ಬೈಂದೂರು: ಬೇಸಗೆ ಬಿಸಿಲು ಹೆಚ್ಚುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿರುತ್ತದೆ. ಈ ಸಂದರ್ಭ ಇರುವ ನೀರಿನ ಮೂಲಗಳು ಸುಸ್ಥಿಯಲ್ಲಿರದಿದ್ದರೆ ಏನೆಲ್ಲ ಸಮಸ್ಯೆಗಳಾಗುತ್ತವೆ ಎನ್ನುವುದಕ್ಕೆ ಬೈಂದೂರು ತಾಲೂಕಿನ ಪಡುವರಿ ಗ್ರಾಮವೇ ಒಂದು ಉದಾಹರಣೆ.
ಇಲ್ಲಿನ ಸುಮಾರು ನೂರಕ್ಕೂ ಅಧಿಕ ಕುಟುಂಬಗಳು ಗ್ರಾಮದ ಹೇನ್‌ಬೇರು ಕೆರೆಯನ್ನೇ ನಂಬಿ ಬದುಕುತ್ತಿವೆ. ರಾಷ್ಟ್ರೀಯ ಹೆದ್ದಾರಿಯ ಅನತಿ ದೂರದಲ್ಲಿ ಸುಮಾರು ಎರಡು ಎಕ್ರೆ ಪ್ರದೇಶದಲ್ಲಿ ಈ ಕೆರೆಯಿದ್ದು, ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಗ್ರಾಮದ ಸುತ್ತಮುತ್ತಲಿನ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ಕೆರೆಯಲ್ಲಿ ಈಗ ಹೂಳು ತುಂಬಿಕೊಂಡಿದ್ದು, ನಿರ್ವಹಣೆಯ ಕೊರತೆ ಎದುರಿಸುತ್ತಿದೆ.
ಬೇಸಗೆಯ ಅಂತ್ಯದವರೆಗೂ ನೀರಿರುತ್ತಿದ್ದ ಈ ಕೆರೆಯಿಂದ ಗ್ರಾಮದ ಕೃಷಿ ಭೂಮಿಗೆ ತೋಡಿನ ಮೂಲಕ ನೀರನ್ನು ಪೂರೈಸಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಸರಕಾರ 15 ಲಕ್ಷ ವೆಚ್ಚದಲ್ಲಿ ಕೆರೆಯ ಒಂದು ಪಾರ್ಶ್ವದ ದಂಡೆಯನ್ನು ದುರಸ್ಥಿ ಕೂಡ ಮಾಡಿತ್ತು. ಈ ಕೆರೆ ಅಭಿವೃದ್ಧಿಯಾದರೆ ಪಡುವರಿ ಗ್ರಾಮದ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.
ಸರಕಾರ ಕುಡಿಯುವ ನೀರು, ಪರಿಸರ ರಕ್ಷಣೆಗಾಗಿ ಹಳೆಯ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಆದರೆ ಅವುಗಳು ಗುತ್ತಿಗೆದಾರರನ್ನು ಕೇಂದ್ರೀಕರಿಸಿ ವಿನಿಯೋಗವಾಗಿವೆಯೇ ವಿನಾ ಇಂತಹ ಕೆರೆಗಳ ದುರಸ್ತಿಗೆ ಬಳಕೆಯಾಗಿಲ್ಲ. ಕೇವಲ ಕಟ್ಟಡ, ರಸ್ತೆ ಮಾತ್ರ ಅಭಿವೃದ್ಧಿಯಲ್ಲ. ಪರಿಸರಕ್ಕೆ ಪೂರಕವಾದ ಜಲಮೂಲಗಳ ಅಭಿವೃದ್ಧಿಗೂ ಗಮನ ನೀಡಬೇಕು. ಆಗ ಮಾತ್ರ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಗಮನಹರಿಸಿ
ಪಡುವರಿ ಗ್ರಾಮದ ಹೇನ್‌ಬೇರು ಕೆರೆ ಅತ್ಯಂತ ಪ್ರಾಚೀನವಾದುದು. ಇದರ ಅಭಿವೃದ್ಧಿಯಾದರೆ ಸಾವಿರಾರು ಎಕರೆ ಕೃಷಿಭೂಮಿ ಹಸಿರಾಗಲಿದೆ.ಪಂಚಾಯತ್ ಅನುದಾನದಲ್ಲಿ ಇದರ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಸರಕಾರ ಮತ್ತು ಇಲಾಖೆ ಈ ಬಗ್ಗೆ ಗಮನಹರಿಸಬೇಕು.
-ಗಣೇಶ ಹೆಬ್ಟಾರ್, ಪಿ.ಡಿ.ಒ. ಪಡುವರಿ ಗ್ರಾ.ಪಂ.
- ಅರುಣ ಕುಮಾರ್ ಶಿರೂರು