Advertisement

ಪ್ರೀತಿಯ ಹೆಸರಲಿ ಪೀಡನೆ

11:59 AM Feb 23, 2018 | Sharanya Alva |

ಸುಳ್ಯದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಹಾಡುಹಗಲೇ ಜನ ನಿಬಿಡ ರಸ್ತೆಯಲ್ಲಿ ಇರಿದು ಸಾಯಿಸಿದ ಘಟನೆ ಅತ್ಯಂತ ಅಘಾತಕಾರಿಯಾದದ್ದು. ಅವನ ಪ್ರೀತಿಯ ಕೋರಿಕೆಯನ್ನು ನಿರಾಕರಿಸಿದ್ದೇ ಈ ಅಮಾಯಕ ಯುವತಿ ಮಾಡಿದ ತಪ್ಪು. ಈ ಘಟನೆ ನಮ್ಮ ಕ್ಯಾಂಪಸ್‌ ಒಳಗಿನ ವಾತಾವರಣದ ಕುರಿತು ತುಸು ಗಂಭೀರವಾಗಿ ಚಿಂತಿಸುವಂತೆ ಮಾಡಿದೆ. ಕಾಲೇಜಿಗೆ ಹೋಗುವುದೇ ಮೋಜು ಮಾಡಲು ಎಂದು ಭಾವಿಸಿರುವ ಕೆಲವು ಯುವಕರಿದ್ದಾರೆ.

Advertisement

ಇವರಿಂದಾಗಿ ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಕಾಲೇಜಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಪ್ರಕರಣದಲ್ಲೂ ಆಗಿರುವುದು ಇದೇ. ಇನ್ನೂ ಬದುಕನ್ನು ಪೂರ್ತಿಯಾಗಿ ನೋಡಿರದಿದ್ದ ಯುವತಿ ಒಬ್ಬ ವಿಕೃತ ಮತಿಯ ಕೈಯಲ್ಲಿ ಕೊಲೆಯಾಗಿದ್ದಾಳೆ. ಇನ್ನೂ ಸರಿಯಾಗಿ ಮೀಸೆ ಮೂಡದ ಯುವಕನೂ ಈ ಮೂಲಕ ತನ್ನ ಬದುಕನ್ನು ತಾನೇ ಕೈಯಾರೆ ನಾಶ ಮಾಡಿಕೊಂಡಿದ್ದಾನೆ. ಕಾಲೇಜು ವಿದ್ಯಾರ್ಥಿ ಎಂದಾದ ಮೇಲೆ ಗರ್ಲ್ ಫ್ರೆಂಡ್‌ ಇರಲೇಬೇಕು ಎನ್ನುವ ಮನೋಭಾವ ಕೆಲವರದ್ದು. ಗರ್ಲ್ಫ್ರೆಂಡ್‌ ಸಂಪಾದಿಸಲು ಅವರು ಮಾಡುವ ಸಾಹಸಗಳು ಕೂಡಾ ವಿಚಿತ್ರವಾಗಿರುತ್ತವೆ.

ಇಂತಹ ಕೃತ್ಯಗಳಿಗೆ ಸಿನೆಮಾಗಳು ಕೂಡ ಧಾರಾಳ ಪ್ರೋತ್ಸಾಹ ನೀಡುತ್ತವೆ ಎನ್ನುವುದು ನಿಜ. ಕೆಲವೊಮ್ಮೆ ಕಾಲೇಜು ಹುಡುಗಿಯರೂ ಕೂಡಾ ಸಕಾರಾತ್ಮಕವಾಗಿ ಪ್ರತಿಸ್ಪಂದಿಸುವುದು ಗಂಡು ಹುಡುಗರಿಗೆ ಇನ್ನಷ್ಟು ಕುಮ್ಮಕ್ಕು ನೀಡುತ್ತದೆ. ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ವಾತಾವರಣ ನಿರ್ಮಿಸಬೇಕಾದ ಕಾಲೇಜುಗಳು ಇಂತಹ ಸಿನಿಮೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದು ಇಂದಿನ ದುರಂತ.
ಸುಳ್ಯದ ಪ್ರಕರಣದಲ್ಲಿ ಆರೋಪಿ ಯುವಕ ಕಳೆದ ಸುಮಾರು ನಾಲ್ಕು ತಿಂಗಳಿಂದ ಯುವತಿಯ ಬೆನ್ನು ಬಿದ್ದಿದ್ದ ಎನ್ನುತ್ತದೆ ವರದಿ.

