Advertisement

ಮಕ್ಕಳ ಹಕ್ಕಿನ ಸಮರ್ಪಕ ನಿರ್ವಹಣೆ ಅಗತ್ಯ

02:37 PM Feb 24, 2017 | Team Udayavani |

ಕಲಬುರಗಿ: ಮಕ್ಕಳ ಹಕ್ಕುಗಳಿಗಾಗಿ ಸರಕಾರ ರೂಪಿಸುವ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದಾಗ ಮಾತ್ರವೇ ಮಕ್ಕಳ ರಕ್ಷಣೆ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್‌ ಹೇಳಿದರು. 

Advertisement

ಗುರುವಾರ ಇಲ್ಲಿನ ಇನ್‌ಸ್ಟಿಟ್ಯೂಟ್‌ ಆಫ್‌ ಇಂಜಿನಿಯರ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ  ಆಯೋಗ ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ಸಹಾಯವಾಣಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಿಮ್ಮ ಹಕ್ಕು ನಮ್ಮ ಧ್ವನಿ ಮಕ್ಕಳೊಂದಿಗೆ ಆಯೋಜಿಸಿದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಂವಿಧಾನಾತ್ಮಕವಾಗಿ ಮಕ್ಕಳ ರಕ್ಷಣೆಗಾಗಿ ಹಲವಾರು ಹಕ್ಕುಗಳನ್ನು ಒದಗಿಸಲಾಗಿದೆ. ಆದರೆ, ಅವೆಲ್ಲವೂ ಸರಿಯಾಗಿ ಜಾರಿಗೆ ತರಲು ಆಡಳಿತ ಮತ್ತು ಅಧಿಕಾರ ವರ್ಗದಿಂದ ಸಾಧ್ಯವಾಗದೇ ಇರುವುದರಿಂದ ಸರ್ವಾಂಗೀಣ ವಿಕಾಸ ಸಾಧ್ಯವಾಗಿಲ್ಲ ಎಂದರು. 

ಇಂತಹ ಸಂವಾದ ಕಾರ್ಯಕ್ರಮವನ್ನು ಮೇಲಿಂದ ಮೇಲೆ ನಡೆಸವುದರಿಂದ ಮಕ್ಕಳಿಗೂ ಅವರ ಕರ್ತವ್ಯ ಮತ್ತು ಹಕ್ಕುಗಳ ಕುರಿತು ಜಾಗೃತಿ ಮೂಡುತ್ತದೆ. ಅಲ್ಲದೆ, ಅಧಿಕಾರಿ ವರ್ಗದೊಂದಿಗೆ ಮಾತನಾಡುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಉತ್ತಮ ಮಾರ್ಗ ರೂಪುಗೊಳ್ಳುತ್ತದೆ ಎಂದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳಾ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೋರ್ಲಪತಿ, ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು, ಸಿ.ಜೆ.ಎಂ. ಹಾಗೂ ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಎಸ್‌.ಎಲ್‌. ಚವ್ಹಾಣ,

Advertisement

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೆಹಬೂಬ ಪಾಷಾ ಕಾರಟಗಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್‌. ರಾಜಪ್ಪ ಮುಖ್ಯ ಅತಿಥಿಗಳಾಗಿ, ಯುನಿಸೆಫ್‌ ಸಂಸ್ಥೆಯ ಸುದರ್ಶನ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು, ಶಾಲೆಗಳಲ್ಲಿನ ಶೌಚಾಲಯ ಕೊರತೆ, ಅದರಲ್ಲೂ ಬಾಲಕಿಯರು ಅನುಭವಿಸುವ ಹೆಚ್ಚಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಇವುಗಳಿಗೆ ಉತ್ತರ ಕೊಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ತಡಕಾಡಿದರು. 

ಕಂಪ್ಯೂಟರ್‌ ಕೊರತೆ, ಸಕಾಲದಲ್ಲಿ ಬೈಸಿಕಲ್‌ ನೀಡದಿರುವುದು, ಕುಡಿಯುವ ನೀರಿನ ಸಮಸ್ಯೆ, ಶಾಲಾ ಆವರಣ, ಆಟದ ಮೈದಾನ ಇಲ್ಲದಿರುವ ಹಾಗೂ ಶಾಲಾ ಸಮೀಪದ ಸರಾಯಿ ಅಂಗಡಿ ಸ್ಥಳಾಂತರ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಎತ್ತಿದರು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಡಿಯಲ್ಲಿ ನಡೆಯುವ ವಿದ್ಯಾರ್ಥಿ ನಿಲಯಗಳಲ್ಲಿನ ಸಮಸ್ಯೆಗಳು ಮುಖ್ಯವಾಗಿ ಅಧಿಕಾರಿಗಳ ಗಮನ ಸೆಳೆಯಿತು. 

ಅಲ್ಲದೆ, ಬೇಸಿಗೆಯಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಜಿಲ್ಲಾಡಳಿತದ ಗಮನಕ್ಕೆ ತಂದರು. ಆದರೆ, ಸಭೆಯಲ್ಲಿ ಹಾಜರಿದ್ದ ಬಹುತೇಕ ಅಧಿಕಾರಿಗಳಿಗೆ ತಮ್ಮ ಇಲಾಖೆಯಲ್ಲಿ ನಡೆಯುತ್ತಿರುವ ಅದ್ವಾನಗಳ ಕುರಿತು ಮಾಹಿತಿಯೇ ಇರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರಶ್ನೆ ಕೇಳಿದ ಬಳಿಕ ಉತ್ತರ ಸಿಗುವುದು ಖಾತರಿ ಆಗದೆ ಸುಮ್ಮನೇ ಅಧಿಕಾರಿಗಳ ಮುಖ ನೋಡುವುದು ಮಾಮೂಲಿಯಾಗಿತು.

Advertisement

Udayavani is now on Telegram. Click here to join our channel and stay updated with the latest news.

Next