Advertisement

ಹಿಂಗಾರು ಬೆಳೆಗೆ ನೆರವಾಗಲಿದೆ ನವಿಲುತೀರ್ಥ ಜಲಾಶಯ

11:17 AM Aug 07, 2019 | Suhan S |

ನರಗುಂದ: ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ಬಿಡುವಿಲ್ಲದ ತುಂತುರು ಮಳೆ ಸುರಿಯುತ್ತಿದೆ. ಮುಂಗಾರು ಕಳೆದುಕೊಂಡಿದ್ದರೂ ಹಿಂಗಾರು ಅವಧಿಗೆ ನೆರವಾಗಲಿರುವ ಮುನವಳ್ಳಿ ನವಿಲುತೀರ್ಥ ಜಲಾಶಯ ಈ ಬಾರಿಯೂ ಮೈದುಂಬಿ ನಿಂತಿದ್ದು, ಅಚ್ಚುಕಟ್ಟು ಪ್ರದೇಶದ ಅನ್ನದಾತರಲ್ಲಿ ಆಶಾಕಿರಣ ಮೂಡಿಸಿದೆ.

Advertisement

ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ ವರದಾನವಾಗಿ 1973ರಲ್ಲಿ ನಿರ್ಮಾಣದಿಂದಲೂ ನವಿಲುತೀರ್ಥ ರೇಣುಕಾ ಜಲಾಶಯ ಭರ್ತಿಯಾಗಿರೋದೇ ವಿರಳ. ಕಳೆದ ವರ್ಷ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿತ್ತು. ಈ ಬಾರಿಯೂ ಕೃಷಿಗೆ ನೆರವಾಗಲಿದೆ. ಜಲಾಶಯ ಒಡಲು ತುಂಬಿ ನಿಂತಿದ್ದು, ರೈತರಲ್ಲಿ ಹರ್ಷದಾಯಕವಾಗಿದೆ.

ಮೈದುಂಬಿದ ಜಲಾಶಯ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ವರದಾನವಾದ ರೇಣುಕಾ ಜಲಾಶಯ ಈ ಸಾರಿ ಮೈದುಂಬಿ ನಿಂತಿದೆ. ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದಿದೆ. 2079.50 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಆ. 6ರಂದು 2074 ಅಡಿ ನೀರು ಸಂಗ್ರಹವಾಗಿದ್ದು, ಹಿಂಗಾರಿನಲ್ಲಿ ರೈತರಿಗೆ ನೆರವಾಗಲಿದೆ.

ಜಲಾಶಯ ವಿವರ: ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕು ಮುನವಳ್ಳಿ ಬಳಿ ಕಲ್ಲಿನ ಬಾಂಧಕಾಮಿನ ನವಿಲುತೀರ್ಥ ಅಣೆಕಟ್ಟು ಅಚ್ಚುಕಟ್ಟು ಪ್ರದೇಶದ ಜೀವನಾಡಿ. 154.53 ಮೀಟರ್‌ ಉದ್ದ, 40.23 ಮೀಟರ್‌ ಎತ್ತರದ ಜಲಾಶಯ 30.29 ಘನ ಮೀಟರ್‌ಗಳಷ್ಠಿದೆ. 1973ರಲ್ಲಿ ನಿರ್ಮಾಣವಾದ ಅಣೆಕಟ್ಟಿನ ಹಿನ್ನೀರಿನಲ್ಲಿ 13,578 ಹೆಕ್ಟೇರ್‌ ಪ್ರದೇಶ ಮುಳುಗಡೆಯಾಗಿದೆ.

ರೇಣುಕಾ ಜಲಾಶಯ ಎಡದಂಡೆ ಕಾಲುವೆ 150 ಕಿಮೀ, ಬಲದಂಡೆ ಕಾಲುವೆ 142 ಕಿಮೀ ಉದ್ದವಿದ್ದು, ಜಲಾಶಯ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಜನತೆ ಕುಡಿವ ನೀರಿನ ದಾಹ ನೀಗಿಸುತ್ತಿದೆ. ನಿರ್ಮಾಣ ಹಂತದಲ್ಲಿ 37.7 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಹೂಳು ತುಂಬಿದ ಕಾರಣ ಇಂದಿನ ಸಂಗ್ರಹ 25 ಟಿಎಂಸಿ ಅಡಿ ಮೀರದಾಗಿದೆ. 45 ವರ್ಷಗಳಲ್ಲಿ ಜಲಾಶಯ ಭರ್ತಿಯಾಗಿದ್ದೇ ಅಪರೂಪ. ಪ್ರಸಕ್ತ ಸಾಲಿನಲ್ಲಿ ಹಿಂಗಾರು ಕೃಷಿ ಚಟುವಟಿಕೆಗೆ ರೇಣುಕಾ ಜಲಾಶಯ ಭರವಸೆ ಮೂಡಿಸಿದೆ. ರೈತರ ಕೃಷಿಗೆ ಜಲಾಶಯ ನೀರು ವರವಾಗಲಿದೆ.

Advertisement

 

•ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next