ಹೀಗಿದ್ದರೂ ಯುವತಿ ಈ ವಿಷಯವನ್ನು ಯಾರ ಬಳಿಯೂ ಹೇಳಿರಲಿಲ್ಲ. ಇದೇ ಅವಳು ಮಾಡಿದ ದೊಡ್ಡ ತಪ್ಪು. ಒಂದು ವೇಳೆ ಪ್ರಾಂಶುಪಾಲರಿಗೆ ಅಥವಾ ಕನಿಷ್ಠ ತನ್ನ ಹೆತ್ತವರಿಗಾದರೂ ತಿಳಿಸಿದ್ದರೆ ಆಕೆಯ ಜೀವವಾದರೂ ಉಳಿಯುತ್ತಿತೇನೋ? ಈಕೆಎಂದಲ್ಲ ಈ ರೀತಿ ಬೆನ್ನು ಬಿದ್ದು ಪೀಡಿಸುವ ದುರುಳರ ವಿರುದ್ಧ ಹೆಚ್ಚಿನ ಮಹಿಳೆಯರು ದೂರು ನೀಡುವ  ಗೋಜಿಗೆ ಹೋಗುವುದಿಲ್ಲ. ಕೆಲವರು ನಾಲ್ಕು ದಿನ ಬೆನ್ನುಬಿದ್ದು ಮತ್ತೆ ಬಿಟ್ಟು ಹೋಗುತ್ತಾನೆ ಎಂದು ಭಾವಿಸಿ ಕಿರುಕುಳವನ್ನು ಮೌನವಾಗಿ ಸಹಿಸಿಕೊಳ್ಳುತ್ತಾರೆ.

ಯುವತಿಯರ ಈ ನಿರ್ಲಕ್ಷ್ಯವೇ ಹಲವು ಅನಾಹುತಗಳಿಗೆ ಕಾರಣವಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ದಿಲ್ಲಿಯಲ್ಲಿ ಹಾಡುಹಗಲೇ ಯುವಕನೊಬ್ಬ ಇದೇ ರೀತಿ ಯುವತಿಯನ್ನು ಜನರು ನೋಡುತ್ತಿರು ವಂತೆಯೇ ಇರಿದು ಸಾಯಿಸಿದ್ದ. ಚೆನ್ನೈಯಲ್ಲಿ ನಡೆದ ಸ್ವಾತಿ ಹತ್ಯೆ ಪ್ರಕರಣ ಹಲವು ದಿನ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕಾಲೇಜಿಗೆ ಹಾಗೂ ನೌಕರಿಗೆ ಹೋಗುವ ಶೇ. 80ರಷ್ಟು ಮಹಿಳೆಯರು ಪುಂಡರಿಂದ ಈ ರೀತಿಯ ಕಿರುಕುಳ ಅನುಭವಿಸುತ್ತಾರೆ ಎನ್ನುತ್ತಿದೆ ರಾಷ್ಟ್ರೀಯ ಅಪರಾಧ ಬ್ಯೂರೋದ ಅಂಕಿಅಂಶ. ಹೀಗೆ ಬೆನ್ನು ಬಿದ್ದ ಪ್ರೀತಿಸು ಎಂದು ಪೀಡಿಸುವ ಪಿಡುಗಿಗೆ ಇಂಗ್ಲೀಷ್‌ನಲ್ಲಿ ಸ್ಟಾಕಿಂಗ್‌ ಎನ್ನುತ್ತಾರೆ. ಇದು ಚುಡಾವಣೆಗಿಂತ ಗಂಭೀರವಾಗಿರುವ ಅಪರಾಧ. 

