ ಮಲ್ಪೆ ಪೊಲೀಸ್ ಠಾಣಾ ವತಿಯಿಂದ ಮಲ್ಪೆ ಠಾಣಾ ಸರಹದ್ದಿನ ಉಪಗ್ರಾಮ ಗಸ್ತಿನ ನಾಗರಿಕ ಸಮಿತಿಯ ಸಭೆಯಲ್ಲಿ ಮಾತನಾಡಿದರು.
ಠಾಣೆಗಳಿಗೆ ಠಾಣಾಧಿಕಾರಿಗಳು ಇರುವಂತೆ ಗ್ರಾಮದ ಒಂದು ಪ್ರದೇಶಕ್ಕೆ ಒಂದು ಪೊಲೀಸ್ ಇರುತ್ತಾರೆ. ಆಯಾ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು, ಅಪರಾಧ ಕೃತ್ಯಗಳು ನಡೆದರೆ ಇವೆಲ್ಲದಕ್ಕೂ ಆಯಾ ಪ್ರದೇಶಕ್ಕೆ ನೇಮಕವಾಗಿ ಪೊಲೀಸ್ ಪೇದೆ ಅಥವಾ ಹೆಡ್ ಕಾನ್ಸ್‌ಸ್ಟೆಬಲ್ ಜವಾಬ್ದಾರಿ ಯಾಗಿರು ತ್ತಾರೆ. ಬೀಟ್‌ನಲ್ಲಿರುವ ಸಾರ್ವಜನಿಕರು ಮತ್ತು ಪೊಲೀಸ್ ಠಾಣೆಯ ನಡುವೆ ಬೀಟ್‌ಗೆ ನೇಮಕಗೊಂಡ ಸಿಬಂದಿ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸಲಿದ್ದು ಇದರಿಂದ ಸಾರ್ವಜನಿಕರು ಮತ್ತು ಪೊಲೀಸ್ ನಡುವೆ ಬಾಂಧವ್ಯ ವೃದ್ದಿಯಾಗಲಿದೆ ಎಂದರು.
ಸಚಿನ್ ಬಡಾನಿಡಿಯೂರು, ಶರತ್ ಬೈಲಕರೆ, ಲಕ್ಷ್ಮೀಶ್, ಸುರೇಶ್ ಬಂಗೇರ ಗ್ರಾಮದ ಕೆಲವೊಂದು ಸಮಸ್ಯೆಗಳು ಹಾಗೂ ಸಲಹೆಗಳನ್ನು ನೀಡಿದರು.
ಪ್ರೊಬೇಶನರಿ ಠಾಣಾಧಿಕಾರಿ ಮಧು ಉಪಸ್ಥಿತರಿದ್ದರು.ಮಲ್ಪೆ ಪೊಲೀಸ್ ಠಾಣಾಧಿಕಾರಿ ದಾಮೋದರ್ ಸ್ವಾಗತಿಸಿ ವಂದಿಸಿದರು.