ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಯುಡಿಎಫ್ ನೇತೃತ್ವದ ಮೈತ್ರಿಕೂಟ ಸರಕಾರ ಇದ್ದಾಗ ದೇಗುಲದ ಹೆಸರನ್ನು “ಶಬರಿಮಲೆ ಶ್ರೀ ಧರ್ಮಶಾಸ್ತಾ ದೇಗುಲ’ ಎಂದು ಬದಲಿಸಲು ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಮಂಡಳಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ. ಹಿಂದಿನ ಆಡಳಿತ ಮಂಡಳಿ ಯಾವುದೇ ಯೋಚನೆ ಮಾಡದೆ ಕೈಗೊಂಡಿದೆ ಎಂದು ಟೀಕಿಸಿದರು. ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧದ ಬಗ್ಗೆ ಉತ್ತರಿಸಿದ ಅವರು “ಸದ್ಯ 15-50ರ ವಯೋಮಿತಿಯ ಮಹಿಳೆಯರಿಗೆ ನಿಷೇಧವಿದೆ. ಅದು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. “ಧರ್ಮ ಶಾಸ್ತಾ’ ಹೆಸರಿನ ದೇಗುಲಗಳು ಕೇರಳದಲ್ಲಿವೆ. ಅವುಗಳಿಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಇದೆ. ಹೆಸರು ಬದಲಾಯಿಸುವು ದರಿಂದ ಸ್ತ್ರೀಯರ ಪ್ರವೇಶಕ್ಕೂ ಅವಕಾಶ ಸಿಗಲಿದೆ ಎಂದು ವಿಶ್ಲೇಷಿಸಲಾಗಿತ್ತು.