Advertisement

ಬ್ರಹ್ಮಾವರ ಸಂತೆ ಮಾರುಕಟ್ಟೆ ಸೌಲಭ್ಯದೊಂದಿಗೆ ವಿಸ್ತರಣೆ ಅವಶ್ಯ

12:38 AM Mar 03, 2020 | Sriram |

ಬ್ರಹ್ಮಾವರ: ತಾಲೂಕು ಕೇಂದ್ರವಾಗಿರುವ ಬ್ರಹ್ಮಾವರದಲ್ಲಿ ಸೋಮ ವಾರ ವಾರದ ಸಂತೆಗೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಮಾರುಕಟ್ಟೆಯು ಸೌಲಭ್ಯಗಳೊಂದಿಗೆ ವಿಸ್ತರಣೆ ನಿರೀಕ್ಷೆಯಲ್ಲಿದೆ.

Advertisement

ಪ್ರಸ್ತುತ ರಸ್ತೆ ಬದಿಯಲ್ಲೇ ಹಲವು ಮಂದಿ ಹಣ್ಣು, ತರಕಾರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಜತೆಗೆ ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ.

ಟಾರ್ಪಲ್‌ ಗತಿ
ಸುಸಜ್ಜಿತ ಕಟ್ಟಡವಿಲ್ಲದೆ ಬಹುತೇಕ ಮಂದಿ ಟಾರ್ಪಲ್‌ ಅಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಖರೀದಿದಾರರು ಹಾಗೂ ವ್ಯಾಪಾರಿಗಳ ಗೋಳು ಹೇಳತೀರದು. ಈ ನಿಟ್ಟನಲ್ಲಿ ವ್ಯವಸ್ಥಿತ ಕಟ್ಟಡದ ಅಗತ್ಯವಿದೆ.

ವಿಸ್ತರಣೆ ಅಗತ್ಯ
ಪ್ರಸ್ತುತ ವಾರದ ಸಂತೆಗೆ ಸುಮಾರು 150 ಮಂದಿ ವ್ಯಾಪಾರಸ್ಥರು, 3,000ಕ್ಕೂ ಮಿಕ್ಕಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಸ್ಥಳಾವಕಾಶ ಕೊರತೆಯಾಗುತ್ತಿದ್ದು ವಿಸ್ತರಣೆಗೊಳಿಸುವುದು ಅನಿವಾರ್ಯವಾಗಿದೆ.

ಪ್ರಸ್ತುತ ಎಲ್ಲೆಂದರಲ್ಲಿ ಅಂಗಡಿ ಹಾಕಿಕೊಂಡು ವ್ಯವಹಾರ ಮಾಡಲಾಗುತ್ತಿದೆ. ಇದರ ಬದಲಾಗಿ ಹಣ್ಣುಗಳ ಅಂಗಡಿಗಳು, ತರಕಾರಿ ವ್ಯಾಪಾರಸ್ಥರು ಸೇರಿದಂತೆ ಒಂದೊಂದು ವಿಭಾಗದವರು ಒಂದೇ ಕಡೆ ವ್ಯವಸ್ಥಿತವಾಗಿ ಇದ್ದರೆ ಜಾಗದ ಉಳಿತಾಯವೂ ಆಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಮೂಲ ಕಟ್ಟಡ ಅನಾಥ
ಬ್ರಹ್ಮಾವರ ಮಾರುಕಟ್ಟೆಯ ಮೂಲ ಕಟ್ಟಡದಲ್ಲಿ ಒಣ ಮೀನು, ಒಣ ಮೆಣಸು ಮಾರಾಟಗಾರರು ವ್ಯವಹರಿಸುತ್ತಿದ್ದು, ಇತ್ತೀಚೆಗೆಎತ್ತರದ ಆ ಜಾಗಕ್ಕೆ ಖರೀದಿಗಾಗಿ ತೆರಳುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವ್ಯಾಪಾರಸ್ಥರು ಅನಿವಾರ್ಯವಾಗಿ ಬೇರೆ ಸ್ಥಳಕ್ಕೆ ಬೇಡಿಕೆ ಇಡುತ್ತಿದ್ದಾರೆ.

ಪ್ರಯತ್ನಿಸಿದ್ದೇವೆ
ರಸ್ತೆ ಉತ್ತರ ದಿಕ್ಕಿನಲ್ಲಿ ಕ್ರೀಡಾಂಗಣದ ಕಂಪೌಂಡ್‌ ಬದಿ ಸ್ವಚ್ಚಗೊಳಿಸಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಮತ್ತೆ ರಸ್ತೆ ಬದಿಯೇ ಸಾಮಗ್ರಿ ಹಾಕಿ ಕೊಳ್ಳುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ಹೊಸ ಕಟ್ಟಡಕ್ಕೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡುತ್ತೇವೆ.
-ನವೀನ್‌ಚಂದ್ರ ನಾಯಕ್‌, ಅಧ್ಯಕ್ಷರು, ವಾರಂಬಳ್ಳಿ ಗ್ರಾ.ಪಂ.

ವ್ಯವಸ್ಥೆ ಅಗತ್ಯ
ಮಾಡಿನ ವ್ಯವಸ್ಥೆ ಮಾಡುವುದರಿಂದ ಎಲ್ಲಾ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಅನುಕೂಲವಾಗುತ್ತದೆ. ಮಾರುಕಟ್ಟೆ ಒಳಗಡೆ ಉತ್ತಮ ವ್ಯವಸ್ಥೆ ಕಲ್ಪಿಸುವುದರಿಂದ ರಸ್ತೆ ಬದಿ ಮಾರಾಟ ತಪ್ಪಿಸಲು ಸಾಧ್ಯ.
-ಸಂತೋಷ್‌ ಹಂದಾಡಿ, ಸುಂಕ ವಸೂಲಿಗಾರರು

Advertisement

Udayavani is now on Telegram. Click here to join our channel and stay updated with the latest news.

Next