Advertisement

ಸ್ಟಾಕಿಂಗ್‌ ಮಾಡುವವನ ಅಂತಿಮ ಉದ್ದೇಶ ಪ್ರೀತಿಸುವುದಲ್ಲ, ಲೈಂಗಿಕ ಕಿರುಕುಳ ನೀಡುವುದು ಇಲ್ಲವೇ ಅತ್ಯಾಚಾರ ಎಸಗುವುದು ಆಗಿರುತ್ತದೆ ಎನ್ನುತ್ತಾರೆ ಮನೋವೈದ್ಯರು. ಮಹಿಳೆಯರು ಹೀಗೆ ಬೆನ್ನು ಬೀಳುವ ಗಂಡಸರ ಕುರಿತು ವಿಶೇಷ ಎಚ್ಚರಿಕೆ ವಹಿಸಬೇಕು. ಇದನ್ನು ಆರಂಭದಲ್ಲೇ ಕೊನೆಗಾಣಿಸದಿದ್ದರೆ ಗಂಭೀರ ಪರಿಣಾಮವಾಗಬಹುದು ಎನ್ನುವುದಕ್ಕೆ ಸುಳ್ಯದ ಘಟನೆಯೇ ಸಾಕ್ಷಿ. ಹೀಗೆ ಬೆನ್ನು ಬಿದ್ದು ಪೀಡಿಸುವವರಿಂದಾಗಿಯೇ ಕಾಲೇಜು ಅರ್ಧಕ್ಕೆ ಬಿಟ್ಟ ಹೆಣ್ಣು ಮಕ್ಕಳಿದ್ದಾರೆ, ನೌಕರಿಗೆ ಗುಡ್‌ಬೈ ಹೇಳಿದ ಮಹಿಳೆಯರಿದ್ದಾರೆ. ಯಾರಾದರೂ ಬೆನ್ನು ಬಿದ್ದಿದ್ದಾರೆ ಎಂದು ಅನಿಸಿದ ಕೂಡಲೇ ಅವರನ್ನು ತಡೆಯುವ ಪ್ರಯತ್ನ ಮಾಡಬೇಕು. ಸಾಧ್ಯವಾದರೆ ಅವನ ಫೋಟೊ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸುವ ಎಚ್ಚರಿಕೆ ನೀಡಿ. ಇಷ್ಟಕ್ಕೆ ಸುಮ್ಮನಾಗದಿದ್ದರೆ ಮನೆಯವರಿಗೆ ತಿಳಿಸಿ ಹಾಗೂ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿ. ಅಂದಹಾಗೆ ಸ್ಟಾಕಿಂಗ್‌ನ್ನು ಗಂಭೀರ ಅಪರಾಧವೆಂದು ಪರಿಗಣಿಸಿ ಇದಕ್ಕಾಗಿಯೇ 2013ರಲ್ಲಿ ಪ್ರತ್ಯೇಕ ಕಾನೂನು ರಚಿಸಲಾಗಿದೆ. 

ಈ ಕಾನೂನಿನಡಿಯಲ್ಲಿ ಸ್ಟಾಕಿಂಗ್‌ಗೆ 1ರಿಂದ 3 ವರ್ಷ ತನಕ ಜೈಲು ಶಿಕ್ಷೆ ಹಾಗೂ ದಂಡನೆ ವಿಧಿಸಲು ಅವಕಾಶವಿದೆ. ದಿಲ್ಲಿಯ ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ರಚಿಸಲ್ಪಟ್ಟ ಕಾನೂನು ಇದೆ. ಆದರೆ ಎಲ್ಲ ಕಾನೂನುಗಳಂತೆ ಈ ಕಾನೂನು ಕೂಡಾ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಈ ಕಾನೂನಿನಡಿ ದಾಖಲಾದ ಪ್ರಕರಣಗಳಲ್ಲಿ ಬರೀ ಶೇ. 20 ಕೇಸುಗಳು ಮಾತ್ರ ಇತ್ಯರ್ಥವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next